ಬೆಂಗಳೂರು,(www.thenewzmirroe.com);
ಸಾರಿಗೆ ಇಲಾಖೆಯಲ್ಲಿ ನಡೀಯುತ್ತಿರುವ ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿದೆ. ಹಾಡ ಹಗಲೇ ಹಣದಾಸೆಗೆ ಬಿದ್ದು ಮೂರೇ ದಿನದಲ್ಲಿ ಲಕ್ಷಾಂತರ ರೂಪಾಯಿ ತನ್ನ ಜೇಬಿಗೆ ಇಳಿಸಿಕೊಂಡ ಅಧಿಕಾರಿಗೆ ಆಯುಕ್ತರು ತಕ್ಕ ಶಾಸ್ತಿ ಮಾಡಿದ್ದಾರೆ.
ಎಲೆಕ್ಟ್ತಾನಿಕ್ ಸಿಟಿ RTO ಕಚೇರಿ (KA 51) ಯಲ್ಲಿ ನೀವು ನಂಬೋಕೂ ಅಸಾಧ್ಯವಾಗದ ರೀತಿಯಲ್ಲಿ ಅಕ್ರಮ ನಡೆದಿದೆ. ಕೇವಲ ಮೂರೇ ದಿನದಲ್ಲಿ ಯಾರೂ ಊಹಿಸೋಕೂ ಸಾಧ್ಯವಾಗದ ಮಟ್ಟದಲ್ಕಿ ಡ್ರೈವಿಂಗ್ ಲೈಸನ್ಸ್ ವಿತರಣೆ ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ 2504 ಡಿಎಲ್ ನೀಡಲಾಗಿದೆ.
RTO ಕಚೇರಿಯಲ್ಲಿ ಡಿಎಲ್ ನೀಡಿಕೆಯಲ್ಲಿ ಆಗುತ್ತಿರುವ ಗೋಲ್ಮಾಲ್ ಅನ್ನ ಜಂಟಿ ಆಯುಕ್ತರ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಬಟಾಬಯಲಾಗಿದೆ. ನಿಯಮ ಉಲ್ಲಂಸಿ ಡಿಎಲ್ ವಿತರಿಸಿದ ಆರೋಪದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಜಿ.ಪಿ.ಕೃಷ್ಣಾನಂದ ಅವರನ್ನ ಅಮಾನತುಗೊಳಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಆದೇಶಿಸಿದ್ದಾರೆ.
RTO ಅಧಿಕಾರಿಗೆ ಗಮನಕ್ಕೆ ಬಂದಿಲ್ವಾ..?
ಸದ್ಯ ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಅವರಿಗೆ ತಮ್ಮಕಚೇರಿಯಲ್ಲಿ ಆಗುತ್ತಿರುವ ಅಕ್ರಮದ ಬಗ್ಗೆ ಅರಿವಿರಲಿಲ್ವಾ..? ಅರಿವಿದ್ದರೂ ಸುಮ್ಮನಿದ್ರಾ..? ಅಥವಾ ಅಕ್ರಮ ದಲ್ಲಿ ಪಾಲು ಪಡೆಯುತ್ತಿದ್ರಾ ಎಂಬ ಹಲವು ಅನುಮಾನಗಳು ಮೂಡುತ್ತಿವೆ. ಈ ಬಗ್ಗೆ thenewzmirror ಸೌಂದರ್ಯ ಅವರನ್ನ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆ ಅವರಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಕೃಷ್ಣಾನಂದ ಜತೆಗೆ ಇತರ ಅಧಿಕಾರಿಗಳೂ ಶಾಮೀಲು..?
ಎಲೆಕ್ಟ್ರಾನಿಕ್ ಸಿಟಿ ಕಚೇರಿಯಲ್ಲಿ ಡಿಎಲ್ ಅಕ್ರಮದ ಜತೆಗೆ ಇತರ ಅಕ್ರಮಗಳೂ ನಡೆದಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಇದಕ್ಕೆ ಕಚೇರಿಯಲ್ಲಿರುವ ಇತರ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನುವ ದಾಖಲೆ ಸಿಕ್ಕಿದೆ.
ಅಮಾನತು ಮಾಡಿ ಆದೇಶ ಹೊರಡಿಸಿದ್ದರೂ ARTO ಕೃಷ್ಣಾನಂದ KAT ಮೂಲಕ ತಡೆಯಾಜ್ಞೆ ತಂದಿದ್ದಾರೆ. ಅಷ್ಟೆ ಅಲ್ಲದೆ ತಡೆಯಾಜ್ಞೆ ಬಂದ ಸಂಜೆ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣಾನಂದ ರಿಂದ ಅನುಕೂಲ ಪಡೆದವರು ಸ್ವಯಂ ಪ್ರೇರಿತವಾಗಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಹಬ್ಬ ಮಾಡಿದ್ದಾರೆ.
ಡಿಎಲ್ ಅಕ್ರಮದ ವಿಚಾರದಲ್ಲಿ ಎಆರ್‌ಟಿಒ ಅಧಿಕಾರಿಯೊಬ್ಬರು ಅಮಾನತುಗೊಂಡಿರುವುದು ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲು ಎಂದು ವ್ಯಾಖ್ಯಾನ ಮಾಡುತ್ತಿದ್ದರೂ ಅದಕ್ಕೇ ಸೆಡ್ಡು ಹೊಡೆದ ಅಧಿಕಾರಿ ಆಯುಕ್ತರ ಆದೇಶದ ವಿರುದ್ಧವೇ ನಡೆದುಕೊಂಡಿದ್ದಾರೆ.
ಅಮಾನತು ಆದ ಮಾರನೇ ದಿನವೇ KAT ಯಿಂದ ಸ್ಟೇ ಪಡೆದಿದ್ದಾರೆ. ಆದರೂ ಎಲೆಕ್ಟ್ರಾನಿಕ್ ಸಿಟಿ RTO ಕಚೇರಿಯಲ್ಲಿ ಕೆಲಸ ಮಾಡೋಕೆ ಸಾಧ್ಯವಾಗುತ್ತಿಲ್ಲ. ಕಾರಣ ಆಯುಕ್ತರ ಸಹಿ ಇಲ್ಲದೆ ಅವರು ಹಳೆಕಚೇರಿಗೆ ಹೋಗುವಂತಿಲ್ಲ.
ಬೆಂಗಳೂರು ವ್ಯಾಪ್ತಿಯಲ್ಲಿ 10 ಸಾರಿಗೆ ಕಚೇರಿಗಳಿದ್ದರೂ ಹೆಚ್ಚು ಅಕ್ರಮನಡೆದಿರುವುದು ಎಲೆಕ್ಟ್ರಾನಿಕ್ ಸಿಟಿ ಕಚೇರಿಯಲ್ಲಿಯೇ ಅನ್ನೋ ದಾಖಲೆಗಳು thenewzmirror ಗೆ ಸಿಕ್ಕಿವೆ. ಎಲೆಕ್ಟ್ರಾನಿಕ್ಸ್ ಸಿಟಿ (ಕೆಎ51) ಆರ್‌ಟಿಒಗಳಲ್ಲಿ ಬೇಕಾಬಿಟ್ಟಿಯಾಗಿ ಡಿಎಲ್ ವಿತರಿಸಿರುವುದು ಬೆಳಕಿಗೆ ಬಂದಿದೆ. ಮೊದಲ ಹಂತದ ಪರಿಶೀಲನೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯಲ್ಲಿ ಅತಿಹೆಚ್ಚು ಡಿಎಲ್‌ಗಳು ನಿಯಮ ಬಾಹಿರವಾಗಿ ವಿತರಣೆಯಾಗಿರುವುದು ಜಂಟಿ ಆಯುಕ್ತರ ಪರಿಶೀಲನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕೃಷ್ಣಾನಂದ ಅವರನ್ನು ಅಮಾನತುಗೊಳಿಸಿ ಆಯುಕ್ತರು ಹೊರಡಿಸಿದ್ದರು.
ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿ ಲೀನ್ ಹುದ್ದೆಯಲ್ಲಿದ್ದ ಅವರನ್ನು ಧಾರವಾಡ (ಪಶ್ಚಿಮ) ಕಚೇರಿಗೆ ಸ್ಥಳಾಂತರಿಸಿದ್ದರೂ ಅಲ್ಲೂ ಕೆಲಸಕ್ಕೆ ಹಾಜರಾಗಿಲ್ಲ ಕೃಷ್ಣಾನಂದ. ಅದರ ಬದಲು ಕೇಂದ್ರಕಚೇರಿ, ಎಲೆಕ್ಟ್ರಾನಿಕ್ ಸಿಟಿ ಕಚೇರಿ ಓಡಾಡುತ್ತಲೇ ಕಾಲ ಹರಣ ಮಾಡುತ್ತಿದ್ದಾರೆ ಕೃಷ್ಣಾನಂದ.
ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯ ಕೆಲ ಅಧೀಕ್ಷಕರು ಹಾಗೂ ಕೇಸ್ ವರ್ಕರ್‌ಗಳು ಅಕ್ರಮ ಡಿಎಲ್ ವಿತರಣೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗಿದ್ದು, ಪರಿಶೀಲನೆ ಮುಂದುವರಿದಿದೆ.
ಹೇಗೆ ನಡೆಯುತ್ತಿತ್ತು ಅಕ್ರಮ..?
ಡ್ರೈವಿಂಗ್ ಸ್ಕೂಲ್‌ನ ಮಾಲೀಕರೊಬ್ಬರು ಡಿಎಲ್ ಮಾಡಿಕೊಡಲು ಡೀಲ್‌ಗಳನ್ನು ತಂದುಕೊಡುತ್ತಿದ್ದರು. ಅದಕ್ಕೆ ಕಚೇರಿ ಅಧಿಕಾರಿಗಳು ಅನುಮೋದನೆ ಕೊಡುತ್ತಿದ್ದರು. ಅಭ್ಯರ್ಥಿ ಇಲ್ಲದೆ, ಯಾವುದೇ ಟೆಸ್ಟ್ ಮಾಡದೆ ಒಂದು ಡಿಎಲ್ ಮಾಡಿಕೊಡಲು ಅಭ್ಯರ್ಥಿಯಿಂದ 10 ಸಾವಿರ ರೂ. ವಸೂಲಿ ಮಾಡಲಾಗುತ್ತಿತ್ತು. ಅದರಲ್ಲಿ 5 ಸಾವಿರ ರೂ. ಆರ್‌ಟಿಒ ಅಧಿಕಾರಿಗಳಿಗೆ ಕೊಟ್ಟರೆ ಶುಲ್ಕ ಪಾವತಿಸಿ, ಉಳಿದ ಹಣವನ್ನ ಏಜೆಂಟ್‌ಗಳೇ ಇಟ್ಟುಕೊಳ್ಳುತ್ತಿದ್ದರಂತೆ.
ಮೂರು ದಿನದಲ್ಲಿ ವಿತರಿಸಿದ ಡಿಎಲ್ ಗಳು
2022 ಡಿ.19ರಂದು 964 ಡಿಎಲ್
ಡಿ.20ರಂದು 979
ಡಿ.21ರಂದು 561 ಡಿಎಲ್ ಅನುಮೋದನೆ
ಟೆಸ್ಟ್ ಇಲ್ಲದೆ ನೀಡಿದ್ದಾರಂತೆ ಡಿಎಲ್..?!
ನಿಯಮಬದ್ಧವಾಗಿ ಪರೀಕ್ಷೆ ನಡೆಸದೆ ಡಿಲ್‌ಗಳನ್ನು ವಿತರಿಸಲಾಗಿದೆಯಂತೆ. ವಾಹನ ತಂತ್ರಾಂಶದಲ್ಲಿ ಡಿಎಲ್‌ಗೆ ನೀಡಿರುವ ಸ್ಲಾಟ್‌ಗಳನ್ನೂ ಕೂಡ ಬೇಕಾಬಿಟ್ಟಿಯಾಗಿ ನೀಡಿರುವುದು ಕಂಡುಬಂದಿದೆ. ಆದ್ದರಿಂದ ಡಿಎಲ್ ವಿಭಾಗದ ಮುಖ್ಯಸ್ಥರಾದ ಎಆರ್‌ಟಿಒ ಕೃಷ್ಣಾನಂದ ಅವರು ನಿಯಮದ ಪ್ರಕಾರ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ವಿವರಣೆ ಪಡೆದು ಮುಂದಿನ ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎಂದು ಜಂಟಿ ಆಯುಕ್ತರು ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಸಿದ್ದರಾಮಪ್ಪ ಅಮಾನತುಗೊಳಿಸಿದ್ದಾರೆ.
ಬೇರೆ ಕಚೇರಿಗಳಲ್ಲೂ ಇದೇ ಕಥೆ
ಎಲೆಕ್ಟ್ರಾನಿಕ್ಸ್‌ಸಿಟಿ ಕಚೇರಿ ಮಾತ್ರವಲ್ಲದೆ ಬೆಂಗಳೂರು ವ್ಯಾಪ್ತಿಯ ಇತರ ಕಚೇರಿಗಳಲ್ಲೂ ಡಿಎಲ್ ಗೋಲ್‌ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಎಲ್ಲ ಕಚೇರಿಗಳಿಗೂ ಆಯುಕ್ತರು ನೋಟಿಸ್ ಜಾರಿಗೊಳಿಸಿ ಸಮಜಾಯಿಷಿ ಕೇಳಿದ್ದಾರೆ. ಕೆ.ಆರ್.ಪುರ ಕಚೇರಿ ಅಧಿಕಾರಿಗಳು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಯಾವ ರೀತಿ ಪರೀಕ್ಷೆ ನಡೆಸಲಾಗುತ್ತಿತ್ತೋ ಅದೇ ರೀತಿ ಈಗಲೂ ಮಾಡಲಾಗಿದೆ. ಯಾವುದೇ ಲೋಪದೋಷಕ್ಕೆ ಅವಕಾಶ ಕೊಡದೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ಕಚೇರಿಯಲ್ಲಿ ಎಷ್ಟು ಡಿಎಲ್?
ಡಿ.15ರಿಂದ ಡಿ.20ರವರೆಗೆ
ಬೆಂಗಳೂರು ಕೇಂದ್ರ ಕಚೇರಿಯಲ್ಲಿ 2073 ಡಿಎಲ್
ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯಲ್ಲಿ 2932 ಡಿಎಲ್
ಬೆಂಗಳೂರು ದಕ್ಷಿಣ ಕಚೇರಿಯಲ್ಲಿ 1745 ಡಿಎಲ್ ಕೆ.ಆರ್.ಪುರ ಕಚೇರಿಯಲ್ಲಿ 1288 ಡಿಎಲ್ ನೀಡಲಾಗಿದೆ.
ದಿನಕ್ಕೆ 25 ಕಾರು, 50 ಬೈಕ್‌ಗಷ್ಟೇ ಟೆಸ್ಟ್
ಡಿಎಲ್ ಗೋಲ್‌ಮಾಲ್‌ಗೆ ಸಂಬಂಧಿಸಿದಂತೆ ಆರ್‌ಟಿಒ ಅಧಿಕಾರಿಗಳ ಜತೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಈಗಾಗಲೇ ಸಭೆ ನಡೆಸಿದ್ದು, ಒಂದು ದಿನಕ್ಕೆ 25 ಕಾರುಗಳು ಹಾಗೂ 50 ದ್ವಿಚಕ್ರ ವಾಹನ ಡಿಎಲ್‌ಗಳಿಗೇ ಮಾತ್ರವೇ ಸ್ಲಾಟ್ ಕೊಟ್ಟು ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರಂತೆ.