ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ: ಬಿ.ವೈ. ವಿಜಯೇಂದ್ರ

RELATED POSTS

ಶಿವಮೊಗ್ಗ(www.thenewzmirror.com):ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ,ಆಡಳಿತ ಪಕ್ಷದಲ್ಲಿ ಶಾಸಕರು ಮುಖ್ಯಮಂತ್ರಿಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಮುಂದೆ ಯಾರೇ ಮುಖ್ಯಮಂತ್ರಿ ಆದರೂ ರಾಜ್ಯವು ಅಭಿವೃದ್ಧಿ ಕಾಣಲು ಸಾಧ್ಯವಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜಕೀಯ ವಿದ್ಯಮಾನಗಳು ಯಾವ ರೀತಿ ಆಗಲಿದೆ. ಸ್ಥಾನಪಲ್ಲಟ ಯಾವ ರೀತಿ ಆಗಲಿದೆ ಎಂಬುದನ್ನು ನಾವು ಕಾದು ನೋಡುತ್ತೇವೆ. ಸ್ಥಾನಪಲ್ಲಟ ಆದರೆ ನಮಗೇನೂ ವ್ಯತ್ಯಾಸ ಆಗುವುದಿಲ್ಲ; ರಾಜ್ಯದ ಜನರಿಗೂ ವ್ಯತ್ಯಾಸ ಆಗುವುದಿಲ್ಲ; 15 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಯಾರೇ ಮುಖ್ಯಮಂತ್ರಿ ಆದರೂ ರಾಜ್ಯವು ಅಭಿವೃದ್ಧಿ ಕಾಣಲು ಸಾಧ್ಯವಾಗದು ಎಂದರು. 

ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ. ಸುರ್ಜೇವಾಲಾ ಅವರು ಪದೇಪದೇ ಬೆಂಗಳೂರಿಗೆ ಬರುತ್ತಿದ್ದಾರೆ. ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ. ಇವತ್ತು ಮತ್ತೆ ಬಂದಿದ್ದಾರೆ. 3 ದಿನಗಳ ಕಾಲ ಇರುತ್ತಾರೆ. ಡಿ.ಕೆ.ಶಿವಕುಮಾರ್ ಜೊತೆ 100 ಶಾಸಕರಿದ್ದಾರೆ. ಅವರಿಗೂ ಅವಕಾಶ ಕೊಡಬೇಕೆಂಬ ನಾನಾ ಹೇಳಿಕೆ ಬರುತ್ತಿದೆ. ಬಿ.ಆರ್.ಪಾಟೀಲರ ಹೇಳಿಕೆ, ರಾಜು ಕಾಗೆಯವರ ಹೇಳಿಕೆಗಳನ್ನು ಗಮನಿಸಿದರೆ ಆಡಳಿತ ಪಕ್ಷದಲ್ಲಿ ಶಾಸಕರು ಮುಖ್ಯಮಂತ್ರಿಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟ ಎಂದು ವಿಶ್ಲೇಷಿಸಿದರು.

ಸುರ್ಜೇವಾಲಾ ಭೇಟಿ ಹಿಂದೆ ನಿಗದಿತ ಕಾರ್ಯಸೂಚಿ:

ಸಿದ್ದರಾಮಯ್ಯನವರು ಮುಂದುವರೆಯುತ್ತಾರಾ? ಅವರ ಸ್ಥಾನಕ್ಕೆ ಬರುವವರು ಯಾರು? ಎಂಬುದು ಮುಖ್ಯವಲ್ಲ; ಆದರೆ, ಒಂದಂತೂ ಸತ್ಯ. ಸುರ್ಜೇವಾಲಾ ಅವರು ಸುಮ್ಮನೆ ಬರುತ್ತಿಲ್ಲ; ಒಂದು ನಿಗದಿತ ಕಾರ್ಯಸೂಚಿ ಇಟ್ಟುಕೊಂಡೇ ಕರ್ನಾಟಕಕ್ಕೆ ಪದೇಪದೇ ಬರುತ್ತಿದ್ದಾರೆ. ಅದು ಮುಖ್ಯಮಂತ್ರಿಗಳು ಮಾತ್ರವಲ್ಲದೇ ಆಡಳಿತ ಪಕ್ಷದ ಎಲ್ಲರಿಗೂ ಗೊತ್ತಿದೆ ಎಂದು ವಿಜಯೇಂದ್ರ ತಿಳಿಸಿದರು.

ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸರಿಯಾಗಿ ಇರಬಾರದು; ಎರಡು ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರಬೇಕೆಂಬ ದುರುದ್ದೇಶದಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ದುರಂತ ಎಂದು ಶಿವಮೊಗ್ಗದಲ್ಲಿ ವಿಗ್ರಹಗಳಿಗೆ ಅವಮಾನ ಘಟನೆ ಪ್ರಸ್ತಾಪಿಸಿದರು.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ನಡೆದಿದೆ. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೇ ಬೆದರಿಸಿದ ಷಡ್ಯಂತ್ರ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪದೇಪದೇ ಇಂಥ ಅಹಿತಕರ ಘಟನೆ ನಡೆಯುತ್ತಿದೆ. ಟಿಪ್ಪು ಜಯಂತಿ ಸಂದರ್ಭದಲ್ಲಿ ಸಮಸ್ಯೆ ಆಗಿದೆ. ಗಣೇಶ ಹಬ್ಬದ ಸಂದರ್ಭದಲ್ಲೂ ಸಮಸ್ಯೆಗಳು ಆಗುತ್ತಿವೆ. ಇದು ವ್ಯವಸ್ಥಿತ ಷಡ್ಯಂತ್ರ. ಈ ಷಡ್ಯಂತ್ರದ ವಿರುದ್ಧ ರಾಜ್ಯ ಸರಕಾರವು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂಥ ದೇಶದ್ರೋಹಿಗಳಿಗೂ ಧೈರ್ಯ ಬರುತ್ತಿದೆ ಎಂದು ತಿಳಿಸಿದರು.

ಯಾರೇನೇ ಮಾಡಿದರೂ ರಾಜ್ಯ ಸರಕಾರ ನಮ್ಮನ್ನು ಬೆಂಬಲಿಸುತ್ತದೆ; ನಮ್ಮನ್ಯಾರೂ ಅಲ್ಲಾಡಿಸಲು ಆಗುವುದಿಲ್ಲ; ಯಾವುದೇ ಶಿಕ್ಷೆ ಕೊಡಲಾಗದು ಎಂಬಂತಿದೆ. ರಾಜ್ಯದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದುಷ್ಕೃತ್ಯಗಳು ನಡೆಯುತ್ತಿವೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಗಮನಿಸಬೇಕು ಎಂದು ಒತ್ತಾಯಿಸಿದರು.

ಹಾಸನ- ಸರಕಾರದ ಬೇಜವಾಬ್ದಾರಿ

ಹಾಸನ ಜಿಲ್ಲೆಯಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ. ಯುವಜನರು ಪ್ರಾಣ ಕಳಕೊಳ್ಳುತ್ತಿದ್ದಾರೆ. ಅಲ್ಲಿನ ಉಸ್ತುವಾರಿ ಸಚಿವರು ಕಳೆದ 3 ತಿಂಗಳುಗಳಿಂದ ಭೇಟಿ ಕೊಟ್ಟಿಲ್ಲ; ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ರಾಜ್ಯ ಸರಕಾರ ಎಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಡ ಎಂದು ಗಮನ ಸೆಳೆದರು.

ರಾಜ್ಯದ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ರಸ್ತೆಗಳು, ಅಭಿವೃದ್ಧಿ ಕೆಲಸ ಆಗಬೇಕೆಂದಿದ್ದರೆ ಗ್ಯಾರಂಟಿಗಳನ್ನು ನಾವು ನಿಲ್ಲಿಸುತ್ತೇವೆ ಎಂದಿರುವುದೇ ಸ್ಪಷ್ಟ ಪುರಾವೆ ಎಂದು ತಿಳಿಸಿದರು.

ಬಿಜೆಪಿಯವರು ಆರ್ಥಿಕ ಪರಿಸ್ಥಿತಿ ಕುರಿತು ಹೇಳಿದರೆ, ಸರಕಾರಿ ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿ ಇದೆ ಎಂದು ಹೇಳಿದರೆ ಎಲ್ಲವೂ ಸರಿ ಇದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಅವರದೇ ಆರ್ಥಿಕ ಸಲಹೆಗಾರರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಇದು ರಾಯರೆಡ್ಡಿ ಅವರ ಹೇಳಿಕೆ ಅಲ್ಲ; ಸ್ವತಃ ಮುಖ್ಯಮಂತ್ರಿಗಳೇ ಗ್ಯಾರಂಟಿ ಅನುಷ್ಠಾನಕ್ಕೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂಬುದನ್ನು ಹಾಗೂ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಿಲ್ಲ ಎಂಬುದನ್ನು ಅವರ ಮೂಲಕ ಹೇಳಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ನಾಡಿನ ಜನರು ಭ್ರಷ್ಟ, ಜನವಿರೋಧಿ, ರೈತವಿರೋಧಿ ಸರಕಾರಕ್ಕೆ ಮತ ಕೊಟ್ಟು ಅಧಿಕಾರಕ್ಕೆ ತಂದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist