ಬೆಂಗಳೂರು(www.thenewzmirror.com): ರಾಜ್ಯವನ್ನು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಕ್ವಾಂಟಮ್ ಸಮ್ಮೇಳನಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮ್ಮೇಳನದ ತಯಾರಿಯ ಬಗ್ಗೆ ವಿಸ್ತ್ರುತ ಮಾಹಿತಿ ಪಡೆದುಕೊಂಡರು. ಕ್ವಾಂಟಮ್ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳು ನಮ್ಮ ದೈನಂದಿನ ಜೀವನದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿವೆ. ಕ್ವಾಂಟಮ್ ತಂತ್ರಜ್ಞಾನವು ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದೆ. ಕ್ವಾಂಟಮ್ ತಂತ್ರಜ್ಞಾನವು, ತಂತ್ರಜ್ಞಾನದಲ್ಲಿ ಸಾಧ್ಯವಿರುವ ಹೊಸ ಸಾಧ್ಯತೆಗಳನ್ನ ತಲುಪಲು ಸಹಾಯಕವಾಗಲಿದೆ, ಹೊಸ ಆವಿಷ್ಕಾರ ಹಾಗೂ ಅಭಿವೃದ್ದಿಗೂ ಕಾರಣವಾಗಲಿದೆ. ಈ ಪ್ರಮುಖ ಕ್ಷೇತ್ರದಲ್ಲಿ ನಮ್ಮ ನಾವೀನ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈಗಾಗಲೇ ಐಐಎಸ್ಸಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಕ್ವಾಂಟಮ್ ರಿಸರ್ಚ್ ಪಾರ್ಕ್ ಗೆ ಅಗತ್ಯ ಬೆಂಬಲ ನೀಡುತ್ತಿದೆ. ಕ್ವಾಂಟಮ್ ತಂತ್ರಜ್ಞಾನದ ಮೂಲಕ ಪ್ರಸ್ತುತ ಪಡಿಸಲಾಗಿರುವ ಅಗಾಧ ಅವಕಾಶಗಳನ್ನ ಉತ್ತಮವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ನಮ್ಮ ಜೀವನವನ್ನು ಸುಧಾರಿಸಲು, ಕೈಗಾರಿಕೆಗಳನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ಕ್ವಾಂಟಮ್ ತಂತ್ರಜ್ಞಾನದ ಸಾಮರ್ಥ್ಯವನ್ನು ಆವಿಷ್ಕರಿಸಲು, ಅಂತಿಮವಾಗಿ ಸಮಾಜಕ್ಕೆ ಅದರ ಪ್ರಯೋಜನವನ್ನು ನೀಡಲು ನಾವು ಕ್ವಾಂಟಮ್ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ದೇಶದ ಮೊದಲ ಕ್ವಾಂಟಮ್ ಸಮ್ಮೇಳನ ಇದಾಗಿದ್ದು ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
2025 ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ಕ್ವಾಂಟಮ್ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ. ಕ್ವಾಂಟಮ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ದೇಶಗಳೊಂದಿಗೆ ಸಂಪರ್ಕದಲ್ಲಿದ್ದು, ಜ್ಞಾನ ವಿನಿಮಯಕ್ಕೆ ಸಭೆಗೆ ಸಮಯಕ್ಕೆ ಮನವಿ ಮಾಡಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಿರ್ದೇಶನದಂತೆ ನಮ್ಮ ರಾಜ್ಯ ಕ್ವಾಂಟಮ್ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಉತ್ತೇಜಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಏಕ್‌ರೂಪ್ ಕೌರ್, ಕೆಸ್ಪೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು