ಬೆಂಗಳೂರು, (www.thenewzmirror.com) :
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯದ ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.
ಮೈಶುಗರ್ ಗೆ ಒಬ್ಬ ಅನುಭವಿ ಹಿರಿಯ ತಜ್ಞರ ನೇತೃತ್ವದಲ್ಲಿ ಸಮೀತಿ ನೇಮಕ ಮಾಡಲಾಗುವುದು. ತಜ್ಞರ ಸಮಿತಿ ಮೂರು ತಿಂಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ವಹಿಸಲಾಗುವುದು. ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಯಂತ್ರೋಪಕರಣಗಳ ದುರಸ್ಥಿಗೆ ಆರ್ಥಿಕ ನೆರವು ನೀಡಲಾಗುವುದು. ಬರುವ ಹಂಗಾಮಿನಿಂದ ಕಬ್ಬು ನುರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಡಿಸ್ಟಿಲರಿ, ಎಥಿನಾಲ್, ಮೊಲ್ಯಾಸಿಸ್, ಕೊ-ಜನರೇಷನ್ ಮತ್ತಿತರ ಉಪ ಉತ್ಪನ್ನಗಳ ತಯಾರಿಕೆ ಪ್ರಾರಂಭಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ತಜ್ಞರು ನೀಡುವ ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ಅಂಶಗಳ ಕುರಿತು ಚರ್ಚಿಸಿ, ಒಪ್ಪಿಗೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.