ಮೈಸೂರು(www.thenewzmirror.com):ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲು ನಮಗೆ ಯಾವುದೇ ತೊಡಕುಗಳಿಲ್ಲ,ಜೂನ್ ತಿಂಗಳ ಹಣ ಮಾತ್ರ ಬಾಕಿ ಇದ್ದು ಅದನ್ನೂ ಶ್ರೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಯೋಜನೆಯ ಹಣ ಕೊಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿರಬಹುದು ಆದರೆ ನಾವು ಪ್ರತಿ ತಿಂಗಳು ಹಣ ಹಾಕುತ್ತಿದ್ದೇವೆ. ಮೇ ತಿಂಗಳವರೆಗೂ ಹಣ ಹಾಕಲಾಗಿದೆ. ಜೂನ್ ತಿಂಗಳ ಹಣದ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ಹಣ ಹಾಕಲು ಯಾವ ತೊಡಕುಗಳೂ ಇಲ್ಲ. ಎಚ್.ಎಂ ರೇವಣ್ಣ ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.
ರಾಜ್ಯ ರಾಜಕಾರಣದಲ್ಲಿ ಯಾವುದೇ ಕ್ರಾಂತಿ ಇಲ್ಲ:
ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಬಳಿಕ ಯಾವುದೇ ಕ್ರಾಂತಿ ಇರುವುದಿಲ್ಲ. ಎಲ್ಲವೂ ಶಾಂತವಾಗಿರಲಿದೆ.ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದ ಮೇಲೆ ಬೇರೆ ರೀತಿಯ ಚರ್ಚೆಗೆ ಅವಕಾಶವೇ ಇಲ್ಲ. ಈ ಬಗ್ಗೆ ಪದೆ ಪದೇ ಮಾತನಾಡುವುದು ಸರಿ ಇಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಮಾತನಾಡಿದ್ದು, ಈ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾವಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.