ಬೆಂಗಳೂರು(thenewzmirror.com): ಕೈಗಾರಿಕಾ ಉದ್ದೇಶಗಳಿಗಾಗಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ ಸರಕಾರವು ಸ್ವಾಧೀನ ಪಡಿಸಿಕೊಳ್ಳಲಿರುವ ಜಮೀನಿನ ಮಾಲೀಕರಿಗೆ ಒಂದೇ ಕಂತಿನಲ್ಲಿ ಸಂಪೂರ್ಣ ಪರಿಹಾರ ವಿತರಿಸಬೇಕು ಮತ್ತು ಈ ರೈತ ಕುಟುಂಬಗಳ ಒಬ್ಬ ಸದಸ್ಯರಿಗೆ ಉದ್ಯೋಗ ಕೊಡಬೇಕು ಎಂದು `ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತಪರ ಹೋರಾಟ ಸಮಿತಿ’ಯ ಮುಖಂಡರು ಗುರುವಾರ ಮನವಿ ಸಲ್ಲಿಸಿದ್ದಾರೆ.
ರೈತರ ಮನವಿಯನ್ನು ಸ್ವೀಕರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರು, ಸೂಕ್ತ ಕ್ರಮದ ಭರವಸೆ ನೀಡಿದರು. ಈ ಬಗ್ಗೆ ಕೆಐಎಡಿಬಿ ಸಿಇಒ ಅವರ ಜತೆ ಮಾತನಾಡಿ, ರೈತರ ಜತೆ ಸಭೆ ನಡೆಸುವಂತೆ ಸೂಚಿಸಿದರು.
ಪಿಎಸ್ಎಲ್ ಕಂಪನಿಯ ಹೆಸರಿನಲ್ಲಿ ಕೆಲವು ಮಧ್ಯವರ್ತಿಗಳು ಮುಗ್ಧ ರೈತರಿಗೆ ಹೆಚ್ಚಿನ ಹಣ ಕೊಡುವ ನಂಬಿಕೆ ಹುಟ್ಟಿಸಿ, ಕೇವಲ 1-2 ಲಕ್ಷ ರೂ. ಮಾತ್ರ ನೀಡಿ ಮೋಸ ಮಾಡಿದ್ದಾರೆ. ವಾಸ್ತವದಲ್ಲಿ ಈ ಜಮೀನು ಕೆಐಎಡಿಬಿಗೆ ಸೇರಿದ್ದು, ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರಕಾರವು ಈ ಜಮೀನಿನ ರೈತರಿಗೂ ನೇರವಾಗಿ ಪರಿಹಾರ ಸಂದಾಯ ಮಾಡಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿದೆ. ನಡುಪಿನಾಯಕನಹಳ್ಳಿ ಮತ್ತು ಯಣ್ಣಂಗೂರು ಗ್ರಾಮಗಳ ರೈತರಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ನಿಯೋಗವು ತಮ್ಮ ಗಮನಕ್ಕೆ ತಂದಿದೆ. ಈ ಬಗ್ಗೆಯೂ ಕೆಐಎಡಿಬಿ ತ್ವರಿತ ಗಮನ ಹರಿಸಲಿದೆ. ಸಂತ್ರಸ್ತ ರೈತರು ಪರಿಹಾರದ ವಿಷಯದಲ್ಲಿ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ರೈತರ ನಿಯೋಗದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎನ್ ಮುನೇಗೌಡ, ಬಿ ಎಂ ವೆಂಕಟೇಶ, ಸಂತೋಷ್, ಚನ್ನಪ್ಪ, ಈರಪ್ಪ, ಚಂದ್ರಪ್ಪ ಮುಂತಾದ ಮುಖಂಡರಿದ್ದರು.