ರಾಯಚೂರು(www.thenewzmirror.com): ಕಾಶ್ಮೀರದಲ್ಲಿ ನಡೆದ ಘಟನೆ ಬಗ್ಗೆ ಮಾತನಾಡುವ ನೈತಿಕತೆ ಅಥವಾ ಯೋಗ್ಯತೆ ಕಾಂಗ್ರೆಸ್ಸಿನವರಿಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ 28 ಜನರು ಬಲಿಯಾಗಿದ್ದು, ಜನರು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿಯವರು ಕೂಡ ವಿದೇಶ ಪ್ರವಾಸ ಮೊಟಕುಗೊಳಿಸಿ ವಾಪಸ್ ಬಂದಿದ್ದಾರೆ. ಅಮಿತ್ ಶಾ ಜೀ ಅವರೂ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಇದು ನಡೆದಿದ್ದು, ಕೇಂದ್ರ ಸರಕಾರ ಬಿಗಿಯಾದ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ ನಡೆದ ಘಟನೆ ಬಗ್ಗೆ ಮಾತನಾಡುವ ನೈತಿಕತೆ ಅಥವಾ ಯೋಗ್ಯತೆ ಕಾಂಗ್ರೆಸ್ಸಿನವರಿಗೆ ಇಲ್ಲ.ಹಿಂದೆ ಕಾಂಗ್ರೆಸ್ ಸರಕಾರವು ಕೇಂದ್ರದಲ್ಲಿ ಇದ್ದಾಗ ಯಾವ ರೀತಿ ವಾರಕ್ಕೊಮ್ಮೆ ಉಗ್ರಗಾಮಿ ಚಟುವಟಿಕೆ ನಡೆಯುತ್ತಿತ್ತು? ಹೇಗೆ ಹೆಣಗಳು ಉರುಳುತ್ತಿದ್ದವು? ಯೋಧರ ಪ್ರಾಣ ಬಲಿ ಆಗುತ್ತಿತ್ತು? ಎಂಬುದನ್ನು ನೋಡಿದ್ದೀರಿ. ಆದರೆ, ನರೇಂದ್ರ ಮೋದಿಜೀ ಅವರು ಪ್ರಧಾನಿಯಾದ ಬಳಿಕ ಕಾನೂನು- ಸುವ್ಯವಸ್ಥೆ ಕಾಪಾಡಿದ್ದು, ಅಭಿವೃದ್ಧಿ ನಡೆಸಿದ್ದನ್ನು ನೋಡಬೇಕು ಎಂದರು. ನಿನ್ನೆ ನಡೆದ ದುರ್ಘಟನೆ ಆಗಬಾರದಿತ್ತು ಎಂದು ತಿಳಿಸಿದರು.
ದೇಶದಲ್ಲಿ ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂಬುದಾಗಿ ಮುಖ್ಯಮಂತ್ರಿಗಳ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರಿಲ್ಲ ಎಂದು ತಿಳಿಸಿದರು. ಅಲ್ಪಸಂಖ್ಯಾತರ ಓಲೈಕೆ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಾಶೆಯೂ ಆಗಿದೆ. ಜನರು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯರ ಸರಕಾರದ ಬೆಲೆ ಏರಿಕೆ ಪರಿಣಾಮವಾಗಿ ರಾಜ್ಯದ ರೈತರು, ಬಡವರು ಸಂಕಷ್ಟದಲ್ಲಿದ್ದಾರೆ ಎಂದರು. 20 ತಿಂಗಳಿನಲ್ಲಿ ಹೊಸ ಅಭಿವೃದ್ಧಿ ಯೋಜನೆಗಳಿಗೆ ಹಣ ಕೊಟ್ಟಿಲ್ಲ ಎಂದು ಟೀಕಿಸಿದರು. ಇವೆಲ್ಲ ವಿಷಯಗಳೊಂದಿಗೆ ಬಿಜೆಪಿ ಜನಜಾಗೃತಿ ಮೂಡಿಸುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದರೂ ಅದರ ಸಂಪೂರ್ಣ ಹೊರೆಯನ್ನು ತೈಲ ಕಂಪೆನಿಗಳೇ ಭರಿಸುತ್ತಿವೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷ ಮರೆಮಾಚಿದೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು ಆಕ್ಷೇಪಿಸಿದರು.ಕೃಷ್ಣಾ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಅದಕ್ಕೂ ಹಣ ಕೊಡುತ್ತಿಲ್ಲ. ಅಭಿವೃದ್ಧಿಯೂ ಇಲ್ಲ; ಹಣ ಎಲ್ಲಿಗೆ ಹೋಗುತ್ತಿದೆ ಎಂದು ಕೇಳಿದರು. ಬಿಜೆಪಿ ಹೇಳಿದಂತೆ ಕಾಂಗ್ರೆಸ್ ಸರಕಾರವು ಹೈಕಮಾಂಡಿನ ಎಟಿಎಂ ಆದುದನ್ನು ಪುಷ್ಟೀಕರಿಸುವ ಮಾದರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ 150 ಕೋಟಿಗೂ ಹೆಚ್ಚು ಮೊತ್ತದ ಹಗರಣ ನಡೆದಿದೆ ಎಂದು ಟೀಕಿಸಿದರು.