ಬೆಂಗಳೂರು(www.thenewzmirror.com): ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು (ಪಂ.ರಾಜ್) ಇವರ ಅಧ್ಯಕ್ಷತೆಯಲ್ಲಿ 12 ಮಂದಿಯನ್ನು ಒಳಗೊಂಡ ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 199 ಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೆ ಅನುಗುಣವಾಗಿ ಇ-ಸ್ವತ್ತುಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಭವಿಸುವ ಸಮಸ್ಯೆಗಳ ಹಾಗೂ ಸದರಿ ಸಮಸ್ಯೆಗಳ ಪರಿಹಾರದ ಭಾಗವಾಗಿ ಇ-ಸ್ವತ್ತು ಸುಧಾರಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುವ ಹೊಣೆಗಾರಿಕೆಯನ್ನು ಈ ಸಮಿತಿಗೆ ವಹಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರ ನಿಯಮ 28 ಮತ್ತು 30 ಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಮೂನೆ-9, 11ಎ ಮತ್ತು ಕ್ರಮಬದ್ಧವಲ್ಲದ ಆಸ್ತಿಗಳಿಗೆ ನಮೂನೆ-11ಬಿ ಅನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿಯ ಮೂಲಕ ವಿತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ರು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇ-ಸ್ವತ್ತು ಅನುಷ್ಠಾನದಲ್ಲಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತಿರುವ ತಿದ್ದುಪಡಿಗಳಿಗೆ ಅನುಗುಣವಾಗಿ ಎದುರಾಗುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 12 ಮಂದಿ ಅಧಿಕಾರಿಗಳ ಸದಸಸ್ಯರನ್ನು ಒಳಗೊಂಡ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ನಿರ್ದೇಶಕರು (ಅಭಿವೃದ್ಧಿ) ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ; ವಿಜಯ ಅಜೂರೆ, ಉಪಕಾರ್ಯದರ್ಶಿ, ವಿಜಯಪುರ ಜಿಲ್ಲಾ ಪಂಚಾಯತಿ, ವಿಜಯಪುರ; ಶಿವಶಂಕರ್ ಪಿ, ಸದಸ್ಯರು, ಸೀಮಾ ನಿರ್ಣಯ ಆಯೋಗ; ಕೆ.ಜಿ.ಜಗದೀಶ್, ನಿವೃತ್ತ ಉಪನಿರ್ದೇಶಕರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ; ಬಸವರಾಜು ಶರಬಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ಶಹಪುರ ತಾಲ್ಲೂಕು ಪಂಚಾಯಿತಿ, ಕಲಬುರಗಿ ಜಿಲ್ಲೆ; ಶ್ರೀಮತಿ ಆಶಾ ಎಂ.ಜೆ, ಸಹಾಯಕ ನಿರ್ದೇಶಕರು (ಪಂ.ರಾಜ್), ನ್ಯಾಮತಿ ತಾಲ್ಲೂಕು ಪಂಚಾಯಿತಿ, ದಾವಣಗೆರೆ ಜಿಲ್ಲೆ; ಸಿದ್ದರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೆನ್ನಾಗರ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ; ಪ್ರಭಾಕರ್ ಎನ್ ಭಟ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿಂಧೋಳಿ ಗ್ರಾಮ ಪಂಚಾಯಿತಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ; ಚಾಲುಕ್ಯ ಭಾರವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೆ.ಬಿ. ಹಾಲ್ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ; ಯಶವಂತ ಬೆಳ್ಳಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶಿರಾಡಿ ಸದಸ್ಯರು ಗ್ರಾಮ ಪಂಚಾಯಿತಿ, ಕಡಬ ತಾಲ್ಲೂಕು, ದಕ್ಷಿಣಕನ್ನಡ ಜಿಲ್ಲೆ. ಮಂಗಳೂರು ಈ 10 ಮಂದಿ ಸಮಿತಿಯ ಸದಸ್ಯರಾಗಿದ್ದು ಉಪನಿರ್ದೇಶಕರು-6 (ಅಭಿವೃದ್ಧಿ), ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಬೆಂಗಳೂರು ಇವರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಕಾರ್ಯನಿರ್ವಹಣಾ ಸಮಿತಿಯು ಎರಡು ತಿಂಗಳೊಳಗೆ ವಿವರವಾದ ವರದಿಯೊಂದಿಗೆ ಇ-ಸ್ವತ್ತು ಸಲಹಾ ಸಮಿತಿಗೆ ಶಿಫಾರಸ್ಸು ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.