ಬೆಂಗಳೂರು(www.thenewzmirror.com): 2023-24 ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು (PMFBY) ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ, ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಬೆಳೆ ವಿಮೆ ಅನುಷ್ಠಾನ ಮಾಡುವಲ್ಲಿ ಅಗ್ರ 3 ಸ್ಥಾನದಲ್ಲಿರುವ ದೇಶದ ಮೂರು ಜಿಲ್ಲೆಗಳ ಪೈಕಿ ರಾಜ್ಯದ ಹಾವೇರಿ ಮತ್ತು ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಕೃಷಿ ಇಲಾಖೆಯ ಹಿರಿಮೆ ಹೆಚ್ಚಿಸಿದೆ..
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದು ರೈತರನ್ನು ಅನಿಶ್ಚಿತ ನಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ನಮ್ಮ ಕೃಷಿ ಇಲಾಖೆ ಹಾಗೂ ಸ್ಥಳೀಯ ಕೃಷಿ ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ನೇತೃತ್ವ ಹಾಗೂ ವಿಶೇಷ ಕಾಳಜಿಯಿಂದ ರಾಜ್ಯ ಕೃಷಿ ಇಲಾಖೆ ಮಹತ್ವದ ಸಾಧನೆ ಮಾಡಿದ್ದು, ಕೇಂದ್ರ ಸರ್ಕಾರ, ರಾಜ್ಯ ಕೃಷಿ ಇಲಾಖೆಗೆ ದೇಶದಲ್ಲೆ ಪ್ರಥಮ ಸ್ಥಾನ ನೀಡಿ ಗೌರವಿಸಿದೆ.
ಇದೇ ವೇಳೆ ಪ್ರಥಮ ಸ್ಥಾನ ಪಡೆದ ರಾಜ್ಯ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ರಾಜ್ಯದ ಅನ್ನದಾತರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.