ಯುದ್ದದ ಸಮಯದಲ್ಲಿ ಶಾಂತಿ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್ ಪಕ್ಷ, ಇದು ದೇಶಕ್ಕೆ ಮಾಡಿದ ಅಪಮಾನ: ಆರ್.ಅಶೋಕ

RELATED POSTS

ಬೆಂಗಳೂರು(www.thenewzmirror.com):ಶಾಂತಿ ಮಂತ್ರ ಜಪಿಸುವ ಕಾಂಗ್ರೆಸ್‌ ಪಕ್ಷ ಯಾರ ಪರ ಇದೆ? ಯುದ್ಧದ ಸಮಯದಲ್ಲಿ ಶಾಂತಿಯ ಮಂತ್ರ ಹೇಳುವ ಕರ್ನಾಟಕ ಕಾಂಗ್ರೆಸ್‌ ಸಂಪೂರ್ಣ ದಾರಿ ತಪ್ಪಿ ಹೋಗಿದೆ. ಇದು ದೇಶಕ್ಕೆ ಮಾಡಿದ ಅಪಮಾನ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು. 

ಬನಶಂಕರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಯೋಧರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಪಾಕಿಸ್ತಾನದ ನೆಲದಲ್ಲೂ ದಾಳಿ ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಮುಂಬೈಯಲ್ಲಿ ಉಗ್ರರ ದಾಳಿ ನಡೆಸಿದಾಗಲೇ ಇಂತಹ ಪ್ರತಿದಾಳಿ ಮಾಡಿದ್ದರೆ ಸಮಸ್ಯೆ ಅಂದೇ ಪರಿಹಾರವಾಗುತ್ತಿತ್ತು ಎಂದರು. 

ಇಂತಹ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷ ಶಾಂತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಉತ್ತರ ಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಯುದ್ಧ ವಿಮಾನಕ್ಕೆ ನಿಂಬೆ ಹಣ್ಣು ಕಟ್ಟಿ ವೀಡಿಯೋ ಮಾಡಿದ್ದಾರೆ. ಆದರೂ ಸಚಿವ ಜಮೀರ್‌ ಅಹ್ಮದ್‌ ಬಾಂಬ್‌ ಕಟ್ಟಿಕೊಂಡು ಹೋಗುತ್ತೇನೆ ಎನ್ನುತ್ತಾರೆ. ಕಳೆದ ಸಲ ಸರ್ಜಿಕಲ್‌ ಸ್ಟ್ರೈಕ್‌ ಆದಾಗ ಕಾಂಗ್ರೆಸ್‌ ನಾಯಕರು ದಾಖಲೆ ಕೇಳಿದ್ದರು. ಈಗ ಸಾಕ್ಷಿ ಕೇಳುವ ಮುನ್ನ ಎಲ್ಲ ಮಾಧ್ಯಮಗಳಲ್ಲಿ ಸಾಕ್ಷಿ ಬಂದಿದೆ. ಇನ್ನೂ ಕಾಂಗ್ರೆಸ್‌ ನಾಯಕರು ಸಾಕ್ಷಿ ಹುಡುಕುತ್ತಾರಾ? ಶಾಂತಿ ಮಂತ್ರ ಪಠಿಸುತ್ತಾರಾ ಎಂದು ಗೊತ್ತಿಲ್ಲ ಎಂದರು. 

 ಕಾಂಗ್ರೆಸ್‌ ದಾರಿ ತಪ್ಪಿದೆ:

 ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಬೆಂಬಲಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಾರೆ. ಕರ್ನಾಟಕ ಕಾಂಗ್ರೆಸ್ಸೇ ಬೇರೆ, ರಾಷ್ಟ್ರೀಯ ಕಾಂಗ್ರೆಸ್ಸೇ ಬೇರೆಯಾಗಿದೆ. ಜೈರಾಮ್‌ ರಮೇಶ್‌ ಅವರ ಎಚ್ಚರಿಕೆಗೆ ನಯಾ ಪೈಸೆ ಬೆಲೆ ನೀಡುತ್ತಿಲ್ಲ. ಶಾಂತಿ ಮಂತ್ರ ಜಪಿಸುವ ಕಾಂಗ್ರೆಸ್‌ ಯಾರ ಪರ ಇದೆ? ಇದು ದೇಶಕ್ಕೆ ಅಪಮಾನ. ಇನ್ನಾದರೂ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್‌ ಮುಖಂಡರ ವಿರುದ್ಧ ಕ್ರಮ ವಹಿಸಲಿ ಎಂದರು. 

ಪಾಕಿಸ್ತಾನದ ವಿರುದ್ಧ ಯುದ್ಧವಾದರೆ ಮುಸ್ಲಿಮರ ಮತ ಹೊರಟುಹೋಗುತ್ತದೆ ಎಂಬ ಚಿಂತೆ ಕಾಂಗ್ರೆಸ್‌ಗಿದೆ. ಪಾಕಿಸ್ತಾನಿ ಪ್ರಜೆಗಳನ್ನು ಎಲ್ಲ ರಾಜ್ಯಗಳು ಹೊರಗೆ ಕಳುಹಿಸುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಇನ್ನೂ ಹೊರಗೆ ಕಳುಹಿಸಿಲ್ಲ. ಕಾಂಗ್ರೆಸ್‌ನ ಟ್ವೀಟ್‌ನಲ್ಲಿ ಯೋಧರಿಗಾದರೂ ಅಭಿನಂದನೆ ಸಲ್ಲಿಸಬಹುದಿತ್ತು. ಎಲ್ಲಿಯವರೆಗೆ ಶಾಂತಿ ಮಂತ್ರವನ್ನು ಹೇಳಬೇಕು ಎಂದು ಕಾಂಗ್ರೆಸ್‌ ನಾಯಕರು ಸರಿಯಾಗಿ ತಿಳಿಸಲಿ ಎಂದರು. 

ಕೊನೆಯ ಆಯ್ಕೆ ಯುದ್ಧ ಎನ್ನುತ್ತಾರೆ. ಅಂದರೆ ಎಲ್ಲರೂ ಸತ್ತುಹೋದ ಬಳಿಕ ಸಚಿವ ದಿನೇಶ್‌ ಗುಂಡೂರಾವ್‌ ಅವರ ಕೈಗೆ ಬಂದೂಕು ಕೊಟ್ಟು ಕಳುಹಿಸಬೇಕು. ಸಚಿವ ಜಮೀರ್‌ ಅವರು ಬಾಂಬ್‌ ಇಟ್ಟುಕೊಂಡೂ ಹೋದರೂ ಅವರನ್ನು ಉಗ್ರರು ಸಾಯಿಸುವುದಿಲ್ಲ. ಭಾರತದೊಳಗೆ ಇರುವ ಪಾಕಿಸ್ತಾನಿಗಳನ್ನು ಸಚಿವ ಜಮೀರ್‌ ಮೊದಲು ಹೊಡೆಯಲಿ. ಕಾಂಗ್ರೆಸ್‌ ಕಚೇರಿಯಲ್ಲಿರುವ ಸ್ಲೀಪರ್‌ ಸೆಲ್‌ ಬಳಿ ಸಚಿವ ಜಮೀರ್‌ ಬಾಂಬ್‌ ಕಟ್ಟಿಕೊಂಡು ಹೋಗಲಿ ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆದರೆ ಈಗ ತಂತ್ರಗಾರಿಕೆಗಾಗಿ ಕುಂಕುಮ ಇಟ್ಟುಕೊಂಡಿದ್ದಾರೆ. ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆಯೇ ಇಲ್ಲ ಎಂದರು. 

ಶಾಸಕರ ಅಮಾನತು:

ಕಾಂಗ್ರೆಸ್‌ ಸರ್ಕಾರ ವಿಧಾಮಸಭೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಅನ್ಯಾಯ ಮಾಡಿದೆ. ಇದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ಪೀಕರ್‌ ಯು.ಟಿ.ಖಾದರ್‌ ಹೇಗೆ ಸದನ ನಡೆಸುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ. ನಾನು ಎಂಟು ಬಾರಿ ಫೋನ್‌ ಕರೆ ಮಾಡಿದರೂ ಆಮೇಲೆ ಬಾ ಎನ್ನುತ್ತಾರೆ. ಹಬ್ಬ ಇದೆ, ನಮಾಜ್‌ ಇದೆ ಎಂದು ಹೇಳುತ್ತಾರೆ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆಂದು ನನಗೆ ಅನ್ನಿಸುತ್ತಿಲ್ಲ ಎಂದರು. 

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ, ಫಾಜಿಲ್‌ ಕುಟುಂಬವೇ ಭಾಗಿಯಾಗಿದೆ ಎಂದು ಪೊಲೀಸರು ಹೇಳಿದ್ದರೆ, ಸ್ಪೀಕರ್‌ ಯು.ಟಿ.ಖಾದರ್‌ ಮಾಧ್ಯಮದೊಂದಿಗೆ ಮಾತನಾಡಿ ಕುಟುಂಬ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಒಂದು ಕೊಲೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸ್ಪೀಕರ್‌ ಅನ್ನು ನಾನು ನೋಡಿದ್ದು ಇದೇ ಮೊದಲು. ಈ ಕೊಲೆಗೂ ಯು.ಟಿ.ಖಾದರ್‌ ಅವರಿಗೂ ಏನು ಸಂಬಂಧ? ಇವರೇನು ಗೃಹ ಸಚಿವರಾ? ಇವರಿನ್ನೂ ಕಾಂಗ್ರೆಸ್‌ ಪಕ್ಷದೊಳಗೆ ಇದ್ದಾರೆ ಎಂದು ಟೀಕಿಸಿದರು.

ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಸರಿಯಾದ ತನಿಖೆ ನಡೆಸಲು ಮನವಿ ಮಾಡಲಾಗುವುದು. ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುವ ಕುರಿತು ಪೊಲೀಸರಿಗೆ ನಿರ್ದೇಶನ ನೀಡುವಂತೆಯೂ ಕೋರಲಾಗುವುದು ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist