ಬೆಂಗಳೂರು(thenewzmirror.com): ಕಲಬುರಗಿ ಜಿಲ್ಲೆಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದ್ದು, 2025-26ನೇ ಸಾಲಿನ ಆಯವ್ಯಯದಲ್ಲಿ ಸಹ ಘೋಷಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ 100 ಕೋಟಿ ರೂ ವೆಚ್ಚದಲ್ಲಿ ಅಗತ್ಯ ಮಾನವ ಸಂಪನ್ಮೂಲ ಹಾಗೂ ಸುಸಜ್ಜಿತ ಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಯುವನಿಧಿ ಯೋಜನೆ – ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ :
ಯುವನಿಧಿ ಯೋಜನೆಯ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯುವ ನಿಧಿಯೋಜನೆಯಡಿ 2025ನೇ ಮಾರ್ಚ್ 10ರ ಅಂತ್ಯಕ್ಕೆ ಒಟ್ಟು 2,62,207 ಅಭ್ಯರ್ಥಿಗಳು ನೋಂದಾಯಿಸಿರುತ್ತಾರೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್ 2023ರ ಸೆಕ್ಷನ್ 6 ಅನ್ವಯ ಸಂಬಂಧಿಸಿದ ಫಲಾನುಭವಿ ದತ್ತಾಂಶವನ್ನು ಅವರ ಒಪ್ಪುಗೆ ಇಲ್ಲದೆ ಮೊತ್ತೊಬ್ಬರಿಗೆ ಹಂಚಲು ಅವಕಾಶ ಇರುವುದಿಲ್ಲ. ಯುವನಿಧಿ ಯೋಜನೆಯಡಿ ನೋಂದಾಯಿಸಿದ ಫಲಾನುಭವಿಗಳ ವೈಯಕ್ತಿಕ ದತ್ತಾಂಶವನ್ನು / ಪೂರ್ಣ ಮಾಹಿತಿಯುಳ್ಳ ಪಟ್ಟಿಯನ್ನು ಫಲಾನುಭವಿಗಳ ಒಪ್ಪಿಗೆ ಇಲ್ಲದೆ ಮೂರನೇ ವ್ಯಕ್ತಿಗಳಿಗೆ ಒದಗಿಸಲು ಅವಕಾಶ ವಿರುವುದಿಲ್ಲ.
ಯುವನಿಧಿ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಪಾಸಾಗಿ 6 ತಿಂಗಳ (180 ದಿನ) ಒಳಗೆ ನೌಕರಿ ಸಿಗಲಿಲ್ಲ ಎಂದಾಗ ಮಾತ್ರ ಯುವನಿಧಿ ಯೋಜನೆಯಡಿ ಬರುತ್ತಾರೆ. ಕರ್ನಾಟಕ ರಹವಾಸಿಯಾಗಿರುವುದಕ್ಕೆ ದಾಖಲೆ ಪರಿಶೀಲನೆಗೆ ಡಿಡಿಪಿಐ, ಡಿಡಿಪಿಯು ಮತ್ತು ಡಿಇಇಒ ಇವರ ಲಾಗಿನ್‍ಗಳಲ್ಲಿ ಒಟ್ಟು 16,648 ಅರ್ಜಿಗಳು ಭೌತಿಕ ಪರಿಶೀಲನೆ ಬಾಕಿ ಇರುತ್ತವೆ. ಯುವನಿಧಿ ಯೋಜನೆಯಡಿ ಜನವರಿ 2025ರ ಅಂತ್ಯಕ್ಕೆ 1,74,170 ಫಲನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ :
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಜಿಟಿಟಿಸಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮುಖೇನ 2065 ಅಭ್ಯರ್ಥಿಗಳಿಗೆ ತರಬೇತಿಯು ಪೂರ್ಣಗೊಂಡಿದ್ದು, 9130 ಅಭ್ಯರ್ಥಿಗಳಿಗೆ ತರಬೇತಿ ನಡೆಯುತ್ತಿರುತ್ತದೆ. ಹಾಗೂ ಐಎಲ್‍ಸಿ ಮತ್ತು ಪ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮದ ಮುಖೇನ 120 ಅಭ್ಯಥಿಗಳಿಗೆ ತರಬೇತಿ ಪೂರ್ಣಗೊಂಡಿದ್ದು, 717 ಅಭ್ಯರ್ಥಿಗಳಿಗೆ ತರಬೇತಿ ನಡೆಯುತ್ತಿರುತ್ತದೆ. ಉಳಿದಂತೆ ಕಲಿಕೆ ಜೊತೆ ಕೌಶಲ್ಯ ಕಾರ್ಯಕ್ರಮದಡಿ 28893 ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಸೌರ ಶಕ್ತಿ ಮತ್ತು ಪವನ ಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ:
ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ಶಕ್ತಿ ಮತ್ತು ಪವನ ಶಕ್ತಿ ಉತ್ಪಾದನಾ ಘಟಕಗಳನ್ನು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪವನ ಸೋಲಾರ್ ಒಳಗೊಂಡಂತೆ ಇನ್ನಿತರ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸುವುದನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು “ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27” ನ್ನು ಜಾರಿಗೆ ತಂದಿರುತ್ತದೆ. ಈ ನೀತಿಯಲ್ಲಿ ಸ್ಪರ್ಧಾತ್ಮಕ ಬಿಡ್ ಮುಖೇನ ಸ್ವಯಂ ಬಳಕೆ, ಸಮೂಹ ಸ್ವಯಂ ಬಳಕೆ, ಮೂರನೇ ವ್ಯಕ್ತಿ ಮಾರಾಟ ಮತ್ತು ಖಾಸಗಿ ಪಾರ್ಕ್ ವರ್ಗಗಳಡಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪವನ ಮತ್ತು ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಜಿಲ್ಲಾ / ತಾಲ್ಲೂಕುವಾರು ಸಂಭವನೀಯ ಸಾಮರ್ಥ್ಯವನ್ನು ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಸಂಸ್ಥೆಗಳಿಂದ ಪಡೆಯಲು ಕ್ರೆಡಲ್ ವೆಬ್ ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಅದರಂತೆ ರಾಯಚೂರಿನಲ್ಲಿ 6055 ಸಾಮಮರ್ಥ್ಯದ ಪವನ ವಿದ್ಯುತ್ 50275 ಸಾಮರ್ಥ್ಯದ ಸೌರ ವಿದ್ಯುತ್ ಮತ್ತು ಕಲಬುರಗಿಯಲ್ಲಿ 2154.89 ಪವನ ವಿದ್ಯುತ್ ಹಾಗೂ 41883 ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಕ್ರೆಡಲ್ ವತಿಯಿಂದ ಕಲಬುರಗಿ ತಾಲ್ಲೂಕಿನ ನದಿಸಿನ್ನೂರ ಫಿರೋಜಾಬಾದ್ ಹಾಗೂ ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‍ನ ಒಡೆತನದಲ್ಲಿರುವ 551 ಎಕರೆ ಜಮೀನಿನಲ್ಲಿ ಟ್ಯಾರಿಪ್ ಬೇಸ್ಡ್ ಕಾಂಪಿಟೇಟಿವ್ ಬಿಡ್ಡಿಂಗ್ ವರ್ಗದಡಿ 100 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದ ಜೊತೆಗೆ ಗಂಟೆಗೆ 100 ಮೆಗಾ ವ್ಯಾಟ್ ವ್ಯವಸ್ಥೆಯನ್ನು ಹೊಂದಿದ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆ.ಈ.ಆರ್.ಸಿ ಅವರಿಂದ ಟ್ಯಾರೀಪ್ ಅಡಾಪ್ಟ್ ಆದ ತಕ್ಷಣ ಯಶಸ್ವಿ ಬಿಡ್ಡುದಾರರಿಗೆ ಲೆಟರ್ ಆಫ್ ಅವಾರ್ಡ್ ನೀಡಲಾಗುವುದು ಎಂದು ತಿಳಿಸಿದರು.