ಬೆಳಗಾವಿ(www.thenewzmirror.com): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಕೂಲ್ ರನ್ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಸ್ಥಿತಿಗತಿ,ಶಿಕ್ಷಣದ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದು ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಆಹಾರದ ಶುಚಿ-ರುಚಿಯನ್ನು ಪರಿಶೀಲಿಸಿದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿರುವ “ಕರ್ನಾಟಕ ಪಬ್ಲಿಕ್ ಶಾಲೆ”ಯಲ್ಲಿ ಸುಮಾರು 1ಕೋಟಿ 27 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕೊಠಡಿಗಳ ಕಾಮಗಾರಿಗೆ ಸಚಿವ ಮಧುಬಂಗಾರಪ್ಪ ಭೂಮಿ ಪೂಜೆಯನ್ನು ನೆರವೇರಿಸಿದರು.
ಬಳಿಕ ಮಕ್ಕಳ ಜೊತೆ ಮಧ್ಯಾಹ್ನದ ಬಿಸಿ ಊಟ ಸವಿದು ಆಹಾರದ ಗುಣಮಟ್ಟ ಪರಿಶೀಲಿಸಿದೆನು. ನಂತರ ಶಾಲೆಯ ಆಡಳಿತ ಮಂಡಳಿಯವರಿಗೆ ಆಹಾರದ ಗುಣಮಟ್ಟ ಕಾಪಾಡಿಕೊಂಡು ಹೋಗುವಂತೆ ಸೂಚಿಸಿ, ಅಡುಗೆ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು.ಶಾಲೆಯಲ್ಲಿ ನೂತನವಾಗಿ ಆರಂಭವಾಗಿರುವ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳಿಗೆ ಭೇಟಿನೀಡಿ, ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳು, ಸ್ವಚ್ಛತೆ ಹಾಗೂ ಮಕ್ಕಳ ಹಾಜರಾತಿ ಬಗ್ಗೆ ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತಕ್ಷೇತ್ರದ ಆನಿಗೊಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಭೇಟಿನೀಡಿ, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ಮಾಡಿ ಅವರ ಬೇಡಿಕೆಗಳನ್ನು ಆಲಿಸಿದರು.ಮಕ್ಕಳಿಗೆ ಅವಶ್ಯಕವಾಗಿ ಬೇಕಾದ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರವನ್ನು ಸರಿಯಾದ ಸಮಯಕ್ಕೆ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “2025 – 26ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಸಮಾರಂಭ”ದಲ್ಲಿ ಭಾಗವಹಿಸಿ, ಕಾಲೇಜು ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಠಡಿಗಳನ್ನು ಉದ್ಘಾಟಿಸಿರು.ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಿದರು.
ಸುವರ್ಣಸೌಧದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ:
ಬೆಳಗಾವಿಯ ಸುವರ್ಣಸೌಧದಲ್ಲಿ “ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖಾ ಪ್ರಗತಿ ಪರಿಶೀಲನಾ ಸಭೆ” ನಡೆಸಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ “ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ” ಕೈಗೊಳ್ಳಬೇಕಾದ ಹಲವಾರು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿದ ಸಚಿವ ಮಧುಬಂಗಾರಪ್ಪ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
“ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾದ ವಿಷಯಗಳು”:
ಪ್ರತಿ ಜಿಲ್ಲೆಯಲ್ಲಿ “ಓದು ಕರ್ನಾಟಕ” ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು.
ಶಿಕ್ಷಕರ ಹಾಗೂ ಅಧಿಕಾರಿಗಳು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಮನೆ ಮನೆಗೆ ಭೇಟಿನೀಡಿ “ಶಾಲೆಗೆ ಬಾ” ಎಂಬ ಅಭಿಯಾನ ಹಮ್ಮಿಕೊಳ್ಳುವ ಕುರಿತು.
ಜಿಲ್ಲೆಯಲ್ಲಿ ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಬಲಪಡಿಸುವ ಕುರಿತು.
ಜುಲೈ 30 ರವರೆಗೆ ಶಾಲಾ ಪ್ರವೇಶಕ್ಕೆ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವಂತೆ ಕ್ರಮ ವಹಿಸುವ ಬಗ್ಗೆ.
ಶಾಲೆಗಳ ಸುಧಾರಣೆಗೆ ಅವಶ್ಯಕವಾಗಿರುವ ಕಡೆಗಳಲ್ಲಿ ಇಲಾಖೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಕುರಿತು.
ಜುಲೈ ಅಂತ್ಯದೊಳಗಾಗಿ ಎಲ್ಲ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸಕ್ತಗಳು ವಿತರಿಸಬೇಕು ಜೊತೆಗೆ ಮಕ್ಕಳಿಗೆ ಶಾಲೆಗಳಲ್ಲಿ ವಿತರಿಸಲಾಗುವ ಶೂ ಹಾಗೂ ಸಾಕ್ಸ್ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವ ಕುರಿತು.
ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಗುರುತಿಸಿ ಇಲಾಖೆಯ ಗಮನಕ್ಕೆ ತರುವ ಕುರಿತು.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಸರಕಾರಿ ಶಾಲೆಗಳ ಸುಧಾರಣೆಗೆ ಕೈ ಜೋಡಿಸುವ ಕುರಿತು.
ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ಮತ್ತು ಶೌಚಾಲಯ ನಿರ್ಮಾಣ ಕಾರ್ಯ ಸೇರಿದಂತೆ ಅನೇಕ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಬಳಿಕ ಶಾಲಾ ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚು ಮಾಡಿರುವ ಜಿಲ್ಲೆಯ ವಿವಿಧ ಶಾಲಾ ಮುಖ್ಯೋಪಾಧ್ಯಾಯರಿಗೆ ಅಭಿನಂದಿಸಿ ಗೌರವಿಸಲಾಯಿತು.