ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

RELATED POSTS

ಬೆಂಗಳೂರು(www.thenewzmirror.com): ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲಿವರೆಗೂ ಇದು ಸಿಗುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಯಲಹಂಕದಲ್ಲಿ 14 ಅಡಿಗಳ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ  ಮಾಡಿ ಮಾತನಾಡಿದ ಅವರು, ನಮ್ಮ ದೇಶ, ನಮ್ಮ ಸಮಾಜಕ್ಕೆ  ಅವಶ್ಯವಾಗಿದ್ದಂತಹ ಅತ್ಯುತ್ತಮ ಸಂವಿಧಾನವನ್ನು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಈ ದೇಶದ ಸಾಮಾಜಿಕ ಪರಿಸ್ಥಿತಿ, ಜಾತಿ ವ್ಯವಸ್ಥೆ ಅಂಬೇಡ್ಕರ್ ಅವರಿಗೆ ಅರ್ಥ ಆದಷ್ಟು ಬೇರೆಯವರಿಗೆ ಆಗಿರಲಿಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. 

ಜಾತಿ ವ್ಯವಸ್ಥೆ ಇದ್ದಷ್ಟೂ ಕಾಲ ಮೀಸಲಾತಿ ಇರಲೇಬೇಕು ಎಂಬುದನ್ನು ಅವರು ಬಲವಾಗಿ ನಂಬಿದ್ದರು ಹಾಗಾಗಿ ಸಂವಿಧಾನ ರಕ್ಷಣೆ ಆದರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತವೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.  ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ:

ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆದರೆ ವರ್ಗಕ್ಕೆ ಚಲನೆಯಿದೆ. ನಮ್ಮ ಸಮಾಜದಲ್ಲಿ ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ  ಕಡೆಯವರೆಗೂ ಉಳಿದು ಕೊಳ್ಳುವುದು ಹುಟ್ಟಿದ  ಜಾತಿಯಲ್ಲಿ ಮಾತ್ರ. ಆದ್ದರಿಂದ ಈ ಜಾತಿ ವ್ಯವಸ್ಥೆ ನಿಂತ ನೀರಿನಂತೆ.  ಇದನ್ನು ಮನಗಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ ಯಶಸ್ಸನ್ನು ಕಾಣಬೇಕಾದರೆ ಈ ದೇಶದ ಅವಕಾಶ ವಂಚಿತರು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರಿಗೆಲ್ಲರಿಗೂ ಸಮಾನ ಅವಕಾಶಗಳು  ದೊರೆತು ಅವರೆಲ್ಲರೂ  ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದ್ದರು  ಎಂದರು. 

ಸ್ವಾತಂತ್ರ್ಯಾನಂತರ ಒಬ್ಬ ವ್ಯಕ್ತಿ , ಒಂದು ಮತ ಜಾರಿಗೆ ಬಂದಿದೆ . ಇದು ಈ ದೇಶದ ರಾಷ್ಟ್ರಪತಿಗಳಿಗೂ ಒಂದೇ. ಒಬ್ಬ ಪೌರಕಾರ್ಮಿಕನಿಗೂ ಒಂದೇ. ಬಸವಣ್ಣನವರು ಹೇಳಿದ್ದು ಇದನ್ನೇ. ಅಂಬೇಡ್ಕರ್ ಅವರು ಕೂಡಾ ಬಸವಣ್ಣನವರ     ವಚನಗಳನ್ನು ಓದಿದ್ದರು ಎಂಬುದು ಅವರ ಬರಹಗಳಿಂದ ತಿಳಿದು ಬರುತ್ತದೆ. ಸಮಾಜದಲ್ಲಿ ಯಾವ ಕೆಲಸವೂ ಮೇಲೂ ಅಲ್ಲ, ಕೀಳೂ ಅಲ್ಲ. ಎಲ್ಲವೂ ಸಮಾನ ಎಂದೇ ಪ್ರತಿಪಾದಿಸಿದರು ಎಂದರು.

ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲಿವರೆಗೂ ಇದು ಸಿಗುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಇದನ್ನೇ ನಂಬಿದ್ದು,   ನಾವು ರೂಪಿಸುತ್ತಿರುವ ಕಾರ್ಯಕ್ರಮಳೂ ಇದೇ  ಹಿನ್ನೆಲೆಯಿಂದ ಮೂಡಿಬಂದಿವೆ ಎಂದರು.

ಜನರನ್ನು ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು:

ಜನರನ್ನು ಹಿಂದಕ್ಕೆ ಮಾತ್ರ ತಳ್ಳಬೇಡಿ. ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು. ಮುಂದಕ್ಕೆ ಎಳೆಯಲು ಸಾಧ್ಯವಾಗದಿದ್ದರೆ ಅಲ್ಲೇ ಬಿಡಿ. ಆದರೆ ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದ ಮುಖ್ಯಮಂತ್ರಿಗಳು  ಅಂಬೇಡ್ಕರ್ ಅವರು ತಾವು ಓದಿಕೊಂಡಿರುವುದು ಸ್ವಾರ್ಥಕ್ಕಾಗಿ ಅಲ್ಲ, ಅಸಮಾನತೆಯನ್ನು ಹೋಗಲಾಡಿಸಲು ಎಂದು ತಿಳಿಸಿದ್ದರು. ನಾವು ಸಾಧ್ಯವಾದಷ್ಟರ ಮಟ್ಟಿಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶಿಕ್ಷಣವನ್ನು ಪಡೆದುಕೊಳ್ಳಲೇ ಬೇಕು:

ನಮ್ಮ ಸರ್ಕಾರ ಆರ್ಥಿಕವಾಗಿ, ಸಾಮಾಜಿಕವಾಗಿ ಜನರಲ್ಲಿ ಶಕ್ತಿ ತುಂಬಲು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬದಿದ್ದರೆ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಒಂದೇ ಬಾರಿಗೆ ಎಲ್ಲರನ್ನೂ ಮುಖ್ಯವಾಹಿನಿಗೆ ತರಲು ಸಾಧ್ಯವಾಗದಿದ್ದರೂ  ಕ್ರಮೇಣವಾಗಿ ಮಾಡಲು ಪ್ರಯತ್ನ ಮಾಡಬೇಕು. ನಮ್ಮ ಹೋರಾಟ ನಿರಂತರವಾಗಿರಬೇಕು. ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಮಂತ್ರಗಳನ್ನು ಬಿಟ್ಟು ಹೋಗಿದ್ದಾರೆ.  ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶಿಕ್ಷಣವನ್ನು ಪಡೆದುಕೊಳ್ಳಲೇ ಬೇಕು. ಆಗ ಮಾತ್ರ ಸ್ವಾಭಿಮಾನ, ಜ್ಷಾನ ಬರಲು, ಸಂಘಟಿತರಾಗಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಎಷ್ಟೇ ಕಷ್ಟವಾದರೂ, ಮಾನಸಿಕ ತೊಂದರೆಯಾದರೂ ಶಿಕ್ಷಣವನ್ನು ಬಿಡಲಿಲ್ಲ ಎಂದರು. ಅಂಬೇಡ್ಕರ್ ಅವರೊಬ್ಬ ದೂರದೃಷ್ಟಿಯಿದ್ದ ನಾಯಕರು. ಅಂಥವರಿಗೆ ಮಾತ್ರ ನೂರು ವರ್ಷಗಳಲ್ಲಿ ಸಮಾಜದಲ್ಲಿ ಏನಾಗಬಹುದು ಎಂದು ಊಹಿಸಲು ಸಾಧ್ಯವಾಗುತ್ತದೆ ಎಂದರು.

ಬೇಡಿಕೆ ಪರಿಗಣಿಸಲಾಗುವುದು:

ವಿಶ್ವನಾಥ್ ಅವರು ಯಲಹಂಕದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಹೇಳಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು, ಯಲಹಂಕದಲ್ಲಿ ದಲಿತರು ಹಿಂದುಳಿದವರೇ ಹೆಚ್ಚಿದ್ದು, ಎಲ್ಲರಿಗೂ ನ್ಯಾಯ ದೊರಕಿಸುವ ಕೆಲಸವನ್ನು ವಿಶ್ವನಾಥ್ ಮಾಡುತ್ತಿದ್ದಾರೆ ಎಂದರು. ವಿಶ್ವನಾಥ್ ಅವರ ಕ್ಷೇತ್ರಕ್ಕೆ  ಅನುದಾನದ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು  ಪಸರಿಸಲಿ:

ಸಮಗ್ರ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಅಂಬೇಡ್ಕರ್ ದಲಿತರಾಗಿ  ಹುಟ್ಟಿದರೂ ಎಲ್ಲರ ನಾಯಕರಾಗಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರೆಲ್ಲರ ನಾಯಕರಾಗಿದ್ದರು. ಈ ದೇಶದಲ್ಲಿ ಅವರು ಹುಟ್ಟಿರವುದೇ ನಮಗೆ ಹೆಮ್ಮೆಯ ಸಂಗತಿ ಎಂದರು. ಅಂಬೇಡ್ಕರ್ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಪ್ರತಿಮೆಗಳು ಸಂಕೇತಗಳಾದರೂ, ಇವುಗಳಿಂದ  ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು  ಪಸರಿಸಲಿ ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist