ಬೆಂಗಳೂರು(www.thenewzmirror.com): ಕೇವಲ ಮೂರು ವರ್ಷಗಳಲ್ಲಿ, ಭಾರತದ ಸೆಮಿಕಂಡಕ್ಟರ್ ಉದ್ಯಮವು ಆರಂಭಿಕ ಹಂತದಿಂದ ಉದಯೋನ್ಮುಖ ಜಾಗತಿಕ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಂದು ನೋಯ್ಡಾ ಮತ್ತು ಬೆಂಗಳೂರಿನಲ್ಲಿ ನೆಲೆಗೊಂಡಿರುವ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎರಡು ಹೊಸ ಅತ್ಯಾಧುನಿಕ ವಿನ್ಯಾಸ ಸೌಲಭ್ಯಗಳನ್ನು ಉದ್ಘಾಟಿಸಿದರು. ನಂತರ ಹೊಸ ಸೌಲಭ್ಯದ ವಿಶಿಷ್ಟತೆಯನ್ನು ವಿವರಿಸಿದ ವೈಷ್ಣವ್, ಇದು ಅತ್ಯಾಧುನಿಕ 3 ನ್ಯಾನೊಮೀಟರ್ (3nm) ಚಿಪ್ ವಿನ್ಯಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮೊದಲ ವಿನ್ಯಾಸ ಕೇಂದ್ರವಾಗಿದೆ. ಇದು ಭಾರತವನ್ನು ಸೆಮಿಕಂಡಕ್ಟರ್ ನಾವೀನ್ಯತೆಯ ಜಾಗತಿಕ ಲೀಗ್ ನಲ್ಲಿ ದೃಢವಾಗಿ ಸ್ಥಾಪಿಸುವ ಮೈಲಿಗಲ್ಲು . “3nm ನಲ್ಲಿ ವಿನ್ಯಾಸ ಮಾಡುವುದು ನಿಜವಾಗಿಯೂ ಮುಂದಿನ ತಲೆಮಾರಿನ ಕೆಲಸ. ನಾವು ಮೊದಲು 7nm ಮತ್ತು 5nm ನಲ್ಲಿ ಕೆಲಸ ಮಾಡಿದ್ದೇವೆ, ಆದರೆ ಇದು ಹೊಸ ಗಡಿಯನ್ನು ಗುರುತಿಸುತ್ತದೆ” ಎಂದು ಹೇಳಿದರು.
ವಿನ್ಯಾಸ, ಫ್ಯಾಬ್ರಿಕೇಶನ್, ಎಟಿಎಂಪಿ (ಜೋಡಣೆ, ಪರೀಕ್ಷೆ, ಗುರುತು ಮತ್ತು ಪ್ಯಾಕೇಜಿಂಗ್), ಉಪಕರಣಗಳು, ರಾಸಾಯನಿಕಗಳು ಮತ್ತು ಅನಿಲ ಪೂರೈಕೆ ಸರಪಳಿಗಳನ್ನು ಒಳಗೊಂಡ ಭಾರತದ ಒಟ್ಟಾರೆ ಸೆಮಿಕಂಡಕ್ಟರ್ ಕಾರ್ಯತಂತ್ರದ ಬಗ್ಗೆಯೂ ಸಚಿವರು ವಿವರಿಸಿದರು. ದಾವೋಸ್ ನಂತಹ ಜಾಗತಿಕ ವೇದಿಕೆಗಳಲ್ಲಿ ಕಂಡುಬಂದ ಉದ್ಯಮದ ವಿಶ್ವಾಸವನ್ನು ಅವರು ಉಲ್ಲೇಖಿಸಿದರು ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಲ್ಯಾಮ್ ರಿಸರ್ಚ್ನಂತಹ ಕಂಪನಿಗಳು ಈಗಾಗಲೇ ಗಮನಾರ್ಹ ಹೂಡಿಕೆಗಳನ್ನು ಮಾಡುತ್ತಿವೆ ಎಂದು ಹೇಳಿದರು. ಭಾರತದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಆವೇಗವನ್ನು ಪ್ರಸ್ತಾಪಿಸಿದ ಸಚಿವರು, ಉತ್ತರ ಪ್ರದೇಶದಲ್ಲಿ ಈ ಪ್ರಮುಖ ಸೆಮಿಕಂಡಕ್ಟರ್ ವಿನ್ಯಾಸ ಕೇಂದ್ರದ ಉದ್ಘಾಟನೆಯು ದೇಶಾದ್ಯಂತ ಲಭ್ಯವಿರುವ ಶ್ರೀಮಂತ ಪ್ರತಿಭೆಯನ್ನು ಬಳಸಿಕೊಳ್ಳುವ ಪ್ಯಾನ್-ಇಂಡಿಯಾ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಭಾರತ ಸರ್ಕಾರವು ಭಾರತದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಕೇಂದ್ರಗಳ ಅಭಿವೃದ್ಧಿಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಹಾರ್ಡ್ವೇರ್ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ಸೆಮಿಕಂಡಕ್ಟರ್ ಕಲಿಕಾ ಕಿಟ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಘೋಷಿಸಿದರು. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಈಗಾಗಲೇ ಸುಧಾರಿತ ಇಡಿಎ (ಎಲೆಕ್ಟ್ರಾನಿಕ್, ವಿನ್ಯಾಸ, ಆಟೊಮೇಷನ್) ಸಾಫ್ಟ್ವೇರ್ ಪರಿಕರಗಳನ್ನು ಪಡೆದಿರುವ 270 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಈ ಪ್ರಾಯೋಗಿಕ ಹಾರ್ಡ್ವೇರ್ ಕಿಟ್ ಗಳನ್ನು ಸಹ ಪಡೆಯಲಿವೆ. “ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಕಲಿಕೆಯ ಈ ಏಕೀಕರಣವು ನಿಜವಾಗಿಯೂ ಉದ್ಯಮಕ್ಕೆ ಸಿದ್ಧವಾಗಿರುವ ಎಂಜಿನಿಯರ್ ಗಳನ್ನು ಸೃಷ್ಟಿಸುತ್ತದೆ. ನಾವು ಮೂಲಸೌಕರ್ಯವನ್ನು ನಿರ್ಮಿಸುವುದಲ್ಲದೆ, ದೀರ್ಘಕಾಲೀನ ಪ್ರತಿಭೆಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ”. ಸಿ-ಡಿಎಸಿ ಮತ್ತು ಐ ಎಸ್ ಎಂ ತಂಡದ ಪರಿಣಾಮಕಾರಿ ಅನುಷ್ಠಾನವನ್ನು ವೈಷ್ಣವ್ ಶ್ಲಾಘಿಸಿದರು ಮತ್ತು ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ನಾಯಕನಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಆತ್ಮನಿರ್ಭರ ಭಾರತ ದೃಷ್ಟಿಕೋನದಡಿಯಲ್ಲಿ ಸೆಮಿಕಂಡಕ್ಟರ್ ಗಳನ್ನು ಕಾರ್ಯತಂತ್ರದ ಕೇಂದ್ರಬಿಂದುವಾಗಿ ಸೇರಿಸಿದ್ದಕ್ಕಾಗಿ ಅವರಿಗೆ ವೈಷ್ಣವ್ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. “ಕೇವಲ ಮೂರು ವರ್ಷಗಳಲ್ಲಿ, ಭಾರತದ ಸೆಮಿಕಂಡಕ್ಟರ್ ಉದ್ಯಮವು ಆರಂಭಿಕ ಹಂತದಿಂದ ಉದಯೋನ್ಮುಖ ಜಾಗತಿಕ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಮತ್ತು ಈಗ ದೀರ್ಘಾವಧಿಯ, ಸುಸ್ಥಿರ ಬೆಳವಣಿಗೆಗೆ ಸಿದ್ಧವಾಗಿದೆ” ಎಂದು ಅವರು ಹೇಳಿದರು.
“ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ಸರ್ವರ್, ವೈದ್ಯಕೀಯ ಉಪಕರಣಗಳು, ರಕ್ಷಣಾ ಉಪಕರಣಗಳು, ಆಟೋಮೊಬೈಲ್ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯೊಂದಿಗೆ, ಸೆಮಿಕಂಡಕ್ಟರ್ ಗಳ ಬೇಡಿಕೆಯು ವೇಗವಾಗಿ ಹೆಚ್ಚಾಗಲಿದೆ. ಆದ್ದರಿಂದ, ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಈ ಆವೇಗವು ಸಕಾಲಿಕವಾಗಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿಡೆಟೋಶಿ ಶಿಬಾಟಾ, ಭಾರತವು ನಮ್ಮ ಕಂಪನಿಗೆ ಒಂದು ಕಾರ್ಯತಂತ್ರದ ಆಧಾರವಾಗಿದೆ, ಎಂಬೆಡೆಡ್ ಸಿಸ್ಟಮ್ ಗಳು, ಸಾಫ್ಟ್ವೇರ್ ಮತ್ತು ಸಿಸ್ಟಮ್ ನಾವೀನ್ಯತೆಯಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು. ಭಾರತದಲ್ಲಿ ವಾಸ್ತುಶಿಲ್ಪದಿಂದ ಪರೀಕ್ಷೆಯವರೆಗೆ ಎಂಡ್-ಟು-ಎಂಡ್ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ವಿಸ್ತರಿಸುವ ಜೊತೆಗೆ ಐ ಎಸ್ ಎಂ ಮತ್ತು ಪಿ ಎಲ್ ಐ ನಂತಹ ಸರ್ಕಾರಿ ಬೆಂಬಲಿತ ಉಪಕ್ರಮಗಳ ಮೂಲಕ 250 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಮತ್ತು ಹಲವಾರು ನವೋದ್ಯಮಗಳನ್ನು ಬೆಂಬಲಿಸುವ ರೆನೆಸಾಸ್ ನ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ಭಾರತದ ಪ್ರತಿಭಾ ಶಕ್ತಿ ಮತ್ತು ಭಾರತ-ಜಪಾನ್ ಕಾರ್ಯತಂತ್ರದ ಸಮಾನ ಆಸಕ್ತಿಗಳು ಜಾಗತಿಕ ಸೆಮಿಕಂಡಕ್ಟರ್ ಜೀವನಚಕ್ರವನ್ನು ಮರುರೂಪಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.