ಬೆಂಗಳೂರು(thenewzmirror.com):
2020 ರ ಅಕ್ಟೋಬರ್ 18 ರಂದು ಬೆಳಗಿನ 8 ಗಂಟೆಯ ಸುಮಾರಿನಲ್ಲಿ, ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಳೆ ಮಂಡಿಯೊಂದರಲ್ಲಿ ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಆರೋಪಿ ಎಂ.ಗಣೇಶ್ ಮನೋಹರ್(40) ಇವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ 67 ನೇ ಸಿಸಿಹೆಚ್ ನ್ಯಾಯಾಲಯದ ಅಪರ ಜಿಲ್ಲಾ ನ್ಯಾಯಾಧೀಶರಾದ ಎ.ಜಯಪ್ರಕಾಶ್ ತೀರ್ಪು ನೀಡಿದ್ದಾರೆ.
2020 ರ ಅಕ್ಟೋಬರ್ 18 ರಂದು ಯಾವುದೇ ಉದ್ದೇಶವಿಲ್ಲದೇ, ಏಕಾಏಕಿ ಉದ್ವೇಗಕ್ಕೆ ಒಳಗಾದ ಎಂ.ಗಣೇಶ್ ಮನೋಹರ್ ಎಂಬ ಆರೋಪಿಯು, ಕಾಟನ್‌ಪೇಟೆಯ ಬಾಳೆ ಮಂಡಿಯೊಂದರಲ್ಲಿ ಅಂಜನಪ್ಪ ಗಾರ್ಡನ್ ನಿವಾಸಿ ಮಾರಿ ಬಿನ್ ರಾಮಮೂರ್ತಿ(34) ಹಾಗೂ ಮೈಸೂರು ರಸ್ತೆ ಫ್ಲವರ್ ಗಾರ್ಡನ್ ನಿವಾಸಿ ರಾಜೇಶ್ ಬಿನ್ ರಾಮು ಎಂಬುವರಿಗೆ ಚಾಕುವಿನಿಂದ ಇರಿದಿದ್ದರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು . ಇದೇ ಘಟನೆಯಲ್ಲಿ 4-5 ಜನರು ಗಾಯಗೊಂಡಿದ್ದರು. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು,ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ ಅವರು ವಾದ ಮಂಡಿಸಿ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ 10 ವರ್ಷಗಳ ಶಿಕ್ಷೆ ವಿಧಿಸಿದೆ.
ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.