ಬೆಂಗಳೂರು(www.thenewzmirror.com):ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಕಲಿ ವೆಬ್‌ಸೈಟ್ ಗೂಗಲ್‌ನಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಬೆಂಗಳೂರು ಉತ್ತರ ವಲಯದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೂಗಲ್‌ನಲ್ಲಿ ಕೆಇಎ ಹೋಮ್ (KEA HOME) ಎಂದು ಹುಡುಕಿದಾಗ http://k̲-cet̤̤.org ಎನ್ನುವ ನಕಲಿ ಲಿಂಕ್ ಪತ್ತೆಯಾಗಿದ್ದು, ಇದರ ಮೂಲಕ ಅಭ್ಯರ್ಥಿಗಳ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ರಾಜ್ಯ ಮತ್ತು ಕೋರ್ಸ್ ವಿವರಗಳನ್ನು ಸಂಗ್ರಹಿಸುತ್ತಿರುವುದು ಗೊತ್ತಾಗಿದೆ ಎಂದು ಅವರು ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದ ವೆಬ್‌ಸೈಟ್ ವಿನ್ಯಾಸದ ಹಾಗೆಯೇ ನಕಲಿ ವೆಬ್‌ಸೈಟ್ ರೂಪಿಸಿದ್ದು, ಇದರಿಂದ ಸಾರ್ವಜನಿಕರು ಮೋಸ ಹೋಗುವ ಸಾಧ್ಯತೆ ಇದೆ. ಹೀಗಾಗಿ ಐಪಿ ವಿಳಾಸದ ಮೂಲಕ ಕಿಡಿಗೇಡಿಗಳನ್ನು ಪತ್ತೆಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ವಾಸ್ತವವಾಗಿ ಕೆಇಎ ವೆಬ್‌ಸೈಟ್ ವಿಂಡೊ ಮೂಲಕ ಯಾವ ಅಭ್ಯರ್ಥಿಗಳ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ. ಬದಲಿಗೆ, ವೆಬ್‌ಸೈಟ್‌ನಲ್ಲಿ ಅಪ್ಲಿಕೇಷನ್ ಮಾಡ್ಯೂಲ್ ಅಭಿವೃದ್ಧಿಪಡಿಸಿ, ಆ ಮೂಲಕವೇ ಅರ್ಜಿ ಹಾಕಲು ಅವಕಾಶ ನೀಡುತ್ತದೆ ಎಂದು ಗದ್ಯಾಳ ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಈ ರೀತಿಯ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಬೇಕು. ಅಸಲಿ ವೆಬ್ ಸೈಟ್ ಯಾವುದು ಎಂಬುದನ್ನು ತಿಳಿದು, ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.