ಬೆಂಗಳೂರು,(www.thenewzmirror.com) :
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿದ್ದು, ಕೆ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಅವರಿಗೆ ಟಿಕೆಟ್ ನೀಡಲಾಗಿದೆ.
ಅಬ್ದುಲ್ ಜಬ್ಬಾರ್ ಎರಡನೇ ಬಾರಿಗೆ ಮತ್ತು ನಾಗರಾಜ ಯಾದವ್ ಮೊದಲ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಮೇಲ್ನೋಟಕ್ಕೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದಂತಾಗಿದೆ.
ಅಲ್ಲಂ ವೀರಭದ್ರಪ್ಪ, ವಿ.ಎಸ್. ಉಗ್ರಪ್ಪ, ಎಸ್.ಆರ್. ಪಾಟೀಲ್ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಅವಕಾಶ ನೀಡಿದೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ (ಮೇ 14) ಅಂತಿಮ ದಿನವಾಗಿದ್ದು, ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ.
ಪರಿಷತ್ ನ ಒಟ್ಟು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಎರಡು ಸ್ಥಾನಗಳ ಪೈಕಿ ಒಂದನ್ನು ಹಿಂದುಳಿದ ವರ್ಗ ಮತ್ತು ಇನ್ನೊಂದನ್ನ ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಸಿದ್ದರಾಮಯ್ಯ ಹೈಕಮಾಂಡ್ ಗೆ ಮನವಿ ಮಾಡಿದ್ದರು ಎನ್ನಲಾಗುತ್ತಿದೆ.