ಬೆಂಗಳೂರು,(www.thenewzmirror.com):
ಹಾಲಿನ ಉತ್ಪನ್ನಗಳ ಅತಿಶ್ರೇಷ್ಠ ಬ್ರ್ಯಾಂಡ್ ನಂದಿನಿ. ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಕೆಎಂಎಫ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇದನ್ನೇ ನೆಪವಾಗಿಸಿಕೊಂಡು ನಂದಿನಿ ಹೆಸರಿನಲ್ಲೇ ನಕಲಿ ತುಪ್ಪ ತಿನ್ನಿಸುವ ವ್ಯವಸ್ಥಿತ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ.
ಟನ್ ಗಟ್ಟಲೇ ತುಂಬಿರುವ ಡಾಲ್ಡಾ ತುಪ್ಪ… ಲಿಲ್ಲಿ ಗೋಲ್ಡ್ ಹೆಸರಿನ ಪಾಮ್ ಆಯಿಲ್…. ಕೊಳಚೆ ನೀರಿನಂತಹ ಕೆಮಿಕಲ್ ಕಲರ್…. ಇದೆಲ್ಲವೂ ಸೇರಿದ್ರೆ ನಂದಿನಿ ತುಪ್ಪ ಆಗುತ್ತೆ…! ಅಚ್ಚರಿಯಾದರೂ ನೀವು ನಂಬಲೇಬೇಕು. ಪ್ಯಾಕ್ ನೋಡಿದ್ರೆ ಥೇಟ್ ನಂದಿನಿ ತುಪ್ಪದ ಥರನೇ ಇರುತ್ತೆ. ಆದ್ರೆ ನಂದಿನಿ ತುಪ್ಪ ಅಲ್ಲ. ಇಂತಹದ್ದೊಂದು ವ್ಯವಸ್ಥಿತ ಜಾಲ ಮೈಸೂರಿನಲ್ಲಿ ಪತ್ತೆಯಾಗಿದೆ.
ಮೈಸೂರು ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋಡಾನ್ ಪತ್ತೆಯಾಗಿದೆ. ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಸದಸ್ಯರಿಗೆ ನಕಲಿ ಜಾಲದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಂದು ಏಕಾಏಕಿ ದಾಳಿ ನಡೆಸಿದ ಸಮಿತಿ ಸದಸ್ಯರು, ಆರೋಪಿಗಳನ್ನು ಹಿಡಿಯಲು ಯತ್ನಿಸಿದರು.
ತಲಾ 15 ಕೆ.ಜಿ.ತೂಕದ ಸುಮಾರು 1000 ಟಿನ್‌ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಎಲ್ಲವನ್ನೂ ಕಂಡು ಸಮಿತಿ ಸದಸ್ಯರೂ ಅವಕ್ಕಾಗಿದ್ದಾರೆ. ಕೂಡಲೇ ಪೊಲೀಸರು, ಕರ್ನಾಟಕ ಹಾಲು ಉತ್ಪನ್ನಗಳ ಸಹಕಾರ ಒಕ್ಕೂಟ, ಫುಡ್ ಸೇಫ್ಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೆಎಂಎಫ್ ಉತ್ಪನ್ನಗಳ ಬಗ್ಗೆಯೇ ಗ್ರಾಹಕರು ಅನುಮಾನಗೊಳ್ಳುವಂತಹ ಜಾಲವಾದ ಹಿನ್ನೆಲೆಯಲ್ಲಿ ಮೈಮುಲ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ತುಪ್ಪ ಆರೋಗ್ಯಕರ. ಆದ್ರೆ ಡಾಲ್ಟಾ ದೇಹಕ್ಕೆ ಅಪಾಯಕಾರಿ. ಅದರಲ್ಲೂ ಯಾವ್ಯಾವುದೋ ಎಣ್ಣೆ, ರಸಾಯನಿಕ ಬಣ್ಣ ಬಳಸಿದ ನಕಲಿ ತುಪ್ಪ ದೇಹದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿಯೇ ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಸುಮಾರು 10ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಆರೋಪಿ ಈ ಜಾಲದ ಕಿಂಗ್‌ಪಿನ್ ಅನ್ನುವ ಮಾಹಿತಿ ಲಭ್ಯವಾಗಿದೆ. ಕೆಎಂಎಫ್ ನಕಲಿ ಜಾಲದ ವಿರುದ್ಧ ದೂರು ನೀಡಿದ್ದು, ಪೊಲೀಸ್ ತನಿಖೆಯಿಂದ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಬೇಕಿದೆ.