ಸಹಕಾರಿ ಸಚಿವನಾಗಿ ಅಂದು ಹಚ್ಚಿದ ಹಣತೆ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಬೆಳಕು ತಂದಿದೆ:ಡಿಸಿಎಂ ಡಿಕೆ ಶಿವಕುಮಾರ್

RELATED POSTS

ಮಂಗಳೂರು(www.thenewzmirror.com): ಎಸ್.ಎಂ ಕೃಷ್ಣ ಸಂಪುಟದಲ್ಲಿ ಸಹಕಾರಿ ಸಚಿವನಾಗಿ ಅಂದು ಹಚ್ಚಿದ ಹಣತೆ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಬೆಳಕು ತಂದಿದೆ, ಇನ್ನೂ ಉರಿಯುತ್ತಲೇ ಇದೆ. ʼಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ’ ಎಂಬಂತೆ ಎಲ್ಲರಿಗೂ ಮಂಗಳವಾಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಗಳೂರಿನ ಬಂಗ್ರ ಕೂಳೂರುನಲ್ಲಿ ಶನಿವಾರ ನಡೆದ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,”ಇಪ್ಪತ್ತೈದು ವರ್ಷದ ಹಿಂದೆ ಎಸ್ ಎಂ.ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಮಂತ್ರಿಯಾಗಿದ್ದ ವೇಳೆ ಈ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ್ದೆ. ಅಂದು ಹಚ್ಚಿದ ಹಣತೆ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಬೆಳಕು ತಂದಿದೆ, ಇನ್ನೂ ಉರಿಯುತ್ತಲೇ ಇದೆ. ʼಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ’ ಎಂಬಂತೆ ಎಲ್ಲರಿಗೂ ಮಂಗಳವಾಗಲಿ, ಶುಭವಾಗಲಿ, ಆರೋಗ್ಯವಂತರಾಗಲಿ, ಐಶ್ವರ್ಯವಂತರಾಗಲಿ, ನೆಮ್ಮದಿಯಿಂದ ಬದುಕಲಿ ಎಂದು ಈ ಜ್ಯೋತಿಯನ್ನು ಮತ್ತೆ ನಾವೆಲ್ಲ ಬೆಳಗಿದ್ದೇವೆ” ಎಂದು ಹೇಳಿದರು.

“ಹೆಣ್ಣು ಕುಟುಂಬದ ಕಣ್ಣು. ಅವರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂದು ಕೃಷ್ಣ ಅವರ ಸರ್ಕಾರದಲ್ಲಿ  ಸ್ತ್ರೀ ಶಕ್ತಿ ಕಾರ್ಯಕ್ರಮ ರೂಪಿಸಿದ್ದೆವು. ರಾಜೇಂದ್ರ ಕುಮಾರ್‌ ಅವರು ಯಾವುದೇ ರಾಜಕೀಯ ಸ್ಥಾನಮಾನದ ನಿರೀಕ್ಷೆ ಇಲ್ಲದೆ ಕರಾವಳಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜನರ- ತಾಯಂದಿರ ಸೇವೆ ಮಾಡಬೇಕು. ಎಲ್ಲರಿಗೂ ಆರ್ಥಿಕವಾಗಿ ಶಕ್ತಿ ಕೊಡಬೇಕೆಂದು ನವೋದಯ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿದರು” ಎಂದರು.

“ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ. ಪದುಮನಾಭನ ಪಾದ ಭಜನೆ ಪರಮಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ, ಇಷ್ಟು ಜನಸಾಗರದ ತಾಯಂದಿರ ಆಶೀರ್ವಾದ ಪಡೆಯಲು ಈ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಬಂಗಾರದ ಬೆಲೆ ಕೊಳ್ಳುವವನಿಗೆ ಹಾಗೂ ಮಾರುವವನಿಗೆ ಮಾತ್ರ ಗೊತ್ತು. ಅದೇರೀತಿ ಯಾವ ಕುಟುಂಬ ಬದುಕುತ್ತದೆ, ಯಾವ ಸಂಸಾರ ಬದುಕುತ್ತದೆ, ಇಡೀ ಜೀವನ ಶಾಶ್ವತವಾಗಿ ಉಳಿಯುತ್ತದೆ ಅವರಿಗೆ ಮಾತ್ರ ಹೆಣ್ಣುಮಕ್ಕಳ ಬೆಲೆ ಗೊತ್ತು. ಹೆಣ್ಣುಮಕ್ಕಳ ತ್ಯಾಗ ಅರಿಯಬೇಕು. ಆ ಕುಟುಂಬದ ಶಕ್ತಿಯಾಗಬೇಕು” ಎಂದು ಬಣ್ಣಿಸಿದರು.

“ಲಕ್ಷಾಂತರ ತಾಯಂದಿರು ತಮ್ಮ ಕುಟುಂಬಗಳನ್ನು ಬೆಳೆಸಿ, ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿ ಶಕ್ತಿ. ನಮ್ಮಲ್ಲಿ ಆಹ್ವಾನ ಪತ್ರಿಕೆ ನೀಡುವಾಗ ಶ್ರೀಮತಿ- ಶ್ರೀ ಎಂದು ಬರೆದಿದ್ದರು. ಶಿವನನ್ನು ಪಾರ್ವತಿ ಪರಮೇಶ್ವರ, ಶ್ರೀನಿವಾಸನನ್ನು ಲಕ್ಷ್ಮೀ- ವೆಂಕಟೇಶ್ವರ ಎನ್ನುತ್ತೇವೆ. ಗಣೇಶನ ಹಬ್ಬಕ್ಕೂ ಮುಂಚೆ ಗೌರಿ ಹಬ್ಬ ಮಾಡುತ್ತೇವೆ, ಭೂಮಿಗೆ ಮಾತೃಭೂಮಿ ಎನ್ನುತ್ತೇವೆ; ಭಾಷೆಗೆ ಮಾತೃಭಾಷೆ ಎನ್ನುತ್ತೇವೆ. ಹೀಗೆ ಮಹಿಳೆಯರಿಗೆ ಆದ್ಯತೆ ನೀಡುವುದು ನಮ್ಮ ಸಂಸ್ಕೃತಿ” ಎಂದರು.

“ನಾನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನನ್ನ ರಾಜಕೀಯ ಜೀವನ ಆರಂಭಿಸಿದ್ದೆ. ನಂತರ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿ, ಸಹಕಾರಿ ಸಚಿವನಾಗಿ ಈಗ ಉಪಮುಖ್ಯಮಂತ್ರಿಯಾಗಿ ಜನರ ಮುಂದೆ ನಿಂತಿದ್ದೇನೆ” ಎಂದು ಹೇಳಿದರು.

“ಪ್ರಯತ್ನಗಳು ವಿಫಲ ಆಗಬಹುದು, ಆದರೆ ಪ್ರಾರ್ಥನೆ ವಿಫಲವಾಗಲ್ಲ. ಪ್ರಾರ್ಥನೆ ಸಲ್ಲಿಸಲು ಎಂದೇ‌ ಕರಾವಳಿ ಪ್ರದೇಶಕ್ಕೆ ಬರುತ್ತೇವ ಸಂತೋಷ ಆಗುತ್ತದೆ.  ಈ ಭಾಗದ ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ತಾಣವಾಗಿದೆ. ಈ ಪ್ರದೇಶ ಯಾವುದರಲ್ಲೂ ಕಮ್ಮಿ ಇಲ್ಲ, ಶಿಕ್ಷಣ, ಧಾರ್ಮಿಕತೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಇಲ್ಲಿ ಪ್ರಗತಿ ಸಾಧಿಸಲಾಗಿದೆ” ಎಂದರು.

“ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿ ಮಾಡುತ್ತಿದ್ದಾರೆ, ಅದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ. ಇಲ್ಲಿ ಕೊಟ್ಟ ಮಾತುಗಳನ್ನ ನಾವೂ ಉಳಿಸಿಕೊಂಡು ಬರುತ್ತಿದ್ದೇವೆ. ಈ ಜಿಲ್ಲೆ ಬಗ್ಗೆ ಅಪಾರ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದ್ದೇನೆ. ಇಲ್ಲಿನ ಜನ ಹೆಚ್ಚು ಬುದ್ಧಿವಂತರು, ವಿದ್ಯಾವಂತರು. ಅತಿಹೆಚ್ಚು ವಿದ್ಯಾವಂತರನ್ನು ಕೊಟ್ಟ ಜಿಲ್ಲೆ ಇದು. ದೇಶದಲ್ಲಿ ಅತಿ ಹೆಚ್ಚು ಬ್ಯಾಂಕುಗಳನ್ನು ಕೊಟ್ಟ ಪುಣ್ಯಭೂಮಿ ಇದು. ಈ ಪರಂಪರೆಯನ್ನು ನೀವು ಉಳಿಸಿಕೊಳ್ಳಬೇಕು” ಎಂದು ತಿಳಿಸಿದರು.

“ಈ ಭಾಗದ ಪ್ರತಿಭಾವಂತರು ಉದ್ಯೋಗಕ್ಕಾಗಿ ಹೊರದೇಶಕ್ಕೆ ಹೋಗುತ್ತಿದ್ದಾರೆ. ವಿದ್ಯಾವಂತ ಯುವಕರು ನಾಡಿನ ಶಕ್ತಿ. ಅವರು ವಿದ್ಯೆ ಪಡೆದು, ಇಲ್ಲೇ ಉದ್ಯೋಗ ಮಾಡುವಂತಾಗಲು ನನ್ನೆಲ್ಲ ಶಾಸಕ ಮಿತ್ರರು ಶ್ರಮಿಸಬೇಕು ಎಂದು ತಿಳಿಸಿದ್ದೇನೆ” ಎಂದರು. 

“ಈ ಭೂಮಿಯಲ್ಲಿ ಶಾಂತಿ ನೆಲೆಸ ಬೇಕು. ಎಲ್ಲಾ ಧರ್ಮದವರು ಸಹೋದರ ಭಾವನೆಯಲ್ಲಿ ಬದುಕಬೇಕು. ಧರ್ಮ ಯಾವುದಾದರೇನು ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ; ದೇವನೊಬ್ಬ ನಾಮ ಹಲವು. ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ. ಈ ದೇವರ ನೆನಪು ಭಕ್ತಿಯ ಮೂಲ. ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಎಲ್ಲರಲ್ಲೂ ಮನುಷ್ಯತ್ವ ಕಾಣಬೇಕು. ತಾಯಂದಿರಿಗೆ ಒಳ್ಳೇದಾಗಬೇಕು, ಆರ್ಥಿಕವಾಗಿ ಶಕ್ತಿ ಕೊಡಬೇಕು. ಹಾಗಿದ್ದಾಗ ಕುಟುಂಬಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ಕೊಡುತ್ತಾರೆಂದು ರಾಜೇಂದ್ರಕುಮಾರ್‌ ಅವರೂ ನಂಬಿದ್ದಾರೆ” ಎಂದು ತಿಳಿಸಿದರು.

“ಒಬ್ಬನಿಗೆ ಮೀನು ಕೊಟ್ಟರೆ ಒಂದು ಹೊತ್ತು ಊಟಕ್ಕೆ, ಅದೇ ಮೀನುಗಾರಿಕೆ ಕಲಿಸಿದರೆ ಅವನ ಜೀವನಕ್ಕೆ ನೆರವಾಗುತ್ತದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್‌ ಯೂನಿಸ್‌ ಹೇಳಿದ್ದರು. ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಅವಕಾಶ ಸಿಕ್ಕಾಗ ಜನರ ಸೇವೆ ಮಾಡಬೇಕು” ಎಂದು ಸಲಹೆ ನೀಡಿದರು. 

“ನನಗೆ ಮಹಿಳೆಯರು ಮತ್ತು ಯುವಕರ ಮೇಲೆ ಹೆಚ್ಚಿನ ನಂಬಿಕೆ. ಇವರ ಮೇಲೆ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ಈ ಭಾಗದಲ್ಲಿ ಮಹಿಳೆಯರು ಕುಟುಂಬಕ್ಕಾಗಿ ಪಡೆದ ಸಾಲವನ್ನು ಗೃಹಲಕ್ಷ್ಮಿಯಿಂದ ಹಣದಿಂದ ತೀರಿಸುತ್ತಿದ್ದಾರೆ. ಶಕ್ತಿಯಿಂದ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, 2೦೦ ಯೂನಿಟ್‌ ವರೆಗೂ ಉಚಿತ ವಿದ್ಯುತ್‌, 10 ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ. ಕೊಟ್ಟ ಅವಕಾಶದಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಬದ್ಧರಾಗಿದ್ದೇವೆ” ಎಂದು ತಿಳಿಸಿದರು. 

“ಬ್ಯಾಂಕ್‌ನಲ್ಲಿ ದುಡ್ಡಿದ್ದರೆ ಏನೂ ಪ್ರಯೋಜನ ಇಲ್ಲ. ದುಡ್ಡು- ಬ್ಲಡ್‌ ಎರಡೂ ಜಂಗಮ ಸ್ವರೂಪಿಯಾಗಿರಬೇಕು ಎಂದು ಸಾಯಿಬಾಬಾ ಅವರು ಹೇಳಿದ್ದರು. ಎರಡೂ ಒಂದೇ ಕಡೆ ಇದ್ದರೆ ಸಮಸ್ಯೆ ಹೆಚ್ಚು. ಹಣ ಹರಿದಾಡುತ್ತಿದ್ದರೆ ಆರ್ಥಿಕವಾಗಿ, ದೇಹದಲ್ಲಿ ರಕ್ತ ಚೆನ್ನಾಗಿ ಹರಿದಾಡುತ್ತಿದ್ದರೆ ಆರೋಗ್ಯವಾಗಿರುತ್ತೇವೆ. ಇದೇ ಸಹಕಾರಿ ತತ್ವದ ಮೂಲ. ನಾವೆಲ್ಲರೂ ಒಗ್ಗಟ್ಟಾಗಿ ಈ ಜಿಲ್ಲೆಯ ಪರಂಪರೆ, ಇತಿಹಾಸ ಉಳಿಸಿ, ಗೌರವ ಕಾಪಾಡೋಣ. ಈ ಕರಾವಳಿಯನ್ನು ಅಭಿವೃದ್ಧಿ ಮಾಡಿ ಇತಿಹಾಸದ ಪುಟಕ್ಕೆ ಸೇರಿಸೋಣ. ಈ ರಾಜ್ಯದ ಭವಿಷ್ಯಕ್ಕಾಗಿ ಕೆಲಸ ಮಾಡೋಣ” ಎಂದು ಕರೆಕೊಟ್ಟರು. 

“ರಾಜೇಂದ್ರಕುಮಾರ್‌ ಮತ್ತವರ ತಂಡ ಯಾವುದೇ ಅಧಿಕಾರ ಬಯಸದೆ ನಿಮ್ಮ ಸೇವೆ ಮಾಡುತ್ತಾ ಇತಿಹಾಸ ನಿರ್ಮಿಸಿದ್ದಾರೆ. ಜನನ ಉಚಿತ, ಮರಣ ಖಚಿತ. ಹುಟ್ಟು- ಸಾವುಗಳ ನಡುವೆ ಏನಾದರೂ ಮಾಡಬೇಕು ಎಂದು ಹೆಣ್ಣುಮಕ್ಕಳ ಬಾಳಿನಲ್ಲಿ ಜ್ಯೋತಿ ಬೆಳಗಿಸುವ ಕೆಲಸ ಇವರು ಮಾಡಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist