ನವದೆಹಲಿ(www.thenewzmirror.com):ನಿಗಮ ಮಂಡಳಿಗಳ ನೇಮಕಾತಿ ಕುರಿತು ಹೈಕಮಾಂಡ್ ಜತೆ ನಡೆದ ಸಭೆ ಅಪೂರ್ಣಗೊಂಡಿದ್ದು,ಜುಲೈ 16 ರಂದು ಬೆಂಗಳೂರಿನಲ್ಲೇ ಸುರ್ಜೇವಾಲಾ ಸಮ್ಮುಖದಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾದರು. ನಂತರ ಮಾಧ್ಯಮಗಳೊಂದಿಗೆ ಮತಾಡಿದ ಸಿದ್ದರಾಮಯ್ಯ, ಬಾಕಿಯುಳಿದಿರುವ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಷಯವನ್ನು ಸುರ್ಜೇವಾಲಾ ಅವರೊಂದಿಗೆ ಚರ್ಚಿಸಲಾಯಿತು, ಅದರೆ ಚರ್ಚೆ ಅಪೂರ್ಣವಾಗಿದೆ; ಹಾಗಾಗೇ ಅವರು ಜುಲೈ 16 ರಂದು ಪುನಃ ಬೆಂಗಳೂರಿಗೆ ಬರಲಿದ್ದಾರೆ, ಅವರ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂಬುದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲೀ ಯಾವುದೂ ನಡೆಯುತ್ತಿಲ್ಲ.ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಗ್ಗೆ ಈಗಾಗಲೇ ನಮ್ಮ ಹೈಕಮಾಂಡ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಸ್ಪಷ್ಟನೆ ನೀಡಿದ್ದಾರೆ ಎಂದರು.