ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: ಕಾರ್ಯಕರ್ತರಿಗೆ ಕರೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

RELATED POSTS

ದಕ್ಷಿಣಕನ್ನಡ(www.thenewzmirror.com): ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಬಹುದು. ಅದಕ್ಕೆ ನೀವು ಸಜ್ಜಾಗಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟರು.

ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,”ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಸ್ಥಾಪಿಸಲು ಕಟ್ಟಡ ಖರೀದಿಗೆ ಮುಂದಾಗಿದ್ದೇವೆ. 25% ಹಣ ನಾನು ಸಹಾಯ ಮಾಡುತ್ತೇನೆ. ಉಳಿದ ಹಣವನ್ನು ನೀವು ಕೊಡಬೇಕು. ಇದು ನಿಮ್ಮ ಆಸ್ತಿ, ನಿಮ್ಮ ಕೈಲಾದ ಸಹಾಯ ಮಾಡಿ. ರಾಜ್ಯದೆಲ್ಲೆಡೆ 100 ಕಾಂಗ್ರೆಸ್ ಕಚೇರಿ ಸ್ಥಾಪಿಸಲು ಮುಂದಾಗಿದ್ದು, ಕಾರ್ಯಾಧ್ಯಕ್ಷರುಗಳು ರಾಜ್ಯದ್ಯಂತ  ಪ್ರವಾಸ ಮಾಡುತ್ತಿದ್ದಾರೆ. ಕರಾವಳಿ ಭಾಗ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ನೀವೆಲ್ಲರೂ ಸೇರಿ ಅನೇಕ ನಾಯಕರನ್ನು ಕೊಟ್ಟಿದ್ದೀರಿ. ಸೋಲು ನಮಗೆ ಪಾಠ ಕಲಿಸಿಕೊಟ್ಟಿದೆ. ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಬಹುದು. ಅದಕ್ಕೆ ನೀವು ಸಜ್ಜಾಗಬೇಕು” ಎಂದು ಕರೆ ಕೊಟ್ಟರು.

“ಮನಮೋಹನ್ ಸಿಂಗ್ ಅವರ 10 ವರ್ಷಗಳ ಯುಪಿಎ ಸರ್ಕಾರದಲ್ಲಿ ಆಹಾರ ಭದ್ರತೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತರಿ, ಮಾಹಿತಿ ಹಕ್ಕು, ಅರಣ್ಯ ಹಕ್ಕು ಕಾಯ್ದೆ ಮೂಲಕ ಕ್ರಾಂತಿಕಾರಿ ಯೋಜನೆ ತರಲಾಯಿತು. ಆಮೂಲಕ ಕಾಂಗ್ರೆಸ್ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಿದೆ. ಬಿಜೆಪಿ ಇಂತಹ ಯವುದಾದ್ರೂ ಒಂದು ಯೋಜನೆ  ನೀಡಿದ್ದಾರಾ? ಈ ಬಗ್ಗೆ ಚರ್ಚೆ ಮಾಡಲು ಸವಾಲು ಹಾಕಿದ್ದೆ ಬಿಜೆಪಿಯವರು ಮುಂದೆ ಬಂದಿಲ್ಲ” ಎಂದು ಸವಾಲೆಸೆದರು.

“ಬೂತ್ ಮಟ್ಟದಲ್ಲಿ ಬಿಎಲ್ಎಗಳಾಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿಯವರು ಮತದಾರರ ಪಟ್ಟಿಯಲ್ಲಿ ವ್ಯತ್ಯಾಸ ಮಾಡುತ್ತಾರೆ. ಆ ರೀತಿ ಆಗದಂತೆ ಎಚ್ಚರ ವಹಿಸಬೇಕು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ನಮ್ಮ ಸರ್ಕಾರ 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡನೆ ಮಾಡಿದೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳೇ ನಿಮ್ಮ ಪ್ರಮುಖ ಅಸ್ತ್ರ. ಇದರ ಬಗ್ಗೆ ಜನರಿಗೆ ತಿಳಿಸಿ ಅವರ ಮನಗೆಲ್ಲಬೇಕು. ಎಲ್ಲರಿಗೂ ಒಂದೊಂದು ಕಾಲ ಬರುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ. ನೀವು ಆತ್ಮವಿಶ್ವಾಸದಿಂದ ಪಕ್ಷ ಸಂಘಟಿಸಿ. ಕಾರ್ಯಕರ್ತರ ರಕ್ಷಣೆ ಈ ಡಿ.ಕೆ. ಶಿವಕುಮಾರ್ ಮೊದಲ ಕರ್ತವ್ಯ. ನೀವಿದ್ದರೆ ನಾವು. ನೀವಿಲ್ಲದಿದ್ದರೆ ನಾವಿಲ್ಲ. ನೀವೇ ನಮ್ಮ ಪಕ್ಷದ ಆಸ್ತಿ” ಎಂದು ತಿಳಿಸಿದರು.

“ಕೇಂದ್ರ ಬಿಜೆಪಿ ನಾಯಕರು ಸಂಸತ್ತಿನಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರು. ಎಲ್ಲಾ ಧರ್ಮಗಳನ್ನು ಒಟ್ಟಾಗಿ ಸೇರಿಸಿಕೊಂಡು ಕೆಲಸ ಮಾಡುವುದೇ ಕಾಂಗ್ರೆಸ್ ಸಿದ್ಧಾಂತ. ಇಂದು ಕ್ರೈಸ್ತ ಬಾಂಧವರ ಈಸ್ಟರ್ ಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತೇನೆ. ಸಮರ್ಪಣೆ, ಸಂಕಲ್ಪ, ಸಂಘರ್ಷ ಈ ಮೂರು ಅಂಶಗಳನ್ನು ಕಾಂಗ್ರೆಸ್ ಪಕ್ಷ ನಿಮ್ಮ ಮುಂದೆ ಇಟ್ಟಿದೆ. ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಈ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದು, ಎಲ್ಲರಿಗೂ ಅಭಿನಂದಿಸುತ್ತೇನೆ. ಇಲ್ಲಿ ಪ್ರತಿ ಬೂತ್ ನಲ್ಲಿ ಇಬ್ಬರು ಡಿಜಿಟಲ್ ಯೂಥ್ ನೇಮಕ ಮಾಡಲಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆಗಳು” ಎಂದರು.

“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುದಾಗ ಬಿಜೆಪಿ ನಾಯಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ನಾನು ಹಾಗೂ ಸಿದ್ದರಾಮಯ್ಯ ಅವರು ಪ್ರಿಯಾಂಕ ಗಾಂಧಿ ಅವರ ಸಮ್ಮುಖದಲ್ಲಿ ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದೆವು. ನಮ್ಮ ಸರ್ಕಾರ ಬಂದ ನಂತರ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ, ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ” ಎಂದು ಹೇಳಿದರು.

ಬೆಳ್ತಂಗಡಿಯಲ್ಲೂ ಕಾಂಗ್ರೆಸ್ ಗೆಲುವು:

“ಬಿಜೆಪಿಯವರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಬಿಜೆಪಿಯವರು ನಮಗೆ ನೆರವಾಗಲಿಲ್ಲ, ಕಾಂಗ್ರೆಸ್ ಸರ್ಕಾರ ನೆರವಾಗಿದೆ ಎಂದು ಬಿಜೆಪಿಗೆ ಮತ ಹಾಕಿದ ಮಹಿಳೆಯರು ಭಾವಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ನಾನು ಸಮೀಕ್ಷೆ ಮಾಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಗಳಿಂದ ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ” ಎಂದರು.

“ಬೆಳ್ತಂಗಡಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ.  ಹೀಗಾಗಿ ನೀವು ಈಗಿನಿಂದಲೇ ಜನರ ಹೃದಯ ಗೆಲ್ಲಬೇಕು. ಬಿಜೆಪಿಗೆ ಮತ ಹಾಕಬೇಕು ಎಂದು ಯಾರೂ ಹಠ ಮಾಡಿ ಕೂತಿಲ್ಲ. ಎಲ್ಲರೂ ಪರಿವರ್ತನೆ ಆಗುತ್ತಾರೆ. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನ ಸೋಲಿಸಿದರು. ಬಿಜೆಪಿ ಹಾಗೂ ದಳದ ಭದ್ರಕೋಟೆ ಒಡೆದು 136 ಇದ್ದ ನಮ್ಮ ಸಂಖ್ಯಾಬಲ 138 ಆಗಿದೆ. ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ನಮ್ಮ ಬಲ 140 ಆಗಿದೆ” ಎಂದು ತಿಳಿಸಿದರು.

ನುಡಿದಂತೆ ಗ್ಯಾರಂಟಿ ಯೋಜನೆ ಜಾರಿ:

“ಗ್ಯಾರಂಟಿ ಯೋಜನೆ ತೆಗೆಯಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಅಸಾಧ್ಯ. ಸಿದ್ದರಾಮಯ್ಯ ಅವರ ನೇತೃತ್ವದ ನಿಮ್ಮ ಸರ್ಕಾರ ಈ ಯೋಜನೆಗಳಿಗೆ 52 ಸಾವಿರ ಕೋಟಿ ಬಜೆಟ್ ನಲ್ಲಿ ಘೋಷಿಸಿದೆ.  ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯಿತು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಾವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ” ಎಂದು ಹೇಳಿದರು.

“ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಗತ್ಯ ರೂಪುರೇಷೆ ರೂಪಿಸಲು ನಾನು ಹಾಗೂ ಹೆಚ್.ಕೆ ಪಾಟೀಲ್ ಅವರು ಸಭೆ ಮಾಡಲಿದ್ದೇವೆ. ಬಸವಣ್ಣ, ಪೈಗಂಬರ್ ಸೇರಿದಂತೆ ಹಿಂದೂಗಳು, ಕ್ರೈಸ್ತರು, ಜೈನರು ಸೇರಿದಂತೆ ಎಲ್ಲರ ರಕ್ಷಣೆ ಮಾಡುತ್ತೇವೆ” ಎಂದು ತಿಳಿಸಿದರು.

ಪರಶುರಾಮನ ಪ್ರತಿಮೆ ಬಿಜೆಪಿ ಸಾಕ್ಷಿಗುಡ್ಡೆ:

“ಕಾರ್ಕಳದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಜನರ ಮತ ಪಡೆಯುತ್ತಿದ್ದಾರೆ. ಆದರೆ ಅವರಿಂದಲೇ ಅಲ್ಲಿ ಪರಶುರಾಮನ ಕೊಲೆಯಾಗಿದೆ. ಪರಶುರಾಮನ ಪ್ರತಿಮೆ ನೋಡಿ, ಇಂತಹ ಕೊಲೆ ನೋಡಿ ಅಲ್ಲಿನ ಜನ ಅವರಿಗೆ ಮತ ಹಾಕಿದ್ದಾರಲ್ಲ ಎಂದು ಅಚ್ಚರಿಯಾಯಿತು. ಆ ಪ್ರತಿಮೆಯನ್ನು ಅವರು ಹಾಗೆಯೇ ಇಟ್ಟುಕೊಂಡಿರಲಿ. ಅದು ಅವರ ಸಾಕ್ಷಿಗುಡ್ಡೆ” ಎಂದು ಹರಿಹಾಯ್ದರು.

ಕಾರ್ಯಕರ್ತರು ಎದೆಗುಂದಬೇಡಿ:

“ತುಳು ಭೂಮಿ ಬಹಳ ಪವಿತ್ರವಾದ ಪ್ರದೇಶ. ಶಿಕ್ಷಣ, ಆರ್ಥಿಕ, ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಇಷ್ಟು ದಿನ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಶಾಸಕರು ಈ ಭಾಗದಿಂದ ಆಯ್ಕೆಯಾಗುತ್ತಿದ್ದರು. ಈಗ 2 ಸ್ಥಾನಕ್ಕೆ ಇಳಿದಿದೆ. ಯಾರೂ ಎದೆಗುಂಡಬೇಡಿ. ಚಿಕ್ಕಮಗಳೂರಿನಲ್ಲಿ ದತ್ತಪೀಠ ಹೆಸರಿಟ್ಟುಕೊಂಡು ಅದರಲ್ಲೇ ರಾಜಕಾರಣ ಮಾಡುತ್ತಿದ್ದರು. ಇಂದು ಆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಕೊಡಗಿನಲ್ಲಿ 2ಕ್ಕೆ ಎರಡೂ ಕ್ಷೇತ್ರ ಗೆದ್ದಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅವರು ರಾಮನಗರ ತಮ್ಮ ಆಸ್ತಿ ಎಂದುಕೊಂಡಿದ್ದರು. ಈಗ ನಾಲ್ಕಕ್ಕೆ ನಾಲ್ಕೂ ಕ್ಷೇತ್ರ ಗೆದ್ದಿದ್ದೇವೆ. ಮಂಡ್ಯದಲ್ಲಿ ಕೇವಲ ಒಂದು ಸೀಟು ಗೆದ್ದಿದ್ದೆವು. ಈಗ ಏಳಕ್ಕೆ ಏಳೂ ಕ್ಷೇತ್ರ ಗೆದ್ದಿದ್ದೇವೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ಧೈರ್ಯ ತುಂಬಿದರು.

“2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಮಾಧ್ಯಮಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬರೆದಿಟ್ಟುಕೊಳ್ಳಿ. ಬೂಟ್ ಮಟ್ಟದ ನಾಯಕರನ್ನು ತಯಾರು ಮಾಡಲು ನಾವಿಂದು ಬಂದಿದ್ದೇವೆ. ಕಾರ್ಯಕರ್ತರು ಪಕ್ಷದ ಆಧಾರಸ್ತಂಭ. ಕಾರ್ಯಕರ್ತರಿಗೆ ಅಧಿಕಾರ ನೀಡಲು ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಸ್ಥಳೀಯ ಸಮಿತಿಗಳಲ್ಲೂ ಅಧಿಕಾರ ನೀಡಲಾಗಿದೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist