ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿಲ್ಲ, ನನ್ನ ಹೇಳಿಕೆ ತಿರುಚಿರುವವರ ವಿರುದ್ಧ ಕಾನೂನು ಹೋರಾಟ ಮಾಡುವೆ: ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(thenewzmirror.com): “ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವೆ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಸ್ಲಿಮರಿಗೆ ಮೀಸಲು ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದೀರಿ ಎಂದು ಬಿಜೆಪಿಯವರು ಟ್ವಿಟರ್ ನಲ್ಲಿ ಹಾಗೂ ಸಂಸತ್ ನಲ್ಲಿ ಟೀಕೆ ಮಾಡುತ್ತಿದ್ದಾರೆ ಆದರೆ, “ನಾನು ಹಾಗೆ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ.  ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ” ಎಂದು ಹೇಳಿದರು. 

“ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ನಮ್ಮದು ರಾಷ್ಟ್ರೀಯ ಪಕ್ಷ, ಸಂವಿಧಾನವನ್ನು ಜಾರಿಗೆ ತಂದಿದ್ದೇ ನಮ್ಮ ಪಕ್ಷ. ಸಂವಿಧಾನದ ಮಹತ್ವ ಬೇರೆಲ್ಲರಿಗಿಂತ ನಮಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ವಿಫಲವಾಗಿದೆ. ಬಜೆಟ್ ನಲ್ಲಿ ಏನೂ ಇಲ್ಲದೇ ಇರುವ ಕಾರಣಕ್ಕೆ ಬಿಜೆಪಿ ಈ ರೀತಿ ಇಲ್ಲಸಲ್ಲದ ವಿಚಾರವನ್ನು ಪ್ರಸ್ತಾವ ಮಾಡುತ್ತಿದೆ. ಇದೊಂದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮುಂದುವರೆದಿರುವ ರಾಜಕೀಯ ಪಿತೂರಿ ” ಎಂದು ಸ್ಪಷ್ಟಪಡಿಸಿದರು. 

ಬಿಜೆಪಿಯ ಅಮಿತ್ ಮಾಳವಿಯಾ ಅವರ ಎಕ್ಸ್ (ಟ್ವೀಟ್) ಬಗ್ಗೆ ಕೇಳಿದಾಗ, “ರಾಜಕೀಯ ವ್ಯಕ್ತಿಯಾದ ಅವರು ಇಡೀ ದೇಶವನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಬಿಜೆಪಿ ಯಾವಾಗಲೂ ದೇಶವನ್ನು ತಪ್ಪು ಹಾದಿಗೆ ಎಳೆಯುವ ಕೆಲಸ ಮಾಡುತ್ತಲೇ ಬಂದಿದೆ. ನಾನು ಎಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ತೋರಿಸಲಿ. ಬಿಜೆಪಿಯವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನನ್ನ, ಸೋನಿಯಾ ಗಾಂಧಿ ಅವರ ಕುಟುಂಬದ ಹಾಗೂ ಕಾಂಗ್ರೆಸ್ ಪಕ್ಷದ ಹೆಸರು ತೆಗೆದುಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 

ಸುಳ್ಳು ಸುದ್ದಿ ಪಸರಿಸುವುದರಲ್ಲಿ ಬಿಜೆಪಿ ಎತ್ತಿದ ಕೈ:

ಸುಳ್ಳು ಸುದ್ದಿಗಳನ್ನು ಪಸರಿಸಲಾಗುತ್ತಿದೆಯೇ ಎಂದು ಕೇಳಿದಾಗ, “ಅವರ (ಬಿಜೆಪಿ) ಕೆಲಸವೇ ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಪಸರಿಸುವುದು. ಇದರಲ್ಲಿ ಅವರದು ಎತ್ತಿದ ಕೈ.”ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಸಂವಿಧಾನ ಬದಲಾವಣೆಗೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರಲ್ಲ ಎಂದು ಕೇಳಿದಾಗ, “ನಾವು ಈ ದೇಶಕ್ಕೆ ಸಂವಿಧಾನ ನೀಡಿದವರು. ಅದನ್ನು ಕಾಪಾಡುವುದು ನಮ್ಮ ಹಕ್ಕು. ಬಿಜೆಪಿಯು ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ವಿಚಾರಗಳನ್ನು ವಿಚಾರ ಮುನ್ನೆಲೆಗೆ ತರುತ್ತಿದೆ” ಎಂದರು. 

ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಯಾವ ಆಧಾರದಲ್ಲಿ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದಾಗ, “ರಾಜ್ಯದ ಹಿಂದುಳಿದ ವರ್ಗಗಳ ವರದಿ ಆಧಾರದ ಮೇಲೆ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲಾಗಿದೆ. ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮೀಸಲಾತಿ ವಿಚಾರವಾಗಿ ನ್ಯಾಯಲಯಗಳ ಮೆಟ್ಟಿಲೇರಲಾಗಿದ್ದು, ಆ ನ್ಯಾಯಾಲಯಗಳ ತೀರ್ಪುಗಳ ಆಧಾರದ ಮೇಲೆ ಕೆಲವು ಬದಲಾವಣೆ ಮಾಡಿ ಅವಕಾಶ ನೀಡಲಾಗಿದೆ” ಎಂದರು. 

ಬಿಜೆಪಿಯ ಸಂಬಿತ್ ಪಾತ್ರ ಅವರು ಇದು ನಿಜವಾದ ಕಾಂಗ್ರೆಸ್ ಚಿಂತನೆ, ಸೋನಿಯಾ ಗಾಂಧಿ ಕುಟುಂಬದ ಚಿಂತನೆ ಎಂದು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ಗಾಂಧಿ ಕುಟುಂಬದ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಪ್ರತಿದಿನ ನಿದ್ದೆ ಬರುವುದಿಲ್ಲ. ಇದೆಲ್ಲವೂ ಹುಚ್ಚುತನ, ಮೂರ್ಖತನ. ಇದು ಕಾಂಗ್ರೆಸ್ ಪಕ್ಷ ಹಾಗೂ ನನ್ನ ವಿರುದ್ದದ ರಾಜಕೀಯ ಪಿತೂರಿ” ಎಂದು ಕಿಡಿಯಾದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist