ಬೆಂಗಳೂರು(www.thenewzmirror.com):ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಲು ಚರ್ಚೆ ನಡೆದಿದೆ,ಸಧ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರು ಸ್ಯಾಂಡಲ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ಅವರ ಆಯ್ಕೆ ಚರ್ಚೆಯಾಗುತ್ತಿದೆ, “ನಾನು ಈ ವಿಚಾರವಾಗಿ ಸಿಎಂ ಹಾಗೂ ಕೈಗಾರಿಕಾ ಸಚಿವರ ಜತೆ ಮಾತನಾಡುತ್ತೇನೆ. ಈ ಹಿಂದೆ ಬಲ್ಬ್ ವಿಚಾರವಾಗಿ ಇದೇ ರೀತಿ ಚರ್ಚೆ ಬಂದಿತ್ತು. ನಾವು ನಮ್ಮ ಪುನೀತ್ ಹಾಗೂ ರಮ್ಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದೆವು. ಈಗ ಅರಣ್ಯ ಇಲಾಖೆಯ ವಿಚಾರವಾಗಿ ಅನಿಲ್ ಕುಂಬ್ಳೆ ಅವರನ್ನು ರಾಯಭಾರಿಯನ್ನಾಗಿ ಮಾಡಲು ಚರ್ಚೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಮುತ್ತುರತ್ನಗಳನ್ನು ಬಿಜೆಪಿಯಲ್ಲೇ ಇಟ್ಟುಕೊಳ್ಳಲಿ:
ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಬಗ್ಗೆ ಕೇಳಿದಾಗ, “ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಸೋಮಶೇಖರ್ ಆಗಲಿ, ಹೆಬ್ಬಾರ್ ಅವರಾಗಲಿ, ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲ, ಯಾರಿಗೂ ಏಡ್ಸ್ ಸೋಂಕನ್ನು ಚುಚ್ಚಲು ಹೋಗಿಲ್ಲ. ವಿರೋಧ ಪಕ್ಷದ ನಾಯಕರಿಗೆ ಏಡ್ಸ್ ಚುಚ್ಚುಲು ಪ್ರಯತ್ನಿಸಿದವರು, ಯಡಿಯೂರಪ್ಪ ಅವರನ್ನು ಟ್ರ್ಯಾಪ್ ಮಾಡಲು ಯತ್ನಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೇಪ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ. ಇಲ್ಲಿ ಬಿಜೆಪಿ ಸಂಸ್ಕೃತಿ ಕಾಣುತ್ತಿದೆ. ಅವರು ತಮ್ಮ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ” ಎಂದು ತಿಳಿಸಿದರು.
ಬಿಜೆಪಿ ಎಂಎಲ್ ಸಿ ವಿರುದ್ಧ ಕಾನೂನು ಕ್ರಮ:
ಬಿಜೆಪಿ ಎಂಎಲ್ ಸಿ ರವಿಕುಮಾರ್ ಅವರು ಕಲಬುರ್ಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿರುವ ಬಗ್ಗೆ ಮಾಧ್ಯಮಗಳು ಕೆಪಿಸಿಸಿ ಕಚೇರಿ ಆವರಣದಲ್ಲಿ ಕೇಳಿದಾಗ, “ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ. ಕಲಬುರ್ಗಿಯ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆವರು ತಮ್ಮದೇ ಆದ ಘನತೆಯನ್ನು ಹೊಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ. ಮಹಿಳಾ ಅಧಿಕಾರಿಯನ್ನು ಬಿಜೆಪಿಯವರು ನಡೆಸಿಕೊಳ್ಳುವ ರೀತಿ ಇದೇನಾ? ಈ ವಿಚಾರವಾಗಿ ಬಿಜೆಪಿ ನಾಯಕರು ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವರುಗಳು ಪ್ರತಿಕ್ರಿಯೆ ನೀಡಬೇಕು” ಎಂದು ಆಗ್ರಹಿಸಿದರು.
ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಇಂದು ಬೆಳಗ್ಗೆ ಅನೇಕ ಐಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಕಾನೂನು ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪರ್ವ:
ಬಂಗಾರಪೇಟೆ ಮಾಜಿ ಶಾಸಕ ಎಂ ನಾರಾಯಣ ಸ್ವಾಮಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಎರಡು ವರ್ಷಗಳ ನಂತರ ಬೇರೆ ಪಕ್ಷದಿಂದ ಅನೇಕ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಆಮೂಲಕ ಹೊಸ ಪರ್ವ ಆರಂಭವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ.ನಾರಾಯಣ ಸ್ವಾಮಿ ಹಾಗೂ ನಮ್ಮ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಚನ್ನಾರೆಡ್ಡಿ ಅವರು ಕೂಡ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಇಂದು ಬಿಜೆಪಿಯಿಂದ ಸುಮಾರು 50 ಜನ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಎರಡು ವರ್ಷಗಳ ನಂತರ ನಾವು ಮತ್ತೆ ಹೊಸ ಪರ್ವವನ್ನು ಆರಂಭಿಸಿದ್ದೇವೆ” ಎಂದು ತಿಳಿಸಿದರು.
“ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಬದುಕಿಗೆ ದಾರಿಯಾಗುತ್ತಿದೆ ಎಂದು ಬಿಜೆಪಿ ಹಾಗೂ ದಳದ ಅನೇಕ ಕಾರ್ಯಕರ್ತರು, ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಲು ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಲು ಬಯಸುವವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ರಾಜ್ಯದ ಎಲ್ಲಾ ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪಕ್ಷಕ್ಕೆ ಸೇರುತ್ತಿರುವ ಎಲ್ಲಾ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಹೊಸಬರು, ಹಳಬರು ಎಂಬ ಬೇಧವಿಲ್ಲದೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು” ಎಂದು ತಿಳಿಸಿದರು.