ಹಾವೇರಿ(www.thenewzmirror.com): ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರುತ್ತಾರೊ ಇಲ್ಲವೋ ಅನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಹೇಳಬೇಕು. ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯವರೆಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೂ ಈ ನಾಟಕ ನಡೆಯುತ್ತಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರು ಎಷ್ಟು ಬಾರಿ 5 ವರ್ಷ ಇರುತ್ತೇನೆ ಅಂತ ಹೇಳುತ್ತಾರೊ ಅಷ್ಟು ಬಾರಿ ಅವರ ಮುಂದುವರಿಕೆ ಬಗ್ಗೆ ಪ್ರಶ್ನೆ ಬರುತ್ತದೆ. ಈ ವಿಚಾರದಲ್ಲಿ ಯಾರು ಮಾತನಾಡಬೇಕೋ ಅವರು ಸುಮ್ಮನೇ ಇದ್ದಾರೆ ಹೈಕಮಾಂಡ್ ಎಲ್ಲಿವರೆಗೂ ಈ ಬಗ್ಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಇದು ನಾಟಕ ನಡೆಯುತ್ತಲೇ ಇರುತ್ತದೆ ಎಂದರು.
ಸಿದ್ದರಾಮಯ್ಯ ಅವರು ಮುಂದುವರೆದರೂ ಅಷ್ಟೆ, ಬಿಟ್ಟರೂ ಅಷ್ಟೆ. ಆಡಳಿತ ಹದಗೆಡಲು ಅವಕಾಶ ಮಾಡಿಕೊಡಬಾರದು ಅಷ್ಟೆ. ಸಿದ್ದರಾಮಯ್ಯನವರು ನಾನು 5 ವರ್ಷ ಇರುತ್ತೇನೆ ಅಂತ ಹೇಳುವುದು. ಇಲ್ಲ ಅವರು 5 ವರ್ಷ ಇರಲ್ಲ ಅಂತ ಕೆಲವರು ಹೇಳುವುದು ಆಗುತ್ತಿದೆ. ಇದಕ್ಕೆ ಅಂತಿಮ ಯಾರು ಹಾಡಬೇಕು? ಹೈಕಮಾಂಡ್ ಯಾಕೆ ಅವರು ಮುಂದುವರೆಯುತ್ತಾರೆ ಅಂತ ಹೇಳಿಲ್ಲ? ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು ಹೇಳುವುದನ್ನು ಯಾರೂ ನಂಬುವುದಕ್ಕೆ ತಯಾರಿಲ್ಲ ಹೈಕಮಾಂಡ್ ಈ ಬಗ್ಗೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಲ್ಲಿ ಗುತ್ತಿಗೆ ನೌಕರರಿಗೂ ಸಂಬಳ ಕೊಡಲು ಹಣ ಇಲ್ಲ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೌಕರರಿಗೆ ಮೂರು ನಾಲ್ಕು ತಿಂಗಳಿಗೆ ಒಮ್ಮೆ ಒಂದು ತಿಂಗಳ ಸಂಬಳ ಹಾಕುತ್ತಿದ್ದಾರೆ ಎಂದು ಹೇಳಿದರು.
ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹ:
ರಾಜ್ಯದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದೆ. ಗೊಬ್ಬರ ಪೂರೈಕೆ ಆಗುತ್ತಿಲ್ಲ. ಅತ್ಯಧಿಕ ಯೂರಿಯಾ ಅಗತ್ಯ ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಮತ್ತು ಗೊಬ್ಬರ ಪೂರೈಕೆ ಮಾಡುವುದು ಕೃಷಿ ಇಲಾಖೆ ಕರ್ತವ್ಯ. ಕೃಷಿ ಇಲಾಖೆ ಯಾವುದೇ ಮುಂದಾಲೋಚನೆ ಇಲ್ಲದೇ ಕೆಲಸ ಮಾಡುತ್ತಿದೆ. ಗೊಬ್ಬರದ ವಿಚಾರದಲ್ಲಿ ಬ್ಲಾಕ್ ಮಾರ್ಕೇಟ್ ಪ್ರಾರಂಭ ಆಗಿದೆ. ಡೀಲರ್ ಗಳು ಗೊಬ್ಬರವನ್ನು ಬ್ಲ್ಯಾಕ್ ಮಾರ್ಕೇಟ್ ನಲ್ಲಿ ಮಾರುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವಾರು ಬಾರಿ ಮನವಿ ಕೊಟ್ಟರೂ ಕೂಡಾ ಯಾವುದೇ ರೀತಿಯ ಗೊಬ್ಬರ ಒದಗಿಸುವ ಕೆಲಸ ಆಗುತ್ತಿಲ್ಲ. ಮಾರ್ಕೆಟಿಂಗ್ ಫೆಡೆರೇಷನ್ ನಿಂದ ಸೊಸೈಟಿಗಳಿಗೆ ಗೊಬ್ಬರ ಒದಗಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇವರು ಅದನ್ನೂ ತಮ್ಮ ವಶಕ್ಕೆ ಪಡೆದು ಸೊಸೈಟಿಗಳಿಗೂ ಗೊಬ್ಬರ ಸಿಗದಂತೆ ಮಾಡಿದ್ದಾರೆ. ಕೃಷಿ ಸಚಿವರು ಈ ವರ್ಷದ ಅಗತ್ಯತೆಯ ಅನುಗುಣವಾಗಿ ಹಾವೇರಿ ಜಿಲ್ಲೆಯ ರೈತರ ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹೆಣ್ಣು ಮಕ್ಕಳ ಮಾರಾಟ ಜಾಲ ದುರಂತ:
ಹಾನಗಲ್ ತಾಲೂಕು ಬ್ಯಾಗವಾದಿ ಗ್ರಾಮದಲ್ಲಿ ಹೆಣ್ಣುಮಕ್ಕಳು ಮಾರಾಟ ಜಾಲ ಪತ್ತೆಯಾಗಿರುವುದು ದುರಂತ. ಒಟ್ಟಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಈ ತರದ ಚಟುವಟಿಕೆಗಳು ಸಮಾಜಕ್ಕೆ ಮಾರಕ. ಜಿಲ್ಲೆಯಲ್ಲಿ ಜೂಜು ಹೆಚ್ಚಾಗಿದೆ. ಮುಕ್ತವಾಗಿ ಆಗಿ ಇಸ್ಪೀಟ್ ಆಡುತ್ತಾರೆ. ಚಿಕ್ಕ ಮಕ್ಕಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುವ ಜಾಲ ಪತ್ತೆಯಾಗಿರುವುದು ದುರಂತ. ಇಂಥ ಜಾಲ ನಮ್ಮ ಜಿಲ್ಲೆಯಲ್ಲಿ ಇದೆ ಅನ್ನುವುದು ನಂಬಲು ಆಗುತ್ತಿಲ್ಲ ಎಂದು ಹೇಳಿದರು.
ಪ್ರಕರಣದ ಆರೋಪಿ ಆ ಹೆಣ್ಣು ಮಗಳು ಹಾಗೂ ಅವಳ ಮಗಳು ಹಾಗೂ ಅವರ ಜೊತೆ ಇದ್ದವರನ್ನು ಇನ್ನೂ ಬಂಧನ ಮಾಡಿಲ್ಲ. ಯಾರು ಮುಖ್ಯವಾಗಿ ದಂಧೆ ನಡೆಸುತ್ತಿದ್ದಾರೋ ಅವರನ್ನು ಬಂಧನ ಮಾಡಿಲ್ಲ. ಈ ಪ್ರಕರಣದಲ್ಲಿ ಎಸ್. ಪಿ. ಮುತವರ್ಜಿ ವಹಿಸಬೇಕು. ಹೆಣ್ಣ ಮಕ್ಕಳ ಸುರಕ್ಷತೆ ಏನು? ಬ್ಯಾಗವಾದಿ ಗ್ರಾಮದಲ್ಲಿ ಆರೋಪಿ ಲಕ್ಕವ್ವ ಮನೆ ಎದುರಿಗೇ ಅಂಗನವಾಡಿ ಇದೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಲಗಿಕೊಂಡಿದಿಯಾ? ಇಲಾಖೆಯಿಂದ ದೂರು ಕೊಟ್ಟಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು
ಇಡೀ ಜಿಲ್ಲೆಯಲ್ಲಿ ಯಾರು ಕಳ್ಳರಿದ್ದಾರೆ ಅವರಿಗೆ ರಕ್ಷಣೆ ಇದೆ
ಗುಂಡಾಗಳು ಎರಡು ಮೂರು ತಾಸಿನಲ್ಲಿ ಬಿಡುಗಡೆ ಆಗುತ್ತಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರೇ ರಾಜಿ ಮಾಡುತ್ತಿದಾರೆ ಅಂತ ಸುದ್ದಿ ಇದೆ. ರಾಜೀ ಪ್ರಯತ್ನದ ಬಗ್ಗೆಯೂ ತನಿಖೆ ಆಗಬೇಕು.ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಸಚಿವರು, ಮುಖ್ಯಮಂತ್ರಿ ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.