ಮುಂದಿನ ವರ್ಷ 600 ಕೋಟಿ ವೆಚ್ಚದ ಅನುಭವ ಮಂಟಪ ಲೋಕಾರ್ಪಣೆ ಮಾಡ್ತೇವೆ: ಸಿ.ಎಂ

RELATED POSTS

ಮೈಸೂರು(www.thenewzmirror.com): ನಮ್ಮ ಸರ್ಕಾರ ಆರಂಭಿಸಿರುವ 600 ಕೋಟಿಗೂ ಅಧಿಕ ವೆಚ್ಚದ ಅನುಭವ ಮಂಟಪವನ್ನು ಮುಂದಿನ ವರ್ಷ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಆಯೋಜಿಸಿದ್ದ “ಬಸವ ಜಯಂತಿ-2025 ನಮ್ಮ ನಡೆ ಅನುಭವ ಮಂಟಪದ ಕಡೆ” ಕಾರ್ಯಕ್ರಮ ಉದ್ಘಾಟಿಸಿ ಮಾನಾಡಿದ ಅವರು,ಸಕಲ ವೃತ್ತಿಗಳೂ ಪವಿತ್ರ ಎನ್ನುವ ಮಹಾನ್ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಬಸವಣ್ಣನವರು ಕ್ರಾಂತಿಪುರುಷ ಮಾತ್ರವಲ್ಲ, ವಿಶ್ವ ವಿಖ್ಯಾತ ಆರ್ಥಿಕ ತಜ್ಞರೂ ಆಗಿದ್ದರು. ಕಾಯಕ ಮತ್ತು ದಾಸೋಹದ ಶ್ರಮ ಸಂಸ್ಕೃತಿಯ ಮಹತ್ವವನ್ನು  ಬಸವಣ್ಣ ಇಡೀ ವಿಶ್ವಕ್ಕೆ ನೀಡಿದರು ಎಂದು ವಿವರಿಸಿದರು. 

ಬಸವಾದಿ ಶರಣರಿಂದ ಆದ ಜಾತಿ ವ್ಯವಸ್ಥೆ ವಿರುದ್ದದ ಸಾಮಾಜಿಕ ಕ್ರಾಂತಿ ಪ್ರಪಂಚದ ಬೇರೆ ಎಲ್ಲೂ ನಡೆದಿಲ್ಲ. ಸಮ ಸಮಾಜ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಬಸವಾದಿ ಶರಣರು ನುಡಿದಂತೆ ನಡೆದರು ಎಂದು ವಿವರಿಸಿದರು.

ಜಾತಿ, ವರ್ಗ ರಹಿತ ಮಾನವೀಯ ಸಮಾಜ ಅವರ ತುಡಿತವಾಗಿತ್ತು. ಬಸವಾದಿ ಶರಣರ ಅನುಭಾವವೇ ವಚನಗಳಾಗಿವೆ. ವಚನ‌ ಎಂದರೆ ಮಾತು. ಕನ್ನಡ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯ ದೊಡ್ಡ ಮೈಲಿಗಲ್ಲು. ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಲಾಗಿದ್ದವರಿಗೆ ವಚನ ಸಾಹಿತ್ಯ ಆಡು ಮಾತಿನ ಮೂಲಕ ತಲುಪಿತು ಎಂದರು. 

ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇದ್ದಿದ್ದರಿಂದ ಶೂದ್ರ ಸಮುದಾಯ ಶಿಕ್ಷಣದಿಂದ ವಂಚಿತರಾದರು. ನನ್ನ ಅಪ್ಪ, ಅಮ್ಮ ಇಬ್ಬರೂ ಶಿಕ್ಷಣದಿಂದ ವಂಚಿತರಾಗಿದ್ದರು.  ರಾಜಪ್ಪ ಮೇಸ್ಟ್ರು ಕಾರಣದಿಂದ ನಾನು ನೇರವಾಗಿ ಐದನೇ ತರಗತಿಗೆ ದಾಖಲಾಗಿ ಶಿಕ್ಷಣ ಪಡೆದು ಎರಡು ಬಾರಿ ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರ ಕಾರಣದಿಂದ ನನಗೆ ಶಿಕ್ಷಣ ಸಿಕ್ಕರೆ, ಸಂವಿಧಾನದ ಕಾರಣದಿಂದ ನಾನು ಮುಖ್ಯಮಂತ್ರಿಯಾದೆ ಎಂದು ವಿವರಿಸಿದರು.

ಬಸವ ಬಳಗಗಳ ಒಕ್ಕೂಟದ ಬೇಡಿಕೆಯಂತೆ ಬಸವ ಭವನ ನಿರ್ಮಿಸಲು ಹೆಚ್ಚಿನ‌ ಅನುದಾನವನ್ನು ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist