ಮೇಕೆದಾಟು ಯೋಜನೆ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ: ಎಂ ಬಿ ಪಾಟೀಲ

RELATED POSTS

ಬೆಂಗಳೂರು(www.thenewzmirror.com):ʻಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿರುವುದು ಸರಿಯಲ್ಲ,‌ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಬಂದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ ಹಾಗಾಗಿ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಂತ ರಾಜಕೀಯ ಮಾಡಿಕೊಂಡು ಕೂರಬಾರದು. ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಬೇಕು.ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎನ್ನುವುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕೋಸ್ಕರ ಮೇಕೆದಾಟು ಯೋಜನೆಯನ್ನು ವೃಥಾ ವಿರೋಧಿಸುತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆʼ ಎಂದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೋರಾಟದ ಪ್ರಶ್ನೆಯೇನೂ ಇಲ್ಲ. ಕುಮಾರಸ್ವಾಮಿಯವರು ಈಗ ಕೇಂದ್ರ ಸಂಪುಟದಲ್ಲಿದ್ದಾರೆ. ಅವರು ರಾಜ್ಯಕ್ಕೆ ಸಹಾಯ ಮಾಡಲು ಅವಕಾಶವಿದೆ. ಇದರತ್ತ ನಮ್ಮ ಗಮನವಿರಬೇಕಷ್ಟೆ. ಕ್ಷುಲ್ಲಕ ರಾಜಕಾರಣ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರು.

ದೇವನಹಳ್ಳಿ ಭೂಸ್ವಾಧೀನ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಮತ್ತು ಕೈಗಾರಿಕೆ ಎರಡನ್ನೂ ನಾವು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕೈದು ಮಹತ್ತ್ವದ ಸಭೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶುಕ್ರವಾರ ಸಭೆ ನಡೆಸಿ, ಹತ್ತು ದಿನಗಳ ಕಾಲಾವಕಾಶ ಕೇಳಿದ್ದಾರೆ. ಇದರಲ್ಲಿ ಕಾನೂನು ತೊಡಕಿ ಸಂಗತಿಗಳಿವೆ. ಇವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡುವ ಅಗತ್ಯವಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದೆಲ್ಲ ಇತ್ಯರ್ಥಗೊಳ್ಳಲಿದೆʼ ಎಂದಿದ್ದಾರೆ.

ಮಾಧವಿ ಪಾರೇಖ್ ಅವರಿಗೆ ಚಿತ್ರಕಲಾ ಪರಿಷತ್ ನ  ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ:

ಹಿರಿಯ ಕಲಾವಿದೆ ಮಾಧವಿ ಪಾರೇಖ್ ಅವರಿಗೆ ಚಿತ್ರಕಲಾ ಪರಿಷತ್ ನ  ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಈ ದಿನ ಜರುಗಿದ ಪ್ರೊ. ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಹಿರಿಯ ಕಲಾವಿದೆ ಮಾಧವಿ ಪಾರೇಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಎಂಬಿ ಪಾಟೀಲ್ ಅಭಿನಂದಿಸಿದರು.

ಮಾಧವಿ ಪಾರೇಕ್ ಅವರು ಓರ್ವ ಪ್ರಸಿದ್ಧ ಭಾರತೀಯ ಕಲಾವಿದೆ. ಅವರ ಚಿತ್ರಗಳು ಭಾರತದ ಹಳ್ಳಿಗಾಡಿನ ಜನಪದ ಶೈಲಿ ಹಾಗೂ ಪಾಶ್ಚಾತ್ಯ ತಂತ್ರಗಳನ್ನು  ಅಳವಡಿಸಿಕೊಂಡು ಚಿತ್ರಗಳನ್ನು ರಚಿಸಿದ್ದಾರೆ.  ಅವರ ಕಲಾಕೃತಿಗಳು ವಿಶಿಷ್ಟವಾಗಿದ್ದು, ವಿಶ್ವದ ಹಲವಾರು ದೇಶಗಳಲ್ಲಿ ಪ್ರದರ್ಶಿಸಲ್ಪಟ್ಟಿರುವುದಲ್ಲದೆ, ಬಹುಮಾನಿತವಾಗಿರುವುದು ಎಲ್ಲ ಭಾರತೀಯರೀಗೂ ಹೆಮ್ಮೆಯ ಸಂಗತಿ,ಮಾಧವಿ ಪಾರೆಖ್ ಅವರ ಸಾಧನೆಯು ಇಂದಿನ ಯುವ ಕಲಾವಿದರಿಗೆ ದಾರಿದೀಪವಾಗಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್, ಪ.ಸ.ಕುಮಾರ್, ಎಸ್. ಎನ್. ಅಗರವಾಲ್ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಪಾಲ್ಗೊಂಡಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist