ಬೆಂಗಳೂರು(www.thenewzmirror.com): “ಕರಾವಳಿಯ ದೈವಾರಾಧನೆಯ ಪರಂಪರೆ ನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೊನ್ನ ಕಲಶವಿದ್ದಂತೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಇಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೇವಸ್ಥಾನ, ಶ್ರೀ ಗುಳಿಗ ದೈವ ಹಾಗೂ ಕೊರಗಜ್ಜ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವಾ ಕಾರ್ಯದಲ್ಲಿ ಭಾಗವಹಿಸಿದ ಅವರು ಗುಳಿಗ ದೈವದ ಆಶೀರ್ವಾದ ಪಡೆದರು.
ತುಳುನಾಡಿನ ಆರಾಧನಾ ಪರಂಪರೆಯಲ್ಲಿ ದೈವದ ಆರಾಧನೆಗೆ ಪರಮಪವಿತ್ರ ಆಚರಣೆಯಲ್ಲಿ ರಾಷ್ಟ್ರದ ಅಭಿವೃದ್ಧಿ ಹಾಗೂ ಸುಭದ್ರತೆಗಾಗಿ ಮೂರನೇ ಬಾರಿ ಹೆಮ್ಮೆಯ ನರೇಂದ್ರ ಮೋದಿ ಪ್ರಧಾನಿಗಳಾಗಿ ಆಯ್ಕೆಯಾಗಲೆಂದು ನಮ್ಮ ಕಾರ್ಯಕರ್ತರು ಸಂಕಲ್ಪ ಮಾಡಿಕೊಂಡಿದ್ದರು. ಈ ವಿಶೇಷ ಹರಕೆಯ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತುಂಬಿಲಸೇವೆ ಸಲ್ಲಿಸಿ ದೈವದ ಕೃಪೆಗೆ ಪಾತ್ರರಾದೆವು. ಶ್ರೀ ದೈವದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಿಪಿಸಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಅಂಗಾರ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಕು ಭಾಗೀರಥಿ ಮರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧ್ಯಕ್ಷ ಸತೀಶ್ ಕಂಪಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮಂಡಲ ಮತ್ತು ಶಕ್ತಿಕೇಂದ್ರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.