ಬೆಂಗಳೂರು(www.thenewzmirror.com): ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದು ಖಂಡನೀಯವಾಗಿದ್ದು ಕೂಡಲೇ ಹಾಲಿನ ದರ ಹೆಚ್ಚಳ ನಿರ್ಧಾರ ವಾಪಸ್ ಪಡೆಯಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹಾಲಿನ ದರ ಹೆಚ್ಚಳ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಕಾಂಗ್ರೇಸ್ ಸರ್ಕಾರದಿಂದ ಮತ್ತೆ 1 ಲೀಟರ್ ಹಾಲಿಗೆ 4 ರೂಪಾಯಿ ಹಾಲಿನ ದರ ಏರಿಕೆ ಮಾಡಿರುವುದು ಖಂಡನೀಯ. ಈ ಸರ್ಕಾರ ಜನರಿಗೆ ದರ ಏರಿಕೆ ಬರೆ ಹಾಕಿದ್ದಾರೆ. ಈ ಕಳೆದ 2-3 ತಿಂಗಳ ಹಿಂದೆ ಹಾಲಿಗೆ 2 ರೂ ಹೆಚ್ಚು ಮಾಡಿತ್ತು, ಈ ಹಿಂದೆ ಹೆಚ್ಚುವರಿ 50 ಎಂ ಎಲ್ ಕೊಟ್ಟು ಈಗ ಅದನ್ನೂ ಕೂಡ ಕಡಿತ ಮಾಡಿದ್ದಾರೆ. ಹೀಗಾಗಿ ಈ ಒಂದು ವರ್ಷದಲ್ಲಿ 6.ರೂ ಲೀಟರ್ ಹಾಲಿಗೆ ಹೆಚ್ಚಿಸಿದೆ ಎಂದು ಟೀಕಿಸಿದರು.
ಈ ಸರ್ಕಾರಕ್ಕೆ ದರ ಹೆಚ್ಚಳ ಮಾಡುವುದೇ ಸಾಧನೆಯಾಗಿದೆ. ಜನನ ಪ್ರಮಾಣ ಪತ್ರ ಹಿಡಿದು, ಮರಣ ಪತ್ರ, ಸ್ಟ್ಯಾಂಪ್ ಡ್ಯೂಟಿ ದರ, ಬಸ್ ದರ, ವಿದ್ಯುತ್ ದರ, ಮನೆ ತೆರಿಗೆ ಹೆಚ್ಚಳ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಇದು ಮನುಷ್ಯತ್ವ ಇಲ್ಲದ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ದರ ಹೆಚ್ಚಿಸದ ಪದಾರ್ಥಗಳೇ ಇಲ್ಲವಾಗಿದೆ ಎಲ್ಲ ವಸ್ತುಗಳ ದರ ಏರಿಕೆ ಮಾಡಿದ್ದಾರೆ.ಜನರನ್ನ ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ. ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ, ರಕ್ತ ಹೀರುವ ಸರ್ಕಾರವಾಗಿದೆ, ಕೂಡಲೇ ಸರ್ಕಾರ ಹಾಲಿನ ದರ ಏರಿಕೆ ವಾಪಸ್ ಪಡೆಯಬೇಕು ಇಲ್ಲದಿದ್ದಲ್ಲಿ ಹಾಲಿನ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದರು.