ಬಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ: ಮಾಜಿ ಸಂಸದ ಡಿ.ಕೆ. ಸುರೇಶ್

RELATED POSTS

ಬೆಂಗಳೂರು(www.thenewzmirror.com):“ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾ‌ನಕ್ಕೆ ಸ್ಪರ್ಧಿಸಿದ್ದೇನೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಿಳಿಸಿದರು.

ಬಮೂಲ್ ಕಚೇರಿಯಲ್ಲಿ ಶನಿವಾರ ನಾಮಪತ್ರ ಸಲ್ಲಿಕೆ ನಂತರ  ಮಾಧ್ಯಮಗಳ ಜತೆ ಮಾತನಾಡಿದ ಅವರು,“ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎಲ್ಲಾ ಹಿರಿಯ ನಾಯಕರು, ಶಾಸಕರು ಹಾಗೂ ಹಾಲು ಉತ್ಪಾದಕರ ಸಲಹೆ ಹಾಗೂ ಪಕ್ಷದ ನಾಯಕರ ಸೂಚನೆ ಮೇರೆಗೆ ಇಂದು ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕನಕಪುರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮುಖಂಡರ ತೀರ್ಮಾನ ಹಾಗೂ ಸಹಕಾರದೊಂದಿಗೆ ನಾಮಪತ್ರ ಸಲ್ಲಿಸಲಾಗಿದೆ” ಎಂದು ತಿಳಿಸಿದರು.

ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ‌ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ” ಎಂದರು.

ಮುಂದೆ ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಅಲಂಕರಿಸುವ ಲೆಕ್ಕಾಚಾರದೊಂದಿಗೆ ನಿಮ್ಮ ನಾಮಪತ್ರ ಕುತೂಹಲ ಮೂಡಿಸಿದೆ ಎಂದು ಕೇಳಿದಾಗ, “ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಸೇರುವ ಎಲ್ಲಾ ತಾಲೂಕುಗಳು ಹಾಲು ಉತ್ಪಾದನೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಅನೇಕ ರೈತರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಲು ಹಾಗೂ ರೇಷ್ಮೆ ನಮ್ಮ ರೈತರ ಜೀವನಾಡಿ. ಇವೆರಡಕ್ಕೂ ನ್ಯಾಯ ಕೊಡಿಸುವುದು ಒಕ್ಕೂಟಕ್ಕೆ ಸೇರಿದ ಎಲ್ಲಾ ನಾಯಕರ ಅಭಿಪ್ರಾಯ. ಅವರ ತೀರ್ಮಾನದಂತೆ ಅರ್ಜಿ ಸಲ್ಲಿಸಿದ್ದೇನೆ” ಎಂದರು.

ನಿಮ್ಮ ಸ್ಪರ್ಧೆಯಿಂದ ಡಿ.ಕೆ ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂದು ಬಿಂಬಿತವಾಗುತ್ತಿದೆ ಎಂದು ಕೇಳಿದಾಗ, “ಚರ್ಚೆ ಮಾಡುವವರು ಯಾವ ರೀತಿ ಬೇಕಾದರೂ ಚರ್ಚೆ ಮಾಡುತ್ತಾರೆ. ನಮ್ಮ ಉದ್ದೇಶ ರೈತರ ಹಿತ ಕಾಪಾಡುವುದು. ಕ್ಷೀರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರಬೇಕು ಎಂಬ ರೈತರ ಇಚ್ಛೆಗೆ ಕೆಲಸ ಮಾಡಬೇಕು. ಅದನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ” ಎಂದರು.

ನಿಮ್ಮ ವಿರುದ್ಧ ಅಭ್ಯರ್ಥಿ ಹಾಕುವ ಬಗ್ಗೆ ರಾಮನಗರದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದು ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ಒಪ್ಪದ ನೀವು ಈಗ ನಿರ್ದೇಶಕ ಸ್ಥಾನಕ್ಕೆ ಒಪ್ಪಿರುವುದು ಕುತೂಹಲಕ್ಕೆ ಕಾರಣವಾಗಿ ಎಂದು ಕೇಳಿದಾಗ, “ಜಿಲ್ಲೆಯ ಶಾಸಕರು, ಮಾಜಿ ನಿರ್ದೇಶಕರು, ಅಧ್ಯಕ್ಷರುಗಳು, ಅನೇಕ‌ ಜಿಲ್ಲೆಯ ನಾಯಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ನಾನು ಅವರ ಮಾತುಗಳಿಗೆ ಪಕ್ಷದ ಕಾರ್ಯಕರ್ತನಾಗಿ ತಲೆಬಾಗಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಸ್ವೀಕಾರ ಮಾಡಿದ್ದೇನೆ, ಕಾದು ನೋಡೋಣ” ಎಂದರು.

ಹಾಲು ಉತ್ಪಾದಿಸುವ ರೈತರ ಬದುಕಿಗೆ ಕಾಯಕಲ್ಪ ನೀಡಬೇಕು:

ನೀವು ಬಯಸಿದ್ದರೆ ಪಕ್ಷದಲ್ಲಿ ದೊಡ್ಡ ಸ್ಥಾನಗಳೇ ಸಿಗುತ್ತಿದ್ದವು, ನೀವು ದಿಢೀರನೆ ಈ ಕಡೆ ಮುಖ ಮಾಡಿದ್ದೀರಿ ಎಂದು ಕೇಳಿದಾಗ, “ಸದ್ಯಕ್ಕೆ ನನಗೆ ಯಾವುದು ಬೇಡ, ನಾನು ಈಗ ಯಾವ ರೀತಿ ಕಾರ್ಯಕರ್ತರು, ಹಾಗೂ ಪಕ್ಷದ ಜತೆ ಕೆಲಸ ಮಾಡುತ್ತಿದ್ದೇನೋ ಅದೇ ರೀತಿ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಕಳೆದ ರಾತ್ರಿ 2 ಗಂಟೆವರೆಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದೆ. ಆದರೆ ಅವರ ಒತ್ತಾಸೆ, ಪಕ್ಷದ ಅಧ್ಯಕ್ಷರುಗಳು ಮನವಿ ಮಾಡಿದರು. ಡಿ.ಕೆ. ಶಿವಕುಮಾರ್ ಅವರು ಈ ಕ್ಷೇತ್ರದ ಭಾಗವಾಗಿರುವುದರಿಂದ ಎಲ್ಲರ ತೀರ್ಮಾನದಂತೆ ನಾನು ಅರ್ಜಿ ಸಲ್ಲಿಸಿದ್ದೇನೆ. ಇದು ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. 17 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿರುವ ರೈತರ ಬದುಕಿಗೆ ಕಾಯಕಲ್ಪ ನೀಡಲು ಈ ತೀರ್ಮಾನ ಮಾಡಲಾಗಿದೆ. ರಾಜ್ಯದ ಹಾಲು ಉತ್ಪಾದನೆಯಲ್ಲಿ ಶೇ.30ರಷ್ಟು ಈ ಒಕ್ಕೂಟದಿಂದಲೇ ಉತ್ಪಾದನೆಯಾಗುತ್ತಿದೆ. ಹೀಗಾಗಿ ಈ ಒಕ್ಕೂಟವನ್ನು ಇನ್ನಷ್ಟು ಬೆಳವಣಿಗೆ ಮಾಡಲು ಹಾಗೂ ರೈತರಿಗೆ ಅನುಕೂಲ ಮಾಡಿಕೊಡಲು ಅವಕಾಶಗಳಿವೆ. ಹೀಗಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಎಂದು ನನಗೆ ಒತ್ತಾಯ ಮಾಡಿದ್ದಾರೆ. ಈ ಸ್ಥಾನ ಚಿಕ್ಕದೋ ದೊಡ್ಡದೋ ಎಂಬುದಕ್ಕಿಂತ ರೈತರ ಬದುಕಿನಲ್ಲಿ ಹೇಗೆ ಬದಲಾವಣೆ ತರಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಿದ್ದೇನೆ. ನಮ್ಮ ನಾಯಕರು ಹಾಗೂ ಸರ್ಕಾರದ ಜತೆ ಚರ್ಚೆ ಮಾಡಿ ನನ್ನ ಕೈಲಾದ ಮಟ್ಟಿಗೆ ರೈತರಿಗೆ ನೆರವಾಗಲು ಬದ್ಧನಾಗಿದ್ದೇನೆ” ಎಂದರು.

ಡಿ.ಕೆ. ಶಿವಕುಮಾರ್ ಅವರು ಮುಂದಿನ ಸಿಎಂ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ, “ಸದ್ಯಕ್ಕೆ ಮಾನ್ಯ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆ ಇಲ್ಲ. ಕರ್ನಾಟಕದ ಜನರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮೇಲಿದೆ. ಈಗಾಗಲೇ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಲಾಗಿದೆ. ನಾವು ಕೊಟ್ಟಿರುವ ಭರವಸೆ ಈಡೇರಿಸಿ ಅಭಿವೃದ್ಧಿ ಕಡೆ ಮುಖ ಮಾಡಿ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

ಸೇವಾ ಮನೋಭಾವ ಇರಬೇಕು, ರಾಜಕೀಯ ಬೆರೆಸಬಾರದು:

ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಣದ ನಡುವೆ ಸ್ಪರ್ಧೆಯಾಗಿದೆ ಎಂದು ಕೇಳಿದಾಗ, “ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದವರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಯಾರ ಪರ ವಿರೋಧವಿಲ್ಲ. ಒಕ್ಕೂಟದ ಅಧ್ಯಕ್ಷ ಸ್ಥಾನ, ಚುನಾವಣೆ ಹಾಗೂ ಮತದಾನದ ಆಧಾರದ ಮೇಲೆ ನಡೆಯುತ್ತದೆ. ಅದರ ಆಧಾರದ ಮೇಲೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾರ ಬೆಂಬಲಿಗರು ಮುಂದಿದ್ದಾರೆ ಎಂದು ತೀರ್ಮಾನ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಇಲ್ಲ. ಸಹಕಾರ ಕ್ಷೇತ್ರ ಸೇವಾಮನೋಭಾವ ಇಟ್ಟುಕೊಂಡು ಕೆಲಸ ಮಾಡುವ ಕ್ಷೇತ್ರ. ಇದರಲ್ಲಿ ರಾಜಕೀಯ ಒಳ್ಳೆಯದಲ್ಲ. ಹಾಲಿನ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶವಾದರೆ ರೈತರ ಬದುಕಿಗೆ ಪೆಟ್ಟು ನೀಡುತ್ತದೆ. ಹೀಗಾಗಿ ಇಲ್ಲಿ ರಾಜಕೀಯ ಬೆರೆಸದೆ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣೆ ಗೆದ್ದ ಬಳಿಕ ನಮ್ಮ ಆಡಳಿತ ಮಂಡಳಿ ನಿರ್ದೇಶಕರು ಕೆಲಸ ಮಾಡಲಿದ್ದಾರೆ” ಎಂದು ತಿಳಿಸಿದರು.

ಸುಂದರ ನಗರ ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು:

ಗ್ರೇಟರ್ ಬೆಂಗಳೂರು ವಿಚಾರವಾಗಿ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳು ಟೀಕೆ ಮಾಡಿದರೆ ಮಾತ್ರ ಗೌರವ ಬರುತ್ತದೆ. ಅವರ ಎಲ್ಲಾ ಟೀಕೆಗಳನ್ನು, ವಿಚಾರಗಳನ್ನು, ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಸುಂದರ ನಗರ ನಿರ್ಮಾಣ ಮಾಡುತ್ತೇವೆ” ಎಂದು ತಿಳಿಸಿದರು.

ಅಶೋಕ್ ಅವರಿಗೆ ಯೋಗ್ಯತೆ, ಅರ್ಹತೆ ಇದೆ:

ಬಿಡದಿ ಟೌನ್ ಶಿಪ್ ಕುರಿತು ಆರ್.ಅಶೋಕ್ ಸೇರಿದಂತೆ ಅನೇಕರಿಂದ ನಿಮ್ಮ ಮೇಲೆ ಭೂಕಬಳಿಕೆ ಆರೋಪದ ಕುರಿತು ಕೇಳಿದಾಗ, “ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಅವರಿಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಯೋಗ್ಯತೆ ಮತ್ತು ಅರ್ಹತೆಯಿದೆ. ಒಂದು ವೇಳೆ ಇಲ್ಲ ಎಂದರೆ ನಾನು ಅವರಿಗೆ ಮಾಹಿತಿ ನೀಡುತ್ತೇನೆ. ಕಬಳಿಕೆ ಕುರಿತು ನಾನು ಮಾತನಾಡಬೇಕು ಎಂದರೆ ಉತ್ತರಹಳ್ಳಿಯ ಬಗ್ಗೆ ಮಾತನಾಡಬೇಕಾಗುತ್ತದೆ” ಎಂದರು.

ಕುಮಾರಸ್ವಾಮಿ ಆಶಯದಂತೆ ನಮ್ಮ ಕೆಲಸ:

ರೈತರ ವಿರೋಧದ ಬಗ್ಗೆ ಕೇಳಿದಾಗ, “ನಾವು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ಮಾಡಿದ್ದನ್ನು ಮುಂದುವರೆಸಲಾಗಿದೆ. ಕುಮಾರಸ್ವಾಮಿ ಅವರ ಆಶಯದಂತೆ ಉಪನಗರಗಳು ರಚನೆಯಾಗಬೇಕು ಎಂದು ಅವರದೇ ಸರ್ಕಾರದ ಅವಧಿಯಲ್ಲಿ ತೀರ್ಮಾನವಾಗಿತ್ತು. ಅದನ್ನು ನಾವು ಮುಂದುವರೆಸುತ್ತಿದ್ದೇವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ನಮ್ಮ ಪಕ್ಷದ ಉದ್ದೇಶ ಕೂಡ ಇದಾಗಿದೆ. ಉಪಮುಖ್ಯಮಂತ್ರಿಯವರು ಆ ಭಾಗದ ರೈತರಿಗೆ ಖಂಡಿತವಾಗಿ ನ್ಯಾಯ ಒದಗಿಸಿ‌ಕೊಡುತ್ತಾರೆ. ಇದು ನಮ್ಮ ಜವಾಬ್ದಾರಿ ಕೂಡ” ಎಂದು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist