ಇಂದಿನಿಂದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಯುದ್ಧ ಆರಂಭ: ಕುಮಾರಸ್ವಾಮಿ

RELATED POSTS

ಬೆಂಗಳೂರು(www.thenewzmirror.com): ನನ್ನ ಹತ್ರ ಟನ್ ಗಟ್ಟಲೆದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ ನನ್ನನ್ನು ಎಂದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸವಾಲು ಹಾಕಿದ್ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು; ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು.

ಜೆಪಿ ಭವ‌ನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗೆ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸರಕಾರಕ್ಕೆ ನಾನು ನೇರವಾಗಿ ಹೇಳುತ್ತಿದ್ದೇನೆ. ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಅಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ.  ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಅವರು ಗುಡುಗಿದರು.

2003- 2004ರಲ್ಲಿ ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ. ನಾನು ಸುಮ್ಮನಿರಲು ಸಾಧ್ಯ ಇಲ್ಲ ಅಲ್ಲವೇ? ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ. ಈ ಕ್ಷಣದಿಂದ ಈ ಸರ್ಕಾರದ ವಿರುದ್ಧ ಸಮರ ಆರಂಭ ಮಾಡಿದ್ದೇನೆ. ಅದಕ್ಕೆ ಈ ಮಾಧ್ಯಮಗೋಷ್ಠಿ ಕರೆದಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸಚಿವರು.

ಪಾಪ.. ಅವರಿಗೆ ಏನೂ ಗೊತ್ತಿಲ್ಲ. ನನಗೆ ಕನಕನಪುರ ಅಷ್ಟೇ ಸಾಕು. ಬಳ್ಳಾರಿಗೆ ಯಾಕೆ ಹೋಗಲಿ ಎಂದು ಹೇಳಿದ್ದಾರೆ. ಸಂಬಂಧ ಇಲ್ಲ ಎಂದಾದರೆ ಅದಿರು ಮಣ್ಣಿನ ಬಗ್ಗೆ ಖನಿಜ ಇಲಾಖೆಗೆ ಹಾಗೂ ಖನಿಜ ಸಂಪನ್ಮೂಲ ಇಲಾಖೆಗೆ ಪತ್ರಗಳನ್ನು ನಿರಂತರವಾಗಿ ಯಾಕೆ ಬರೆದರು? ಅಧಿಕಾರಿಗಳ ಮೇಲೆ ಯಾಕೆ ಒತ್ತಡ ಹಾಕಿದರು? ರಸ್ತೆಗೆ ಮಣ್ಣು ಬೇಕು ಎಂದು ಬಳ್ಳಾರಿಯಿಂದ ಅದಿರು ಮಣ್ಣು ತರಿಸಿಕೊಂಡರು. ಅತ್ಯಂತ ಗುಣಮಟ್ಟದ ಅದಿರು ಇದ್ದ ಮಣ್ಣನ್ನು ಏನು ಮಾಡಿದರು? ಎಂದು ಪ್ರಶ್ನೆ ಮಾಡಿದರು.

ಉಪ ಮುಖ್ಯಮಂತ್ರಿ ಎನ್ನುವ ವ್ಯಕ್ತಿ ಎಷ್ಟು ಕಂಪನಿಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಏಳು ಕಂಪನಿಗಳ ಹೆಸರಿನಲ್ಲಿ ಅವರು ವ್ಯವಹಾರ ನಡೆಸಿ ಪತ್ರ ವ್ಯವಹಾರವನ್ನೂ ನಡೆಸಿದ್ದಾರೆ. ಎಲ್ಲಾ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನೂ ಕಸ ಎತ್ತುತ್ತಿದ್ದೆ, ಇಲ್ಲ ಎಂದವರು ಯಾರು?:

ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ. ಯಾವುದೇ ಕಾರಣಕ್ಕೂ ಸರ್ಕಾರಿ ಗುತ್ತಿಗೆ ತೆಗೆದುಕೊಳ್ಳ ಕೂಡದು ಎಂದು ಅವರು ಹೇಳಿದ್ದರು ಎಂಬ ಸಂಗತಿಯನ್ನು ಅವರು ಸುದ್ದಿಗಾರರ ಗಮನಕ್ಕೆ ತಂದರು.

ಕಸ ಗುತ್ತಿಗೆಯಲ್ಲಿಯೂ ಕೋಟಿ ಕೋಟಿ ಹೊಡೆಯಲು ಹೊರಟಿದ್ದರು!:

ಡಿಕೆಶಿ ಮೇಲೆ ಮತ್ತೂ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು, ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು ₹6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ ₹15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ  ₹6500 ಮೊತ್ತವನ್ನು ₹3, 000ಕ್ಕೆ ಕಡಿಮೆ ಮಾಡಿದರು. 

ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಒಂದೊಂದೇ ಅಂಶವನ್ನು ಬಿಡಿಸಿಟ್ಟರು.

ನಾನು ಆ ಹಗರಣದ ಬಗ್ಗೆ ಮಾತನಾಡಿದ್ದರಿಂದಲೇ ಬೆಂಗಳೂರಿನಲ್ಲಿ ಕಸ ಎತ್ತಲು ಮಹಾನಾಯಕ  ಒಬ್ಬರು ಅಡ್ಡಿ ಮಾಡಿದರು ಎಂದು ಉಪ ಮುಖ್ಯಮಂತ್ರಿ ಆರೋಪ ಮಾಡಿದ್ದಾರೆ. ಆ ಮಹಾನಾಯಕ ಬೇರೆ ಯಾರೂ ಅಲ್ಲ, ನಾನೇ. ಅವತ್ತು ನಾನು ಆ ವಿಷಯ ಬಹಿರಂಗಪಡಿಸಿದೆ ಹೋಗಿದ್ದರೆ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿತ್ತು. ನಾನು ಹೇಳಿದ್ದು ಜನರ ಹಣ ಕೊಳ್ಳೆ ಹೊಡೆಯಬೇಡಿ ಎಂದೇ ಹೊರತು ಕಸ ಎತ್ತಬೇಡಿ ಎಂದಲ್ಲ ಎಂದು ಅವರು ಕುಟುಕಿದರು.

ನಿಮ್ಮ ಕಸ ಕ್ಲೀನ್ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ!!:

ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ. ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ. ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಸರಕಾರದಲ್ಲಿ ಘಜ್ನಿ, ಘೋರಿ ಮಹಮ್ಮದ್ ಇದ್ದಾರೆ!!:

ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್,  ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಮಾಜಿ ಪ್ರಧಾನಿ ಮಗ, ಮಾಜಿ ಸಿಎಂ; 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ?:

40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರನ್ನು ಕರೆದುಕೊಂಡು ಬಂದಿದ್ದರು. ರಾಜಕೀಯ ಸೇಡು ಸಾಧಿಸುತ್ತಿದ್ದರೆ. ಎಷ್ಟು ಬೇಕೋ ಅಷ್ಟು ಸಾಧಿಸಲಿ, ಅದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ. ಬಂದು ತೋರಿಸಲಿ. ನಾನು ಅನುಭವದಲ್ಲಿ.ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ. ನನ್ನ ವ್ಯವಹಾರ ಕಾನೂನುದ್ಧವಾಗಿ ಆಗಿದೆ. ದಾಖಲೆಗಳ ಮುಖಾಂತರ ಕೆಲವು ತೀರ್ಮಾನಗಳು ಆಗಿವೆ. ಈ ವಿಚಾರದಲ್ಲಿ ಕೋರ್ಟ್ ಅನ್ನೂ ಮಿಸ್ ಲೀಡ್ ಮಾಡುವ ಕೆಲಸ ಆಗಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ತಪ್ಪು ಮಾಡಿದ್ದಿದ್ದರೆ, ಇಷ್ಟು ವರ್ಷಗಳ ಕಾಲ ಬೇಕಿತ್ತಾ? ಕೇವಲ ನನ್ನ ಮೇಲೆ ರಾಜಕೀಯ ಹಗೆತನ ಸಾಧಿಸಲು ಇದನ್ನೆಲ್ಲ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಮುಡಾ ಕೇಸ್ ನಲ್ಲಿ ಎಷ್ಟು ಸ್ಪೀಡ್ ಆಗಿ ತನಿಖೆ ಮಾಡಿದರು. ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿದ್ದಾಗ ಸಾಯಿವೆಂಕಟೇಶ್ವರ ಕೇಸ್ ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದೀನಾ? ಯಾರಾದ್ರೂ ಅಧಿಕಾರಿಗೆ ಕರೆ ಮಾಡಿ ಬೆದರಿಸಿದ್ದೀನಾ? ಇದಕ್ಕೆಲ್ಲ ಉತ್ತರ ಕೊಡದೇ ನಾನು ಬಿಡುವುದಿಲ್ಲ ಎಂದು ಅವರು ಗುಡುಗಿದರು.

ಗುತ್ತಿಗೆ ಮೀಸಲು; ಶ್ವೇತಪತ್ರ ಹೊರಡಿಸಿ:

ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಜನರಿಗೆ ಮಾಹಿತಿ. ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಡಲು ಹೊರಟಿದ್ದೀರಲ್ಲ. ಕ್ರೆಡೆಲ್, ನಿರ್ಮಿತಿ ಕೇಂದ್ರ ಎಲ್ಲಾ ಯಾಕೆ ಇಟ್ಟುಕೊಂಡಿದ್ದೀರಿ? ಜನಗಳಿಗೆ ಈ ಮಟ್ಟಕ್ಕೆ ಟೋಪಿ ಹಾಕಲು ಹೊರಟಿದ್ದೀರಾ? ಇಲ್ಲಾ ಸಾಬರನ್ನು ಉದ್ದಾರ ಮಾಡಲು ಹೊರಟಿದ್ದೀರಾ? ಈ ವಿಚಾರದಲ್ಲಿ ಬಿಜೆಪಿ ಸ್ನೇಹಿತರಿಗೆ ಕಾಂಗ್ರೆಸ್ ನ ಟೆಕ್ನಿಕಲ್ ತಪ್ಪುಗಳನ್ನು ಹುಡುಕಿ ಎಂದು ಸಚಿವರು ಸಲಹೆ ಕೊಟ್ಟರು.

ಬೆಂಗಳೂರಿನ ಎಲ್ಲಾ ವಾರ್ಡುಗಳಲ್ಲಿ ಜನಾಂದೋಲನ ಮಾಡುತ್ತೇವೆ:

ಬೆಂಗಳೂರಿನ 198 ವಾರ್ಡ್ ಗಳಲ್ಲಿಯೂ ನಮಗೆ ಶಕ್ತಿ ಇಲ್ಲ. ಆದರೆ ಇರುವ ಅಲ್ಪ ಸ್ವಲ್ಪ ಕಾರ್ಯಕರ್ತರ ಶಕ್ತಿ ಬಳಸಿಕೊಂಡು ಅವರನ್ನು ಸಂಘಟಿಸಿ ಪಕ್ಷವನ್ನು ಮುನ್ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಅನಾಹುತ, ಮಾಡಬೇಕಾದ ಕೆಲಸಗಳ ಬಗ್ಗೆ ಜನಾಂದೋಲನ ಮಾಡುತ್ತೇವೆ. ಜನಗಳನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಘೋಷಣೆ ಮಾಡಿದರು.

ಪಕ್ಷ ಸಂಘಟನೆ ಮಾಡಬೇಕು ಎನ್ನುವುದು ಬೇರೆ. ರಾಜಧಾನಿಯನ್ನು ಕಾಂಗ್ರೆಸ್ ಸರಕಾರ ಹೇಗೆಲ್ಲ ಸುಲಿಗೆ ಮಾಡುತ್ತಿದೆ ಎಂಬುದನ್ನು ಜನರಿಗೆ ಹೇಳಬೇಕು. ದೇಶದ ಎಲ್ಲಾ ಭಾಗದ ಜನರೂ ನಗರದಲ್ಲಿ ಆಶ್ರಯ ಪಡೆದು ಬದುಕುತ್ತಿದ್ದಾರೆ. ಹೀಗಾಗಿ ಕನ್ನಡ, ಇಂಗ್ಲಿಷ್ ಸೇರಿ ಎಲ್ಲಾ ಭಾಷೆಗಳಲ್ಲಿ ಕರಪತ್ರ ಮುದ್ರಿಸಿ ಜಾಗೃತಿ ಮೂಡಿಸುತ್ತಿವೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಸಮಸ್ಯೆ ಇಲ್ಲ:

ಜೆಡಿಎಸ್ – ಬಿಜೆಪಿ ಬಿನ್ನಾಭಿಪ್ರಾಯ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಕೊರತೆಯು ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಸುರೇಶ್ ಬಾಬು ಅವರ ಅಭಿಪ್ರಾಯ ಹೇಳಿದ್ದಾರೆ. ನಿಖಿಲ್ ಕೂಡ ಮಾತನಾಡಿದ್ದಾರೆ. ನಾನು ಈ ಬಗ್ಗೆ ಬಿಜೆಪಿ ಎಲ್ಲಾ ನಾಯಕರ ಜತೆ ಮಾತನಾಡುತ್ತೇನೆ. ಅಲ್ಲದೆ, ನಮ್ಮಲ್ಲಿ ವಿಶ್ವಾಸದ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ಉತ್ತಮ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist