ಬೆಂಗಳೂರು, (www.thenewzmirror.com) ;
ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ವಿಚಾರ ಅಂದರೆ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿಚಾರ. ಮುಸ್ಲಿಂಮರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಈ ಮಸೂದೆ ಮಂಡನೆ ಮಾಡಲಾಗ್ತಿದೆ ಅನ್ನೋ ಕೂಗು ಇತ್ತು
ಇದೆಲ್ಲದ್ರ ಹೊರತಾಗಿಯೂ ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ ಮಾಡಲಾಗಿದೆ. ಈಗಾಗಲೇ ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಆಗಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಿದ್ದು, ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಒಂದೇ ಬಾಕಿ ಇದೆ.
ಹಾಗಿದ್ರೆ ವಕ್ಫ್ ಮಸೂದೆ ಅಂದರೇನು? ಯಾಕೆ ವಿರೋಧ ವ್ಯಕ್ತವಾಗ್ತಿದೆ.., ಹಾಗೆನೇ ತಿದ್ದುಪಡಿ ಮಸೂದೆಯಲ್ಲಿ ಏನೆಲ್ಲಾ ಅಂಶಗಳಿದಾವೆ ಅನ್ನೋದನ್ನ ನೋಡೋಣ.., ವಕ್ಫ್ ಮಸೂದೆ ಅಂಗೀಕಾರ ಮಾಡೋಕೆ ಎನ್‌ಡಿಎ (NDA) ಒಕ್ಕೂಟದ 298 ಸಂಸದರು ಬೆಂಬಲಿಸಿದ್ದಾರೆ. ಇಂದೇ ವೋಟಿಂಗ್ ನಡೆದು ಅಂಗೀಕಾರ ಆಗೋದು ಬಹುತೇಕ ಖಚಿತವಾದಂತಾಗಿದೆ. ಇದಕ್ಕಾಗಿ ಎನ್‌ಡಿಎಯ ಎಲ್ಲಾ ಸಂಸದರು ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗೋ ಮೂಲಕ ಮಸೂದೆ ಪರವಾಗಿ ಮತಚಲಾವಣೆ ಮಾಡಿದ್ದಾರೆ. ಕೆಲ ಮೂಲಗಳ ಪ್ರಕಾರ ದೇಶದಲ್ಲಿ ವಕ್ಫ್ ಆಸ್ತಿ 9,40,000 ಎಕರೆ ಆಸ್ತಿ ಇದೆಯಂತೆ. ಇದು ಮೂರು ರಾಜ್ಯಗಳಲ್ಲಿ ಹಿಂದೂ ದತ್ತಿ ಮಂಡಳಿಯ ಆಸ್ತಿಗೆ ಸಮವಾಗಿದೆ ಎಂದು ಅಂದಾಜಿಸಲಾಗುತ್ತಿದೆ.

ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಏನೇನಿದೆ?
ಅಂಶ 1
ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಸರ್ವೆಯನ್ನು ರಾಜ್ಯ ಸರ್ಕಾರ ನೇಮಿಸಿದ ಸರ್ವೆ ಆಯುಕ್ತರು ನಡೆಸ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು. ಆದರೆ ಹೊಸ ಬಿಲ್ ನಲ್ಲಿ ಸರ್ವೆಗಳನ್ನು ಡಿಸಿಗಳಿಗೆ ವರ್ಗಾಯಿಸಲಾಗಿದೆ. ಡಿಸಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ.
ಅಂಶ 2
ಹಾಗೆನೇ ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ವಕ್ಫ್ ಘೋಷಣೆಗೆ ಷರತ್ತುಗಳ ಕುರಿತಂತೆ ಉಲ್ಲೇಖವಾಗಿದೆ. ಹಿಂದಿನ ಕಾನೂನಿನಲ್ಲಿ ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು. ಆದರೆ ಈಗಿನ ಬಿಲ್ ನಲ್ಲಿ ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರ ನೀಡಲಾಗಿದೆ. ಇದರಿಂದ ದುರುಪಯೋಗ ತಡೆಗಟ್ಟುವ ಉದ್ದೇಶವಿದೆ.
ಅಂಶ 3
ಇದರ ಜತೆಗೆ ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕಿನ ಬಗ್ಗೆಯೂ ನಮೂದಾಗಿದೆ. ಹಿಂದಿನ ಕಾನೂನಿನಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ನಿರ್ದಿಷ್ಟ ಉಲ್ಲೇಖ ಇರಲಿಲ್ಲ. ಆದರೆ ಹೊಸ ತಿದ್ದುಪಡಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯ ತ್ತ ಒಂದು ಹೆಜ್ಜೆ ಎಂದು ಪರಿಗಣನೆ ಮಾಡಲಾಗ್ತಿದೆ.
ಅಂಶ 4
ಇದಕ್ಕಿಂತ ಮುಖ್ಯವಾಗಿ ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ವಕ್ಫ್ ಮಂಡಳಿಯ ರಚನೆ ಬಗ್ಗೆಯೂ ನಮೂದಾಗಿದೆ. ಹಿಂದಿನ ಕಾನೂನಿನಲ್ಲಿ ಕೇಂದ್ರ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ. ಆದ್ರೆ ತಿದ್ದುಪಡಿ ಬಿಲ್ ನಲ್ಲಿ ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು, ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯ. ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆ ತರಲಾಗಿದೆ.
ಅಂಶ 5
ಹಾಗೆನೇ ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ಲೆಕ್ಕಪರಿಶೋಧನೆ ವಿಚಾರ ನಮೂದು ಮಾಡಿದ್ದು, ಹಿಂದಿನ ಕಾನೂನಿನಲ್ಲಿ ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು. ಆದ್ರೆ ಹೊಸ ಬಿಲ್ ನಲ್ಲಿ ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.
ಅಂಶ 6
ಇನ್ನು ವಕ್ಪ್ ಆಸ್ತಿ ವಿಚಾರದ ಬಗ್ಗೆನೂ ಉಲ್ಲೇಖ ಮಾಡಲಾಗಿದ್ದು, ವಕ್ಫ್ ತಿದ್ದುಪಡಿ ಬಿಲ್‌ನ ನಲ್ಲಿ ಆಸ್ತಿ ನೋಂದಣಿ ಮತ್ತು ಪಾರದರ್ಶಕತೆಯನ್ನ ತರುವ ಬಗ್ಗೆ ಅಂಶಗಳನ್ನ ಸೇರಿಸಲಾಗಿದೆ. ಹಿಂದಿನ ಕಾನೂನಿನಲ್ಲಿ ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯ ಮಿತಿ ಇರಲಿಲ್ಲ. ಆದರೆ ಹೊಸ ತಿದ್ದುಪಡಿಯಲ್ಲಿ ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯ ಮಾಡಲಾಗಿದೆ. ಹಾಗೆನೇ 6 ತಿಂಗಳೊಳಗೆ ವಿವರ ಸಲ್ಲಿಸುವ ಜತೆಗೆ ಪ್ರತಿ 5 ವರ್ಷಕ್ಕೊಮ್ಮೆ ಸರ್ವೆ ನಡೆಸಬೇಕು ಎಂದೂ ತಿದ್ದುಪಡಿಯಲ್ಲಿ ಉಲ್ಲೇಖವಾಗಲಿದೆ.
ಹಿಂದೆ ಯಾವಾಗ ತಿದ್ದುಪಡಿ ಮಾಡಲಾಗಿತ್ತು?
1995ರಲ್ಲಿ ವಕ್ಫ್ ಕಾಯಿದೆ ಜಾರಿಗೆ ತರಲಾಗಿತ್ತು. ವಕ್ಫ್ ಎನ್ನುವುದು ಮಸೀದಿ, ದರ್ಗಾ, ಸ್ಮಶಾನಗಳು, ಆಶ್ರಯ ಮನೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮುಂತಾದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಸಮರ್ಪಿಸಲಾದ ಆಸ್ತಿ ಅಂತ ಗುರುತಿಸಲಾಗಿರುತ್ತೆ. ಕಾನೂನಿನ ಅನ್ವಯ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ದಾನ ಮಾಡಿದ ಆಸ್ತಿ ವಕ್ಫ್ ಆಸ್ತಿಯಾಗಿ, ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಬರ್ತಿತ್ತು. ಅಷ್ಟೇ ಅಲ್ಲದೇ ಯಾವುದೇ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸರ್ವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿತ್ತು. ಮನಮೋಹನ್ ಸಿಂಗ್ ಸರ್ಕಾರ 2013ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರುವ ಕೆಲ್ಸವನ್ನ ಮಾಡಿತ್ತು.