ಬೆಂಗಳೂರು(www.thenewzmirror.com):ಸಾರಿಗೆ ಬಸ್ ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ಮುಂದೆ ತಾಂತ್ರಿಕ ಕಾರಣದಿಂದ ಬಸ್ ಅಪಘಾತವಾದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಏಳು ವರ್ಷಗಳ ನಂತರ ಬಿಎಂಟಿಸಿಯಲ್ಲಿ ನೇಮಕಾತಿ ಆರಂಭಿಸಿದ್ದು ಇಂದು ಬಿ.ಎಂ.ಟಿ.ಸಿ 2286 ನಿರ್ವಾಹಕರಿಗೆ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದರು. ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ನೀಡಿ ಮಾತನಾಡಿದ ಸಚಿವರು,ಇಂದು ಬಿ.ಎಂ.ಟಿ.ಸಿ 2286 ನಿರ್ವಾಹಕರಿಗೆ ನೇಮಕಾತಿ ಆದೇಶವನ್ನು ನೀಡಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ,2018 ರಿಂದ ಇಲ್ಲಿಯವರೆಗೂ ಬಿ.ಎಂ.ಟಿ.ಸಿಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ ಈಗ ನಮ್ಮ ಕಾಲದಲ್ಲಿ ಮಾಡಿದ್ದೇವೆ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂದು ನಾನು ಭಾವಿಸಿದ್ದೇನೆ. ಈಗಾಗಲೇ ನಮ್ಮ ಸರ್ಕಾರ ಬಂದ ಕೂಡಲೇ ನಾಲ್ಕು ಸಾರಿಗೆ ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ.ಕಳೆದ ಎರಡು ವರ್ಷದಲ್ಲಿ ಅತ್ಯಂತ ಪಾರದರ್ಶಕವಾಗಿ 4700 ಹೊಸ ನೇಮಕಾತಿ ಮತ್ತು 1000 ಅನುಕಂಪದ ನೇಮಕಾತಿ ಪೂರ್ಣಗೊಳಿಸಲಾಗಿದೆ ಉಳಿದ 4300 ನೇಮಕಾತಿಗಳು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸರ್ಕಾರಿ/ ಖಾಸಗಿವಲಯಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಹುದ್ದೆ ಕಡಿತ ಜಾರಿಯಲ್ಲಿರುವಾಗ 10000 ನೇಮಕಾತಿ ಪಾರದರ್ಶಕವಾಗಿ ನಡೆಸಿ ಉದ್ಯೋಗ ನೀಡಿರುವುದು. ನಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಈ ಸಂದರ್ಭದಲ್ಲಿ ಬಸ್ ಅಪಘಾತಗಳ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವರು, ಅಪಘಾತಗಳಿಗೆ ಕಾರಣರಾದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮದ ಎಚ್ಚರಿಕೆ ನೀಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಬಗ್ಗೆ ಅವಲೋಕಿಸಿದಾಗ, ಭಾರತ ದೇಶವು ರಸ್ತೆ ಅಪಘಾತದಲ್ಲಿ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಅಪಘಾತ, ಸಾವು ನೋವು ದಾಖಲಾಗುತ್ತಿರುವುದುನಮ್ಮ ದೇಶದಲ್ಲಿ ಇದು ಅತ್ಯಂತ ಕಳವಳಕಾರಿ. ಅದನ್ನು ತಡೆಗಟ್ಟಲು ನಮ್ಮ ಸಾರಿಗೆ ಇಲಾಖೆಯಿಂದ ಕೂಡ ( RTO – ROAD Safety Fund) ಮೂಲಕ ಅಭಿಯಾನಗಳನ್ನು ಸಹ ನಡೆಸಲಾಗುತ್ತಿದೆ ಎಂದರು.
ಸಾರಿಗೆ ಸಂಸ್ಥೆಗಳ ಬಸ್ಸುಗಳ ಅಪಘಾತಗಳು ಅಧಿಕವಾಗುತ್ತಿವೆ. ಅಪಘಾತಕ್ಕೆ ಯಾರೇ ಕಾರಣವಿರಬಹುದು, ಆದರೆ ಅಪಘಾತದಿಂದ ನಡೆಯುವ ಸಾವು ನೋವುಗಳಿಗೆ ಯಾವುದೇ ಕಾರಣ/ ಪರಿಹಾರವು ನ್ಯಾಯ ಒದಗಿಸುವುದಿಲ್ಲ. ಅಪಘಾತದಿಂದ ಕಳೆದುಕೊಂಡ ಅಮೂಲ್ಯ ಜೀವಗಳನ್ನು ವಾಪಸ್ಸು ತರಲು ಸಾಧ್ಯವೇ? ಅವರ ಅವಲಂಬಿತರು ಅನುಭವಿಸುವ ನೋವಿಗೆ ಪರ್ಯಾಯವಿದೆಯೇ?.ಕಳೆದ 15 ದಿವಸಗಳ ಹಿಂದೆ ಅಪಘಾತದಲ್ಲಿ ಕಾಲುಕಳೆದುಕೊಂಡ ಚಾಲನಾ ಸಿಬ್ಬಂದಿಯೊಬ್ಬರಿಗೆ ರೂ.25 ಲಕ್ಷ ಪರಿಹಾರ ಹಣವನ್ನು ನಾವು ನೀಡುವಾಗ ನನಗೆ ಅರ್ಥವಾಗಿದ್ದು ಒಂದೇ ವಿಷಯ, ಯಾವುದೇ ಆರ್ಥಿಕ ಸೌಲಭ್ಯವು ಆ ಸಿಬ್ಬಂದಿಗೆ ತನ್ನ ಹಿಂದಿನ ಸಂತೋಷದ ಜೀವನ ತಂದುಕೊಡುವುದಿಲ್ಲ. ಬೇರೆಯವರನ್ನು ನೋಡಿದಾಗ ಅವನಿಗಾಗುವ ಮಾನಸಿಕ ವೇದನೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂಬುದು ಎಂದರು.
ಬಸ್ಸು ರಸ್ತೆಯಲ್ಲಿ ಸಂಚರಿಸುವ ದೊಡ್ಡ ವಾಹನ, ಆದ್ದರಿಂದ ನಮ್ಮ ಚಾಲಕರು ಮತ್ತಷ್ಟು ತಾಳ್ಮೆ, ಜಾಗ್ರತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿರ್ವಾಹಕರು ಚಾಲಕರಿಗೆ ವೇಗ ತಗ್ಗಿಸಲು, ಜಾಗ್ರತೆ ವಹಿಸಲು ಮನವರಿಕೆ ಮಾಡಿಕೊಡಬೇಕು.ಕೆಲ ಸಂದರ್ಭಗಳಲ್ಲಿ ಬಸ್ಸುಗಳ ಅಪಘಾತಕ್ಕೆ ಬಸ್ಸುಗಳ ಸ್ಥಿತಿಗತಿಗಳು/ತಾಂತ್ರಿಕ ದೋಷಗಳು ಕಾರಣವಿರಬಹುದು. ಆ ನಿಟ್ಟಿನಲ್ಲಿಯೂ ನಾವು ಗಮನವಹಿಸಬೇಕು ತಾಂತ್ರಿಕ ಇಲಾಖೆಯ ಅಧಿಕಾರಿಗಳು,ಮೇಲ್ವಿಚಾರಕ ಸಿಬ್ಬಂದಿಗಳ ಅಜಾಗರೂಕತೆ ,ನಿರ್ಲಕ್ಷತೆ ಕಾರಣವಾಗಿರುತ್ತದೆ. ತಾಂತ್ರಿಕ ತೊಂದರೆಗಳಿಗೆ ಇನ್ನು ಮುಂದೆ, ಚಾಲನಾ ಸಿಬ್ಬಂದಿಗಳ ಬದಲಾಗಿ ತಾಂತ್ರಿಕ ಇಲಾಖೆಯ ಅಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರುಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.
ನಾನು ಈ ಬಗ್ಗೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣ, ಇತ್ತೀಚಿನ ದಿನಗಳಲ್ಲಿ ಅಪಘಾತದ ಬಗ್ಗೆ ಭಯ ಮತ್ತು ಸಂವೇದನಾ ಶೀಲತೆ ಇಲ್ಲದಂತಾಗಿರುವುದು. ನೂರು ಅಪಘಾತಗಳಲ್ಲಿ ನನ್ನದೊಂದು ಎಂಬ ಅಸಹನೀಯ ಭಾವನೆ ಚಾಲನಾ ಸಿಬ್ಬಂದಿಗಳಲ್ಲಿ ಇರಬಾರದು. ಅದು ಆಘಾತಕಾರಿ. ಇನ್ನು ಮುಂದೆ ಅಪಘಾತಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೆ ಅನ್ಯ ಮಾರ್ಗವಿಲ್ಲದಂತಾಗಿದೆ. ಅಪಘಾತಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಸಹ ಕೆಲವೊಮ್ಮೆ ಜಾರಿಗೊಳಿಸುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯವಾಗಿರುತ್ತದೆ.ಅಪಘಾತಗಳು ಆಕಸ್ಮಿಕವೇ ಆದರೂ ಅದನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.