ಬೆಂಗಳೂರು(www.thenewzmirror.com): ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಹಠಾತ್ ಸಾವುಗಳನ್ನು ಕುರಿತು ಸಾರ್ವಜನಿಕ ಮತ್ತು ಮಾಧ್ಯಮ ವಲಯದಲ್ಲಿ ವ್ಯಾಪಕ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಔಪಚಾರಿಕ ತನಿಖೆಗೆ ಆದೇಶಿಸಿತ್ತು ಇದೀಗ ಅದರ ಸಂಪೂರ್ಣ ವರದಿ ಬಂದಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ ರಚಿಸಲಾದ ಸಮಿತಿಯು, ಮೇ-ಜೂನ್ 2025ರ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ 24 ಸಾವುಗಳನ್ನು ವಿಶ್ಲೇಷಿಸುವ ಮತ್ತು ಜಿಲ್ಲೆಯಲ್ಲಿ ಹೃದಯ ಸಂಬಂಧಿ ಪ್ರಕರಣಗಳು ಹಾಗೂ ಸಾವುಗಳ ಕುರಿತು ಅಧ್ಯಯನ ಕುರಿತ ವರದಿಯನ್ನು ಇಂದು ಬಿಡುಗಡೆ ಮಾಡಿದರು.
ತನಿಖೆಗೆ ಒಳಪಡಿಸಿದ 24 ಸಾವುಗಳಲ್ಲಿ, 14 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, 10 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ, ಒಟ್ಟು 24 ಸಾವುಗಳಲ್ಲಿ, 4 ಸಾವುಗಳು ಹೃದಯ ಸಂಬಂಧಿ ಸಮಸ್ಯೆಯಿಂದ ಸಂಭವಿಸಿಲ್ಲ. ಅವುಗಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ರಸ್ತೆ ಅಪಘಾತ, ತೀವ್ರ ಜಠರಗರುಳಿನ ಸೋಂಕು (ಸೋಂಕು) ಮತ್ತು ವಿದ್ಯುತ್ ಆಘಾತದಿಂದ ಒಂದು ಸಾವು ಸಂಭವಿಸಿದೆ ಎಂದರು.
ಉಳಿದ 20 ಸಾವುಗಳಲ್ಲಿ, 10 ಸಾವುಗಳು ದೃಢಪಟ್ಟ ಹೃದಯ ಸಂಬಂಧಿ ಸಾವುಗಳಾಗಿವೆ. 3 ಮಂದಿಗೆ ಈಗಾಗಲೇ ಹೃದಯ ಕಾಯಿಲೆ ಇತ್ತು, ಒಬ್ಬರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಒಬ್ಬರು ಆಂಜಿಯೋಪ್ಲ್ಯಾಸ್ಟಿ ನಂತರ ಒಬ್ಬರು ಡೈಲೇಟೆಡ್ ಕಾರ್ಡಿಯೊಮಯೋಪತಿ (ಹೃದಯ ವೈಫಲ್ಯ) ಹೊಂದಿದ್ದರು. 7 ಹೃದಯ ಸಂಬಂಧಿ ಸಾವುಗಳಲ್ಲಿ 4 ಮರಣೋತ್ತರ ಪರೀಕ್ಷೆಗಳಿಂದ ದೃಢಪಟ್ಟಿವೆ ಮತ್ತು 3 ಇಸಿಜಿ ಆಧಾರಿತವಾಗಿವೆ. ಇನ್ನುಳಿದ 10 ಸಾವುಗಳು ‘ಸಂಭವನೀಯ ಹೃದಯ ಸಂಬಂಧಿ ಸಾವುಗಳು’ ಎಂದು ಪರಿಗಣಿಸಲಾಗಿದೇ ಎಂದು ತಿಳಿಸಿದರು.
ಮೃತರಾದವರಲ್ಲಿ 75% ಕ್ಕಿಂತ ಹೆಚ್ಚು ಮಂದಿ ಒಂದಕ್ಕಿಂತ ಹೆಚ್ಚು ಹೃದಯ ಸಂಬಂಧಿ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಇವುಗಳಲ್ಲಿ ಮಧುಮೇಹ , ಸ್ಥೂಲಕಾಯತೆ, ಮದ್ಯಪಾನ,ಧೂಮಪಾನ, ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವರು ತಿಳಿಸಿದರು.
19, 21, 23, 32, 37, 38, ಮತ್ತು 43 ವರ್ಷ ವಯಸ್ಸಿನ ಯುವ ವ್ಯಕ್ತಿಗಳಲ್ಲಿ ಹಠಾತ್ ಸಾವುಗಳು ಸಂಭವಿಸಿರುವುದು ಕಳವಳಕಾರಿಯಾಗಿದೆ ಮತ್ತು ಇದನ್ನು ನಿರ್ಲಕ್ಷಿಸಲಾಗುವುದಿಲ್ಲ ಅದರಲ್ಲಿ 6 ಜನ ಆಟೋ ಮತ್ತು ಕ್ಯಾಬ್ ಚಾಲಕರಿದ್ದು ಸರಿಯಾದ ಸಮಯದಲ್ಲಿ ಊಟ ಮಾಡದೆ ಇರುವುದು, ಸರಿಯಾಗಿ ನಿದ್ರೆ ಮಾಡದೇ ಇರುವದು, ಒತ್ತಡದಲ್ಲಿ ಕೆಲಸ ಮಾಡುವುದು ಹಠಾತ್ ಸಾವಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.
ಅನೇಕ ಸಂದರ್ಭಗಳಲ್ಲಿ ಮೃತಪಟ್ಟವರನ್ನು ಸಾವಿಗೂ ಮುನ್ನ ಯಾವುದೇ ಆರೋಗ್ಯ ಸೌಲಭ್ಯಕ್ಕೆ ಕರೆತರಲಾಗಿಲ್ಲ. ಆಸ್ಪತ್ರೆಗಳಲ್ಲಿ ‘ಮೃತಪಟ್ಟವರು’ ಎಂದು ಘೋಷಿಸಿದವರಲ್ಲಿಯೂ ಸಹ, ಔಪಚಾರಿಕ ಮರಣೋತ್ತರ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಲಾಗಿಲ್ಲ. ಮರಣೋತ್ತರ ದತ್ತಾಂಶದ ಕೊರತೆ, ಅಗತ್ಯ ಕ್ಲಿನಿಕಲ್ ತನಿಖೆಗಳ ಅಲಭ್ಯತೆ (ಇಸಿಜಿಗಳು, ಕಾರ್ಡಿಯಾಕ್ ಎಂಜೈಮ್‌ಗಳು), ಮತ್ತು ಕುಟುಂಬ ಸದಸ್ಯರಿಂದ ಸೀಮಿತ ಸಹಕಾರವು ಸಾವಿನ ನಿರ್ದಿಷ್ಟ ಕಾರಣವನ್ನು ತಿಳಿಯಲು ಕಷ್ಟಕರವಾಗಿದೆ ಎಂದರು.
ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜಿಮ್‌ಗಳಲ್ಲಿನ ದೈಹಿಕ ತರಬೇತುದಾರರಂತಹ ನಿರ್ದಿಷ್ಟ ಗುಂಪುಗಳಿಗೆ ಸಿಪಿಆರ್ ತರಬೇತಿ ನೀಡಲಾಗುವುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ಹೃದಯ ಜ್ಯೋತಿ ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಟೋ ಮತ್ತು ಕ್ಯಾಬ್ ಚಾಲಕರಿಗೆ ತಪಾಸಣೆ ಮಾಡಿಸಲು ನಿರ್ಧರಿಸಲಾಗುವುದು.ಇದು ಹಾಸನ ಜಿಲ್ಲೆಯ ಒಂದು ಪ್ರತ್ಯೇಕ ಸಮಸ್ಯೆ ಏನಲ್ಲ ಇಂದಿನ ಜೀವನ ಶೈಲಿ, ಸರಿಯಾದ ಸಮಯದಲ್ಲಿ ಊಟ ಮಾಡದೆ ಇರುವುದು, ಸರಿಯಾಗಿ ನಿದ್ರೆ ಮಾಡದೇ ಇರುವದು, ಒತ್ತಡದಲ್ಲಿ ಕೆಲಸ ಮಾಡುವುದು ಹಠಾತ್ ಸಾವಿಗೆ ಕಾರಣವಾಗಿದೆ ಎಂದರು.
15 ವರ್ಷದ ಮಕ್ಕಳಿಗೆ ತಪಾಸಣೆ ಮಾಡಲಾಗುವುದು ಇದರಿಂದ ವಂಶವಾಹಿಯಾಗಿ ಏನಾದರೂ ಸಮಸ್ಯೆ ಇದ್ದರೆ ಗುರುತಿಸಿ ಸೂಕ್ತ ಕ್ರಮ ಕೈಗೊಂಡು ಮಾರ್ಗದರ್ಶನ ನೀಡಿ, ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಜೀವನಶೈಲಿ ಬದಲಾವಣೆಗೆ ಒತ್ತು:
ಆಧುನಿಕ ಜೀವನಶೈಲಿಯ ಪರಿಣಾಮಗಳನ್ನು ಎತ್ತಿ ತೋರಿಸಿದೆ. ಒತ್ತಡದ ಕೆಲಸ, ನಿದ್ರಾಹೀನತೆ, ಅನಿಯಮಿತ ಊಟ, ಮತ್ತು ತಪ್ಪು ಆಹಾರ ಪದ್ಧತಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಧೂಮಪಾನ, ಮದ್ಯಪಾನ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಗಳು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಅನಿವಾರ್ಯ. ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆಗೆ ಒತ್ತು ನೀಡಬೇಕು. ಇದು ಹಾಸನಕ್ಕೆ ಮಾತ್ರ ಸೀಮಿತವಲ್ಲ, ಬದಲಿಗೆ ಇಡೀ ಸಮಾಜಕ್ಕೆ ಅನ್ವಯವಾಗುವ ಸಂದೇಶ. ಆರೋಗ್ಯಕರ ಜೀವನಶೈಲಿಯ ಮೂಲಕ ಹಠಾತ್ ಸಾವುಗಳನ್ನು ತಡೆಗಟ್ಟಲು ನಾವೆಲ್ಲರೂ ಜಾಗೃತರಾಗಬೇಕು ಎಂದು ಸಚಿವರು ತಿಳಿಸಿದರು.