ಬೆಂಗಳೂರು ಶಾಸಕರಾಗಬೇಕಾ? ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ:ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(www.thenewzmirror.com):ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಯಾರೆಲ್ಲಾ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಬೇಕು ಎನ್ನುವ ಅಪೇಕ್ಷೆ ಇಟ್ಟುಕೊಂಡಿದ್ದಾರೋ ಅವರೆಲ್ಲಾ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ದರಾಗಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ತ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪುಷ್ಪ ನಮನ ಸಲ್ಲಿಸಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಈಗ ಗ್ರೇಟರ್ ಬೆಂಗಳೂರು ಜಾರಿಗೆ ಬಂದಿದೆ. ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಮುಂದಕ್ಕೆ ಶಾಸಕರಾಗಬೇಕು ಎನ್ನುವ ಆಲೋಚನೆ ಇದ್ದವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು.

“ಮುಂದಿನ ದಿನಗಳಲ್ಲಿ ಪಟ್ಟಾ ಖಾತೆ ಹಂಚಿಕೆಯನ್ನು ಅಧಿಕಾರಿಗಳು ಹಂಚಿಕೆ ಮಾಡುವುದಿಲ್ಲ. ಬದಲಾಗಿ ಪ್ರತಿ ಕ್ಷೇತ್ರದ ಗ್ಯಾರಂಟಿ ಸಮಿತಿಯ ಸದಸ್ಯರು ಜನರಿಗೆ ಖಾತೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೂ ಇ- ಸ್ವತ್ತು ಖಾತೆಗಳ ಡಿಜೀಟಲೀಕರಣ ಮಾಡಲಾಗುತ್ತಿದೆ. ಇಲ್ಲಿಯೂ ಅದೇ ರೀತಿ ಹಂಚಿಕೆ ಮಾಡಲಾಗುವುದು ಎಂದರು. 

“ ಬಿ.ಕೆ.ಹರಿಪ್ರಸಾದ್ ಅವರು ಹೇಳುವಂತೆ ಲೈನ್ ಆಫ್ ಕಂಟ್ರೋಲ್ ಇಂದ ಪೆಹಲ್ಗಾಮ್ ಗೆ ಬರುವುದಕ್ಕೆ ಬರುವುದಕ್ಕೆ ಹತ್ತು ದಿನವಾಗುತ್ತದೆ ಎಂದು ಹೇಳಲಾಗುತ್ತದೆ. ಇದೆಲ್ಲಾ ನಡೆದಿದ್ದು ನಿಜವೇ ಎಂದು ನಾವು ಅಧ್ಯಯನ ಮಾಡಬೇಕಿದೆ. ನಮಗೆ ಪಕ್ಷಕ್ಕಿಂತ ದೇಶ ಮುಖ್ಯ. ಇದರ ಬಗ್ಗೆ ನೀವು ನಾವು ತಿಳಿದುಕೊಳ್ಳಬೇಕಿದೆ” ಎಂದರು.

“ಭಯೋತ್ಪಾದನೆಯಿಂದ ನಮ್ಮ ನಾಗರಿಕರು ಮರಣ ಹೊಂದಿದರು. ಅದಾದ ನಂತರ ನಮ್ಮ ಸೇನಾಪಡೆಗಳು ತಕ್ಕ ಉತ್ತರ ನೀಡಿದರು. ಆಗ ನಿಮ್ಮೆಲ್ಲರ ಬೆಂಬಲದಿಂದ ತಿರಂಗಾ ಯಾತ್ರೆ ನಡೆಸಲಾಯಿತು. ನಮ್ಮ ಪದಾಧಿಕಾರಿಗಳು, ನಾಯಕರು ಬೆಂಗಳೂರಿಗೆ ಗೌರವ ತರುವ ರೀತಿಯಲ್ಲಿ ಯಾತ್ರೆ ಆಯೋಜಿಸಲಾಯಿತು. ರಾಹುಲ್ ಗಾಂಧಿ ಅವರು ಸಹ ಬೆಂಗಳೂರಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು” ಎಂದು ಹೇಳಿದರು. 

“ನಾವು ಏನೇ ಮಾಡಿದರೂ ಬಿಜೆಪಿಯವರು ಟೀಕೆ ಮಾಡುತ್ತಾರೆ. ಕೆಆರ್ ಎಸ್ ಬಳಿ ಕಾವೇರಿ ಆರತಿ ಕಾರ್ಕ್ರಮ ಮಾಡಲು ಮುಂದಾಗಿದ್ದೇವೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಮಾಡಲಾಯಿತು. ಸುಮಾರು 25 ಸಾವಿರ ಜನರು ಭಾಗವಹಿಸಿದ್ದರು. ಸ್ಥಳೀಯ ಶಾಸಕರು ಇದನ್ನು ನೋಡಿ ಗಾಬರಿಯಾಗಿದ್ದರು. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ರೈತ ಸಂಘದವರು ಟೀಕೆ ಮಾಡುತ್ತಿದ್ದಾರೆ. ಅವರನ್ನು ಕರೆದು ಮಾತನಾಡಲಾಗುವುದು. ಟೀಕೆಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ, ಟೀಕೆಗಳಿಲ್ಲದೇ ಯಾವುದೇ ಕೆಲಸಗಳು ಆಗುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸಮಾಜವನ್ನು ತೆಗೆದುಕೊಂಡು ಹೋಗಲಾಗುವುದು” ಎಂದರು.

ರಾಜೀವ್ ಗಾಂಧಿ ಹತ್ಯೆ ದೇಶಕ್ಕೆ ದೊಡ್ಡ ನಷ್ಟ:

“ರಾಜೀವ್ ಗಾಂಧಿ ಅವರ ಹತ್ಯೆಯಿಂದ ಸ್ತ್ರೀ ಶಕ್ತಿಗೆ, ಯುವ ಪೀಳಿಗೆ ಹಾಗೂ ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. ರಾಜೀವ್ ಗಾಂಧಿ ಅವರ ಬಗ್ಗೆ ಇಡೀ ಪ್ರಪಂಚದಲ್ಲಿಯೇ ಸಾಕಷ್ಟು ಒಲವಿತ್ತು. ಅವರನ್ನು ಇತರೇ ರಾಷ್ಟ್ರಗಳು ಅತ್ಯಂತ ಗೌರವದಿಂದ ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ಆಧುನಿಕ ಚಿಂತನೆಗಳಿಂದ ಪ್ರಭಾವ ಬೀರಿದ್ದರು. ಇವರಿಂದ 18 ವರ್ಷಕ್ಕೆ ಮತದಾನದ ಹಕ್ಕು ದೊರೆಯಿತು, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಯಲ್ಲಿ ಶೇ. 50 ರಷ್ಟು ಮೀಸಲಾತಿ ನೀಡಿದರು. ಪಕ್ಷಾಂತರ ವಿರೋಧಿ ಕಾಯ್ದೆಗೆ ಕಾನೂನು ತಂದರು. ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿದರು. ಹೀಗೆ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ಜಾರಿಗೆ ತಂದವರು ರಾಜೀವ್ ಗಾಂಧಿ” ಎಂದು ಹೇಳಿದರು. 

“ಮೊದಲು ಒಂದು ಲ್ಯಾಂಡ್ ಲೈನ್ ಫೋನ್ ಸಂಪರ್ಕ ಪಡೆದುಕೊಳ್ಳಲು ಸಂಸದರಿಂದ ಪತ್ರ ಪಡೆಯಬೇಕಿತ್ತು. ʼಯುವ ಕಾಂಗ್ರೆಸ್ ಅಧ್ಯಕ್ಷನಾದ ನಿನ್ನನು ಹೇಗೆ ಸಂಪರ್ಕಿಸುವುದುʼ ಎಂದು ಹೇಳಿ ಜಾಫರ್ ಷರೀಫ್ ಅವರು ನನಗೆ ಫೋನ್ ಸಂಪರ್ಕ ಕೊಡಿಸಿದರು. ಸೆಲ್ ಫೋನ್ ತಂತ್ರಜ್ಞಾನ ಭಾರತಕ್ಕೆ ಬರಲು ರಾಜೀವ್ ಗಾಂಧಿ ಅವರು ಹಾಗೂ ಅವರಿಗೆ ಸಲಹೆಗಾರರಾಗಿದ್ದ ಸ್ಯಾಮ್ ಪಿತ್ರೋಡ ಅವರು ಕಾರಣ” ಎಂದರು. 

ಕಾವೇರಿ ಗಲಭೆ ವೇಳೆ ಎನ್ ಪಿಎಸ್ ಶಾಲೆಯಲ್ಲಿದ್ದ ಕಂಪ್ಯೂಟರ್ ಗಳನ್ನು ಸುಟ್ಟು ಹಾಕಲಾಯಿತು. ಆಗ 1.50 ಲಕ್ಷ ಬೆಲೆ ಬಾಳುತ್ತಿತ್ತು. ಈಗ 15- 20 ಸಾವಿರಕ್ಕೆಲ್ಲ ದೊರೆಯುತ್ತಿದೆ. ಐಟಿ ಕ್ರಾಂತಿಗೆ ನಾಂದಿ ಹಾಡಿದ ಆಧುನಿಕತೆಯ ಹರಿಕಾರ ರಾಜೀವ್ ಗಾಂಧಿ” ಎಂದು ಬಣ್ಣಿಸಿದರು.

“ನನ್ನನ್ನು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ಕಾರಿನಲ್ಲಿ ಜೊತೆಯಾಗಿ ಕರೆದುಕೊಂಡು ಬಂದ ರಾಜೀವ್ ಗಾಂಧಿ ಅವರು ರಾಜ್ಯದ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದರು. ನನ್ನ ಬಳಿ ಚರ್ಚೆ ಮಾಡಿದರು. ಅಂದು ರಾತ್ರಿ ಏನು ಮಾತುಕತೆಯಾಯಿತು ಎಂದು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ವಿರೇಂದ್ರ ಪಾಟೀಲ್ ಅವರು ಅಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು ಆದರೆ ಅವರ ಆರೋಗ್ಯ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಇದನ್ನು ಗಮನಿಸಿದ ಅವರು ಮರಳಿ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿಸಿದರು” ಎಂದರು.

“ಮುಖ್ಯಮಂತ್ರಿ ಸ್ಥಾನ ಬದಲಾವಣೆ ನಂತರ ಒಂದಷ್ಟು ಗಲಾಟೆಗಳು ನಡೆಯಿತು. ಈ ವೇಳೆ ರಾಜೀವ್ ಗಾಂಧಿ ಅವರು ಹೈದರಾಬಾದ್ ಗೆ ತೆರಳಿದರು. ನಾನು, ರಮೇಶ್, ಗುತ್ತೇದಾರ್, ಬಂಗಾರಪ್ಪ ಅವರು ಹೈದರಾಬಾದ್ ಗೆ ತೆರಳಿದವು. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಅಂದು ಬಂಗಾರಪ್ಪ ಅವರಿಗೆ ರಾಜೀವ್ ಗಾಂಧಿ ಅವರು ಸೂಚನೆ ನೀಡಿದರು. ʼಎಲ್ಲಾ ಜಾತಿಯ ಯುವಕರನ್ನು ಗುರುತಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಗೆ ಇಬ್ಬರು ಆದರೂ ಚಿಂತೆ ಮಾಡಬೇಡಿʼ ಎಂದು ತಿಳಿಸಿದರು. ಈ ಕಾರಣಕ್ಕೆ ನಮಗೆಲ್ಲ ಮೊದಲ ಬಾರಿಗೆ ಅವಕಾಶ ಸಿಕ್ಕಿತು. ಮೊಟ್ಟ ಮೊದಲ ಬಾರಿಗೆ ಬಿ.ಕೆ.ಹರಿಪ್ರಸಾದ್ ಅವರಿಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ನೀಡಿದರು. ರಾಜ್ಯದಿಂದ ವಿರೋಧವಿದ್ದರು ರಾಜ್ಯಸಭೆಗೆ ಇವರನ್ನು ಆಯ್ಕೆ ಮಾಡಿದರು” ಎಂದರು.

“ಕೇವಲ ನಾನು, ಜಮೀರ್ ಅಹಮದ್, ಕೃಷ್ಣಬೈರೇಗೌಡ ಅವರು ಸೇರಿ ಸರ್ಕಾರದ ಎರಡು ವರ್ಷದ ಸಂಭ್ರಮ ಮಾಡಿಲ್ಲ. ರಾಜ್ಯದ ಎಲ್ಲಾ ಕಾರ್ಯಕರ್ತರು, ಶಾಸಕರು, ಮಂತ್ರಿಗಳು ಸೇರಿ ಮಾಡಿದ ಸಂಭ್ರಮ. ಈ ಎರಡು ವರ್ಷದ ಯಶಸ್ಸಿನಲ್ಲಿ ಪಕ್ಷದ ಎಲ್ಲರ ಪಾತ್ರವಿದೆ” ಎಂದು ಹೇಳಿದರು. 

ಪರಮೇಶ್ವರ್ ತಪ್ಪು ಮಾಡಿರಲ್ಲ:

ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್,ಜಿ. ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದೆ “ಇದರ ಬಗ್ಗೆ ನಾನು ಮಾಹಿತಿ ಪಡೆದು ಮಾತನಾಡುತ್ತೇನೆ. ಪರಮೇಶ್ವರ್ ಅವರು ಅತ್ಯಂತ ಸರಳ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ.” ಎಂದರು.

ಬೆಂಗಳೂರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದನ್ನು ಬಿಜೆಪಿ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅವರ ಕಾಲದಲ್ಲಿ ಆಗಿರುವ ತಪ್ಪುಗಳನ್ನು ನಾವು ಸರಿ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist