ಬೆಂಗಳೂರು(www.thenewzmirror.com): ಪ್ರಿಯಾಂಕ್ ಖರ್ಗೆ ಮಾತನ್ನು ಯಾರೂ ನಂಬುವುದಿಲ್ಲ; ಕೇಳುವುದೂ ಇಲ್ಲ. ಯಾಕೆಂದರೆ ಅದೊಂದು ಹಿಟ್ ಆಂಡ್ ರನ್ ಕೇಸ್. ಹಾಫ್ ಬೇಕ್‍ಡ್ ಕೇಸ್. ಆದರೆ, ಮುಖ್ಯಮಂತ್ರಿಗಳು ಹೇಳಿದಾಗ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬೇಡ್ಕರರ ಸೋಲಿಗೆ ಸಾವರ್ಕರ್ ಕಾರಣ ಎಂಬ ಮುಖ್ಯಮಂತ್ರಿಗಳ ಮಾತಿಗೆ ನಾನು ಸವಾಲೆಸೆದೆ. ಅದೇನಾದರೂ ಸತ್ಯವಾದರೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದೆ. ಇಲ್ಲವಾದರೆ, ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಿರಾ ಎಂದು ಕೇಳಿದ್ದೆ. ಸತ್ಯ ಗೊತ್ತಾಗಿ ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡರು ಎಂದು ತಿಳಿಸಿದರು.
ವಿಧಾನಸೌಧದ ಮೆಟ್ಟಿಲ ಮೇಲೆ ವೇದಿಕೆ ಸಜ್ಜು ಮಾಡಿ:
ಇದೆಲ್ಲವನ್ನೂ ನಂಬಿ ಎಐಸಿಸಿ ಅಧ್ಯಕ್ಷರಾದ ದೊಡ್ಡ ಖರ್ಗೆಯವರು ಮಗ ಹೇಳಿದ್ದನ್ನು ಸಬೂಬಾಗಿ ಇಟ್ಟುಕೊಂಡು ಅವರೂ ಅದನ್ನೇ ಗುಲ್ಬರ್ಗದಲ್ಲಿ ಹೇಳಿದ್ದರು. ಜೈರಾಂ ರಮೇಶ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ನಾಲ್ಕೂ ಜನರು ವಿಧಾನಸೌಧದ ಮೆಟ್ಟಿಲ ಮೇಲೆ ವೇದಿಕೆ ಸಜ್ಜು ಮಾಡಬೇಕು. ಈ ವಿಷಯದಲ್ಲಿ ಸಂವಾದಕ್ಕೆ ಸಿದ್ಧನಿದ್ದೇನೆ. ಕಾಂಗ್ರೆಸ್ಸಿನವರ ಬಳಿ ಇರುವ ಪತ್ರಗಳೇ ನನ್ನ ಬಳಿಯೂ ಇವೆ. ಈ ಪತ್ರಗಳನ್ನು ತೆಗೆದುಕೊಂಡೇ ನಾನು ಬರುವೆ. ನಿಮಗೆ ಬೇಕಾದವರನ್ನೆಲ್ಲ ಕರೆಯಿರಿ. ಇಂಗ್ಲಿಷ್ ವಿದ್ವಾಂಸರನ್ನೂ ಕರೆಯಿರಿ ಎಂದು ಆಹ್ವಾನಿಸಿದರು.
ಪ್ರಿಯಾಂಕ್ ಅಂಥ ಫೇಲ್ಡ್ ಗಿರಾಕಿಗಳಿಗೆ ವಿಶ್ಲೇಷಣೆ ಅಸಾಧ್ಯ. ಪಾಸಾದವರನ್ನು ಕರೆಯಿರಿ. ಇದನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಡುವೆ. ಇಲ್ಲವಾದರೆ ನೀವೂ ನಾಲ್ಕು ಜನರೂ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರು.
ಆತ್ಮೀಯರಾದ ಕಮಲ್ ಕಾಂತ್ ಅವರು ಬಾಬಾಸಾಹೇಬ ಡಾ.ಅಂಬೇಡ್ಕರರಿಗೆ 13 ಜನವರಿ 1952ರಲ್ಲಿ ಪತ್ರ ಬರೆದಿದ್ದರು. 5 ದಿನಗಳ ಬಳಿಕ ಬಾಬಾಸಾಹೇಬ ಡಾ.ಅಂಬೇಡ್ಕರರು ಉತ್ತರ ಕೊಟ್ಟಿದ್ದರು. ಇದಕ್ಕೂ ಮೊದಲು ಸೋಲಿನ ಆಘಾತದಿಂದ ಅಂಬೇಡ್ಕರರ ಆರೋಗ್ಯ ಹಾಳಾದುದನ್ನು ಡಾ. ಸವಿತಾ ಅಂಬೇಡ್ಕರರು ಪತ್ರ ಮೂಲಕ ಕಮಲ್ ಕಾಂತ್ ಅವರಿಗೆ ತಿಳಿಸಿದ್ದರು ಎಂದೂ ಗಮನ ಸೆಳೆದರು. ಕಾಂಗ್ರೆಸ್, ಸ್ಥಳೀಯ ಪ್ರಮುಖ ನಾಯಕ ಪಾಟೀಲ್, ಡಾಂಗೆ- ಇವರು ಸೇರಿ ನನ್ನ ಸೋಲನ್ನು ಅವರೇ ಮಾಡಿದ್ದಾರೆ ಎಂದು ಅಂಬೇಡ್ಕರರು ಪತ್ರದಲ್ಲಿ ತಿಳಿಸಿದ್ದಾಗಿ ಓದಿ ಹೇಳಿದರು. ಸಾವರ್ಕರ್ ಸೋಲಿಸಿದ್ದೆಂದು ಪತ್ರದಲ್ಲಿ ಹೇಳಿಲ್ಲ. ಶಿಕ್ಷಣ ಪಡೆಯಲು ಟ್ಯೂಷನ್‍ಗೆ ಹೋಗಿ ಎಂದು ವ್ಯಂಗ್ಯವಾಗಿ ನುಡಿದರು.
ನಾನು ಲಂಚ ಪಡೆದಿಲ್ಲ; ಕದ್ದಿದ್ದೂ ಅಲ್ಲ; ಮೇಲಿನ ಹೇಳಿಕೆಯನ್ನು ಅವರು ರುಜುವಾತು ಪಡಿಸಿದರೆ ನಾನು ದುಡಿದ ಹಣದಲ್ಲಿ 1 ಲಕ್ಷ ಒಂದು ರೂ. ಕೊಡುವುದಾಗಿ ಹೇಳಿದ್ದೇನೆ. ಆದರೆ, ಪ್ರಿಯಾಂಕ್ ಅವರು ನಾರಾಯಣಸ್ವಾಮಿ ಮಾತಿಗೆ ಬೆಲೆ ಇಲ್ಲ ಎಂದಿದ್ದಾರೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಸೋಲಿಗೆ ಸಾವರ್ಕರ್ ಕಾರಣ ಎಂಬ ಮಾತನ್ನು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಪ್ರಶ್ನಿಸಿದಾಗ ಅವರು ಉತ್ತರಿಸದೆ ಓಡಿ ಹೋದರು. ಬಳಿಕ ಪ್ರಿಯಾಂಕ್ ಖರ್ಗೆ ಕರ್ನಾಟಕದಲ್ಲೂ ಇದರ ಬಗ್ಗೆ ಸುಳ್ಳು ಹೇಳಲು ಪ್ರಾರಂಭಿಸಿದರು ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಆ ಪತ್ರವನ್ನು ಓದಿದರೋ ಇಲ್ಲವೋ ಗೊತ್ತಿಲ್ಲ. ಪ್ರಿಯಾಂಕ್ ಹೇಳಿದ್ದನ್ನೇ ನನ್ನ ಗುರುಗಳು ಹೇಳಿದ್ದಾರೆ ಎಂಬ ರೀತಿಯಲ್ಲಿ ಮುಖ್ಯಮಂತ್ರಿಗಳು ಅದನ್ನೇ ಓದಿಹೇಳಿದ್ದಾರೆ ಎಂದು ಆರೋಪಿಸಿದರು.