ಬೆಂಗಳೂರು(www.thenewzmirror.com): ಕಾಂಗ್ರೆಸ್ ಸರ್ಕಾರದಿಂದ ನಾಳೆ ನಡೆಯುವ ಎರಡು ವರ್ಷದ ಸಾಧನಾ ಸಮಾವೇಶವನ್ನು ಟೀಕಿಸಿರುವ ರಾಜ್ಯ ಬಿಜೆಪಿ ಈ ಸಂಬಂಧ ಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ ಎನ್ನುವ ಪೋಸ್ಟರ್ ಬಿಡುಗಡೆ ಮಾಡಿದೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು, ರಾಜ್ಯ ಸರ್ಕಾರ ಕಳೆದ 2 ವರ್ಷಗಳಲ್ಲಿ ಮಾಡಿ ಸಾಧನೆಯನ್ನು ರಾಜ್ಯದ ಜನತೆಗೆ ತೋರಿಸುವುದಕ್ಕೆ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ ಬೆಂಗಳೂರು ಮಹಾನಗರದಲ್ಲಿ ಸುರಿದ ಭಾರೀ ಮಳೆಗೆ ಈ ಕಾಂಗ್ರೆಸ್ ಸರ್ಕಾರದ ಸಾಧನೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಸಾಧನೆ ಚಿತ್ರ ಬಾಕಿ ಇದೆ ಎಂದು ವ್ಯಂಗ್ಯವಾಡಿದರು.
ಹವಾಮಾನ ಇಲಾಖೆಯು ಒಂದು ವಾರದ ಮುಂಚೆ ಮಳೆಯ ಮುನ್ಸೂಚನೆ ನೀಡಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಬೆಂಗಳೂರು ಮಹಾನಗರದಲ್ಲಿ ಆಗಿರುವ ಮಳೆಯ ಅವಾಂತರಕ್ಕೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ನೇರಕಾರಣ.ಕಳೆದ 2 ವರ್ಷಗಳಲ್ಲಿ ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಬಂದು, ಹಿಂದಿನ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಮಸೂದೆಗೆ ಅನುಮೋದನೆ ಪಡೆದುಕೊಂಡ ನಂತರ ಬ್ರ್ಯಾಂಡ್ ಬೆಂಗಳೂರು ಹೋಗಿ ಗ್ರೇಟರ್ ಬೆಂಗಳೂರು ಆಗಿದೆ; ಗ್ರೇಟರ್ ಬೆಂಗಳೂರು ಹೋಗಿ ಮುಳುಗಡೆ ಬೆಂಗಳೂರು ಆಗಿದೆ. ಇದು ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಬೆಂಗಳೂರು ಮಹಾನಗರದಿಂದ ಕೋಟ್ಯಂತರ ತೆರಿಗೆ ಹಣ ಸಂಗ್ರಹವಾದರೂ, ಬೆಂಗಳೂರಿನಲ್ಲಿ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಉಸ್ತುವಾರಿಯಾದ ಡಿ.ಕೆ ಶಿವಕುಮಾರ್ ರವರು ಮಾಡಿರುವುದಿಲ್ಲ. ಆದರೆ ಇವರು ಒಂದುವಾರದಿಂದ ಪ್ರಚಾರದ ಸಲುವಾಗಿ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿರುವುದೇ ಇವರ ಸಾಧನೆಯಾಗಿದೆ.ಈ ವರ್ಷದಲ್ಲಿ ಜೂನ್ ತಿಂಗಳ ಮುನ್ನ ಅಂದರೆ ಮೇ ಮೊದಲವಾರದಲ್ಲಿ ಮುಂಗಾರು ಪ್ರಾರಂಭವಾಗಿ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಆದರೂ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆಡಳಿತ ಭಾಗವಾದ ಗ್ರೇಟರ್ ಬೆಂಗಳೂರು ಮಳೆ ಅವಾಂತರ ಮುಂಜಾಗ್ರತ ಕ್ರಮದ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.
ನಗರದ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಪತ್ರಿಕೆಗಳಲ್ಲಿ ಮತ್ತು ಡಿ.ಕೆ ಶಿವಕುಮಾರ್ ಜೊತೆಯಲ್ಲಿ ಹೇಳಿಕೆಗಳನ್ನು ಕೊಡುವುದು ಮತ್ತು ಸರ್ಕಾರಕ್ಕೆ ಆದಾಯವನ್ನು ಗಳಿಸಿಕೊಡುವುದರ ಮುಖೇನ ಕಾಲಕಳೆದರು. ಹೊರತಾಗಿ ಯಾವುದೇ ರೀತಿಯ ನಯಾ ಪೈಸೆ ಕೆಲಸವನ್ನು ಮಾಡಿರುವುದಿಲ್ಲ.ಬೆಂಗಳೂರಿನಲ್ಲಿ ಪ್ರತೀ ಬಾರಿ ಮಳೆಬಂದಾಗ ಪ್ರವಾಹ ಉಂಟುಮಾಡುವ ಸ್ಥಳಗಳಾದ ಸಾಯಿ ಲೇಔಟ್, ಬೆಂಗಳೂರು ದಕ್ಷಿಣ, ಅರಕೆರೆ, ಇನ್ನು ಮುಂತಾದ ಭಾಗಗಳು ಎಂದು ತಿಳಿದಿದೆ. ಆ ಭಾಗಗಳಲ್ಲಿ ಪ್ರವಾಹದ ಮುನ್ಸೂಚನೆಯಿಂದ ಯಾವ ಕ್ರಮಕೈಗೊಳ್ಳಬೇಕು ಎಂದು ಆ ಭಾಗದ ಚುನಾಯಿತ ಪ್ರತಿನಿಧಿಗಳಾಗಲೀ ಅಥವಾ ಬಿಬಿಎಂಪಿಯಾಗಲೀ ಅಥವಾ ಉಸ್ತುವಾರಿಯಾದ ಡಿ.ಕೆ ಶಿವಕುಮಾರ್ ಆಗಲೀ ಯಾವುದೇ ಕ್ರಮತೆಗೆದುಕೊಳ್ಳದೆ ಇರುವುದು ಈ ಮಳೆ ಅವಾಂತರಕ್ಕೆ ಡಿ.ಕೆ ಶಿವಕುಮಾರ್ ಅವರೇ ನೇರಹೊಣೆಗಾರರು ಎಂದು ತಿಳಿಸಿದರು.
ಬ್ರ್ಯಾಂಡ್ -ಗ್ರೇಟರ್ ಬೆಂಗಳೂರು ಸಂಪೂರ್ಣ ಕುಸಿತ:ಎಸ್. ಹರೀಶ್
ಡಿ.ಕೆ ಶಿವಕುಮಾರ್ ರವರ ಆಡಳಿತ ವೈಖರಿಯಿಂದ ಬ್ರ್ಯಾಂಡ್ ಅಥವಾ ಗ್ರೇಟರ್ ಬೆಂಗಳೂರು ಸಂಪೂರ್ಣವಾಗಿ ಕುಸಿದಿದೆ. ಬೆಂಗಳೂರು ಜನರ ಕಷ್ಟಗಳನ್ನು ಸ್ಪಂದಿಸದೆ ಬೇರೆ ಜಿಲ್ಲೆಯಲ್ಲಿ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಇದಕ್ಕೆ ಮೂಲ ಕಾರಣವೇ ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಕಾರ್ಪೋರೇಟರ್ ಇಲ್ಲದಿರುವುದು ಎಂದು ಎಸ್.ಹರೀಶ್ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಹೆಬ್ಬಾಳ, ಚಲಘಟ್ಟ, ವೃಷಭಾವತಿ ಮತ್ತು ಕೋರಮಂಗಲ ವ್ಯಾಲಿಗಳು ಇದ್ದು, ಈ ವ್ಯಾಲಿಗಳು ಸುಮಾರು 700 ಕಿಮೀ ವಿಸ್ತೀರ್ಣವನ್ನು ಹೊಂದಿರುತ್ತದೆ. ಮಳೆಗಾಲಕ್ಕಿಂತ ಮೊದಲು ಈ ನಾಲ್ಕು ವ್ಯಾಲಿಗಳಲ್ಲಿನ ಎಲ್ಲಾ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ ಇಂದಿನ ಸರ್ಕಾರಲ್ಲಿ ವ್ಯಾಲಿಗಳಲ್ಲಿನ ಕಾಲುವೆಗಳನ್ನು ಸ್ವಚ್ಛಗೊಳಿಸಲು ಮತ್ತು ರಸ್ತೆಗಳ ಗುಂಡಿ ಮುಚ್ಚಲು ದುಡ್ಡಿಲ್ಲದೆ 30 ಅಥವಾ 40 ಕೋಟಿ ವೆಚ್ಚದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆಯನ್ನು ಬೆಂಗಳೂರು ಜನರಿಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಉಪ ಮುಖ್ಯಮಂತ್ರಿಯವರಿಗೆ ನಾನು ಜ್ಞಾಪಿಸುವುದೇನೆಂದರೆ, ಹಿಂದೆ ನಗರದ ಸಾಯಿ ಲೇಔಟ್ ನಲ್ಲಿ ಮಳೆಯಿಂದಾಗ ಪ್ರವಾಹ ಸ್ಥಿತಿ ಎದುರಾದಾಗ ಇಬ್ಬರು ಬೋಟ್ನಲ್ಲಿ ಪ್ರಯಾಣಿಸಿ ಸ್ಥಳ ವೀಕ್ಷಣೆ ಮಾಡಿ ಈ ಅವಾಂತರಕ್ಕೆ ಶಾಶ್ವತ ಪರಿಹಾರ ಕೊಡುತ್ತೇವೆ ಎಂದು ಅಲ್ಲಿನ ಜನರಿಗೆ ತಿಳಿಸಿದ್ದರು. ಇಂದು ಮಳೆಯ ಅವಾಂತರಕ್ಕೆ ಅಲ್ಲಿನ ಜನರು ಶಾಪಹಾಕುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮತ್ತು ಡಿ.ಕೆ ಶಿವಕುಮಾರ್ ರವರು ಸಾಧನೆಯ ಸಮಾವೇಶ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಮತ್ತು ಬೆಂಗಳೂರಿನ ಸಮಸ್ಯೆಗಿಂತ ಕಾಂಗ್ರೆಸ್ಸಿನ ನಾಯಕರುಗಳಿಗೆ ಸಮಾವೇಶದ ಚಿಂತೆಯಾಗಿದ್ದು, ಯಾವ ಸಾಧನೆ ಮಾಡಿದ್ದಾರೆ ಎಂದು ಸಮಾವೇಶ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.