ಬೆಂಗಳೂರು(thenewzmirror.com): ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ, ಕಾರ್ಯವೈಖರಿ, ಅನುಷ್ಠಾನದ ಕ್ರಮವು ಭಾರತವನ್ನು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದೆ. ಇನ್ನೊಂದೆಡೆ ಮೋದಿ ಅವರು ವಿಶ್ವನಾಯಕರಾಗಿ ಹೊರಹೊಮ್ಮಿರುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.
ನಗರದ ಅರಮನೆ ಮೈದಾನದಲ್ಲಿರುವ ಗೇಟ್ ನಂ.5 ರ ಕಿಂಗ್ಸ್ ಕೋರ್ಟ್ ಆವರಣದಲ್ಲಿ ಇಂದು ಆಯೋಜಿಸಿದ್ದ “ಬಿಹಾರ್ ದಿವಸ್” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಹಾರ- ಕರ್ನಾಟಕದ ಜನರು ಜೊತೆ ಸೇರಿ ಬಿಹಾರ ದಿವಸ ಆಚರಿಸುತ್ತಿರುವುದು ಸಂತಸದ ವಿಚಾರ. ದೇಶದ ಪ್ರಧಾನಿ, ವಿಶ್ವದ ಪ್ರಸಿದ್ಧ ನಾಯಕರಾದ ನರೇಂದ್ರ ಮೋದಿ ಅವರ ಬಗ್ಗೆ ಹೆಮ್ಮೆ ಪಡುವುದಾಗಿ ಹೇಳಿದರು. ಪ್ರಯಾಗ್‍ರಾಜ್‍ನ ಮಹಾ ಕುಂಭದಲ್ಲಿ ಬಿಹಾರದ ಜನರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ. ವಿವಿಧ ಜಾತಿ, ಧರ್ಮದ ಜನರು ಇಲ್ಲಿ ನೆಲೆಸಿದ್ದಾರೆ. ಹಲವು ಭಾಷೆಗಳಿದ್ದರೂ ಭಾರತವು ಅಖಂಡತೆಯನ್ನು ಉಳಿಸಿಕೊಂಡು ಸರ್ವಶ್ರೇಷ್ಠ ರಾಷ್ಟ್ರವಾಗಿದೆ.ಮೋದಿ ಭಾರತವನ್ನು ವಿಕಸಿತ ಭಾರತವಾಗಿ ಮಾಡಲು ಕಳೆದ 11 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ರಾಷ್ಟ್ರದ ಅಭಿವೃದ್ಧಿಯ ವಿಚಾರದಲ್ಲಿ ಅವರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಮೋದಿ ಅವರು ಪ್ರಧಾನಿಯಾಗುವ ಮೊದಲು ಭಾರತವು 11ನೇ ದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಇದೀಗ ಅದು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಮಾತನ್ನು ಮೋದಿ ಅವರು ಎಲ್ಲೆಡೆ ಹೇಳುತ್ತಾರೆ. ಬಿಹಾರದ ಜನತೆ, ಕನ್ನಡಿಗರು ಸೇರಿದಂತೆ ಎಲ್ಲ ರಾಜ್ಯದವರು ಸೇರಿ ಭಾರತವನ್ನು 2047ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಶ್ರಮಿಸಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಹಾರದ ನವಾಡಾದ ಸಂಸದ ವಿವೇಕ್ ಠಾಕೂರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಹಾರ ದಿವಸ್ ಉಸ್ತುವಾರಿ ಮುರುಗೇಶ್ ನಿರಾಣಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಶ್ ಗೌಡ, ಶರಣು ತಳ್ಳಿಕೆರೆ, ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಬಿಹಾರ ರಾಜ್ಯ ಕಾರ್ಯದರ್ಶಿ ರತ್ನೇಶ್ ಕುಸ್‍ಹಾ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಅವರು ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ಬಿಹಾರ ರಾಜ್ಯದ ನಿವಾಸಿಗಳು ಕುಟುಂಬ ಸದಸ್ಯರೊಂದಿಗೆ ಇದರಲ್ಲಿ ಪಾಲ್ಗೊಂಡಿದ್ದರು.