ಬೆಂಗಳೂರು(www.thenewzmirror.com):ಸರ್ಕಾರದ ವೈಫಲ್ಯಗಳ ಕುರಿತು ನಾವು ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದೆವು. ನಾವು ಸತ್ಯಾಂಶಗಳನ್ನು ಜನರಿಗೆ ತಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷವು ಆತಂಕಗೊಂಡು ಮಾನನಷ್ಟ ಮೊಕದ್ದಮೆ ದಾಖಲಿಸಿದೆ ಆದರೆ ಜನರಿಗೆ ಸತ್ಯ ತಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಜೊತೆ ಸಂವಾದಕ್ಕೆ ಬರಬೇಕು. ಟಿ.ವಿಗಳಲ್ಲಿ ಇದರ ಪ್ರಸಾರ ಆಗಲಿ. ಆರೋಪಗಳು ತಪ್ಪೆಂಬ ವಿಶ್ವಾಸವಿದ್ದರೆ ಮುಖ್ಯಮಂತ್ರಿಯವರು ಸಂವಾದಕ್ಕೆ ಬರಲಿ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಡಾ. ರಾಧಾಮೋಹನ್ ದಾಸ್ ಅಗ್ರವಾಲ್ ಸವಾಲು ಹಾಕಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕಾಂಗ್ರೆಸ್ ಪಕ್ಷ ಬಹುಮತ ಪಡೆದಿತ್ತು. ಆದರೆ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ನೇತೃತ್ವ ಮತ್ತು ವಿಜಯೇಂದ್ರ ಅವರ ಸ್ಥಳೀಯ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತ್ತು. ನಾವು 135 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ತಪ್ಪು ನಿರ್ಣಯ ಮಾಡಿದ್ದು ಕೇವಲ ಒಂದೇ ವರ್ಷದಲ್ಲಿ ಕರ್ನಾಟಕದ ಜನತೆಗೆ ಅರಿವಾಗಿತ್ತು ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ಬಿಜೆಪಿ ಕಡೆ ಜನರ ಒಲವು ಹೆಚ್ಚಾಗಿದ್ದು, ಈಗ ಚುನಾವಣೆ ನಡೆದರೆ ಬಿಜೆಪಿ 150ರಿಂದ 155 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ ಇದು ಸಂತಸದ ವಿಚಾರ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತೀವ್ರವಾಗಿದೆ. ಮುಸ್ಲಿಂ ತುಷ್ಟೀಕರಣ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಇದೇ ರೀತಿ ಮುಂದುವರೆದಲ್ಲಿ ಕಾಂಗ್ರೆಸ್ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಸೀಟುಗಳಿಗೆ ಕುಸಿಯಬಹುದೆಂದು ತಿಳಿಸಿದರು.
ಕಾಂಗ್ರೆಸ್ಸಿನ ಮಾನನಷ್ಟ ಮೊಕದ್ದಮೆ- ಟೀಕೆ
ಕಾಂಗ್ರೆಸ್ ಪಕ್ಷವು 2 ವರ್ಷಗಳ ಸಾಧನೆಗೆ ಸಮಾವೇಶ ಮಾಡಿತ್ತು. ಇನ್ನೊಂದೆಡೆ ಕಾಂಗ್ರೆಸ್ ಸರಕಾರದ ವಿಫಲತೆಗಳ ಕುರಿತು ಬಿಜೆಪಿಯು ಪತ್ರಿಕೆಗಳ ಮೂಲಕ ಜಾಹೀರಾತು ನೀಡಿ ಜನರಿಗೆ ಮಾಹಿತಿ ಕೊಟ್ಟಿತ್ತು. ನಾವು ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದೆವು. ನಾವು ಸತ್ಯಾಂಶಗಳನ್ನು ಜನರಿಗೆ ತಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷವು ಆತಂಕಗೊಂಡಿತ್ತು. ಅದು ಜನರಿಗೆ ಉತ್ತರ ಕೊಡಬೇಕಿತ್ತು. ಪ್ರಜಾಸತ್ತೆಯಲ್ಲಿ ಆರೋಪ- ಪ್ರತ್ಯಾರೋಪವು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ಭಾರತ ಮಾತ್ರವಲ್ಲ; ಬಹುತೇಕ ಜಗತ್ತಿನಲ್ಲೇ ಮೊದಲ ಬಾರಿಗೆ ಆಗಿದ್ದು ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ಡಾ. ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಟೀಕಿಸಿದರು.
ಹೇಗೆ ರಾಜನೋ ಅದೇರೀತಿ ಪ್ರಜೆ ಎಂಬಂತೆ ಕಾಂಗ್ರೆಸ್ ಪಕ್ಷದ ನಡವಳಿಕೆ ಇದೆ. ಸತ್ಯವನ್ನು ಅಡಗಿಸಿ ಇಡಬೇಡಿ. ಪ್ರಜಾಸತ್ತಾತ್ಮಕ ವಿಧಾನದಿಂದ ಓಡಿ ಹೋಗದಿರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಜೊತೆ ಸಂವಾದಕ್ಕೆ ಬರಬೇಕು. ಟಿ.ವಿಗಳಲ್ಲಿ ಇದರ ಪ್ರಸಾರ ಆಗಲಿ. ಆರೋಪಗಳು ತಪ್ಪೆಂಬ ವಿಶ್ವಾಸವಿದ್ದರೆ ಮುಖ್ಯಮಂತ್ರಿಯವರು ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಯಾವುದೇ ಕಾರ್ಯಕರ್ತರನ್ನು ಕಳಕೊಳ್ಳಲು ಬಯಸುವುದಿಲ್ಲ; ಶಾಸಕರಾದ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರರಿಗೆ ಸುಧಾರಣೆಗೆ ಅವಕಾಶ ನೀಡಿದ್ದೇವೆ. ಇಂಥ ಕ್ರಮಗಳಿಂದ ಬಿಜೆಪಿ ಇನ್ನಷ್ಟು ದೃಢ- ಸಶಕ್ತವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರಲ್ಲದೆ, ಉಚ್ಚಾಟನೆ ಸಂಬಂಧ ಪಕ್ಷದ ಕ್ರಮವನ್ನು ಸಮರ್ಥಿಸಿದರು.
ಕಾಂಗ್ರೆಸ್ ಸರಕಾರ ಇಲ್ಲ; ಇಲ್ಲಿದೆ ಮುಸ್ಲಿಂ ಲೀಗ್ ಸರಕಾರ
ರಾಜ್ಯದಲ್ಲಿನ ಕೋಮುದ್ವೇಷ ಮತ್ತು ಕೋಮು ಗಲಭೆಗಳಿಗೆ ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿ, ಹಿಂದೂ ಸಮಾಜದ ಅಪಮಾನ, ಹಿಂದೂ ಸಮಾಜದ ಮೇಲಿನ ಆಕ್ರಮಣವೇ ಕಾರಣ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ತುಷ್ಟೀಕರಣಕ್ಕಾಗಿ ವಕ್ಫ್ ಮಂಡಳಿಗೆ ಭಾರಿ ಪ್ರಮಾಣದ ಜಮೀನನ್ನು ನೀಡಿದ್ದು ತಮಗೂ ಗೊತ್ತಿದೆ. ಅವರಿಗೆ 150 ಕೋಟಿ ಕೊಟ್ಟದ್ದು, ಶೇ 4 ಮೀಸಲಾತಿ ನೀಡಿದ್ದು ನಾವು ನೋಡಿದ್ದೇವೆ. ಕಾಂಗ್ರೆಸ್ ರಾಜ್ಯಸಭಾ ಸದಸ್ಯರೊಬ್ಬರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎಂದು ಡಾ. ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಗಮನ ಸೆಳೆದರು.
ಅಂಗಡಿಯಲ್ಲಿ ಹನುಮಾನ್ ಪೂಜೆ ಮಾಡಿದ ಅಪರಾಧಕ್ಕೆ ಅಂಗಡಿಗೆ ನುಗ್ಗಿ ಹಲ್ಲೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಬದಲಾಗಿ ಬಹುತೇಕ ಮುಸ್ಲಿಂ ಲೀಗ್‍ನ ಸರಕಾರ ಆಡಳಿತದಲ್ಲಿದೆ; ಎಸ್‍ಡಿಪಿಐ ಮತ್ತು ಪಿಎಫ್‍ಐ ಸರಕಾರ ಇದ್ದಂತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕೈಬಿಡಲಿ. ರಾಷ್ಟ್ರವಾದದ ರಾಜಕಾರಣವನ್ನು ಅಳವಡಿಸಿಕೊಳ್ಳಲಿ ಎಂದು ಆಗ್ರಹಿಸಿದರು.
ನಮ್ಮ ಕೇಂದ್ರ ಸರಕಾರವು ಶೀಘ್ರವೇ 11 ವರ್ಷಗಳನ್ನು ಪೂರೈಸಲಿದೆ. ನಾವು ಮಾಡಿದ ಸಾಧನೆಗಳ ಪಟ್ಟಿ ದೊಡ್ಡದಿದೆ. ಅದನ್ನು ಬರೆದು ಸುಸ್ತಾಗುವಷ್ಟು ಸಾಧನೆಗಳನ್ನು ತಿಳಿಸುತ್ತೇವೆ ಎಂದು ಹೇಳಿದರು. ಕಾಗದದ ಹಾಳೆಗಳನ್ನು ಖಾಲಿ ಇಟ್ಟುಕೊಳ್ಳಿ; ಜೂನ್ 9ರಂದು ವೃತ್ತಪತ್ರಿಕೆಯನ್ನೂ ಖಾಲಿ ಇಟ್ಟುಕೊಳ್ಳಿ ಎಂದು ನಗುತ್ತ ನುಡಿದರು. ಇಲ್ಲಿನ ವಿಪಕ್ಷವಾದ ಬಿಜೆಪಿ ಸಾಧನೆ ನನಗೆ ಸಂತಸ ನೀಡಿದೆ ಎಂದರು. ವಿಜಯೇಂದ್ರ ಅತ್ಯಂತ ಉತ್ತಮ ವ್ಯಕ್ತಿ ಎಂದೂ ಹೇಳಿದರು.
ರಾಜ್ಯ ಸರಕಾರ ಪತನಗೊಂಡೀತು:
ಒಳಜಗಳದಿಂದ ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಯಾವುದೇ ಕ್ಷಣದಲ್ಲಿ ಸರಕಾರ ಬೀಳಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ ಸಿಎಂ ಆಗಿ ಉಳಿಯುತ್ತಾರಾ? ಅವರು ಪದತ್ಯಾಗ ಮಾಡಿದರೆ, ಪರಮೇಶ್ವರ್, ಶಿವಕುಮಾರ್, ಪ್ರಿಯಾಂಕ್ ಖರ್ಗೆ ಪೈಕಿ ಯಾರ ನೇತೃತ್ವ ಎಂಬುದನ್ನು ತಿಳಿಯಲು ಜನತೆ ಬಯಸುತ್ತಾರೆ ಎಂದು ತಿಳಿಸಿದರು