ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: ಸಿಎಂ ಡಿ.ಕೆ.ಶಿವಕುಮಾರ್‌ಗೆ ಬಿ.ವೈ.ವಿಜಯೇಂದ್ರ ಸವಾಲು

ಬೆಂಗಳೂರು(www.thenewzmirror.com): ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಾಗದಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ಎದುರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯುವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

RELATED POSTS

ಕಳೆದ ಎರಡು ವರ್ಷಗಳಿಂದ ಸಿಎಂ ಕುರ್ಚಿಗಾಗಿ ಆಡಳಿತ ಪಕ್ಷದಲ್ಲಿ ಹಗ್ಗಜಗ್ಗಾಟ ನಡೆಯುತ್ತಲೇ ಇತ್ತು. ಈಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 48 ಗಂಟೆಗಳ ಒಳಗಾಗಿ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರ್ಕಾರದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಪಕ್ಷವು ಆಂತರಿಕ ಕಚ್ಚಾಟದಿಂದ ಹೊರಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸರ್ಕಾರದ ನಿರಂತರ ಗೊಂದಲಗಳಿಂದ ಸಾರ್ವಜನಿಕರು ಮತ್ತು ರೈತರು ಬೇಸತ್ತು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಎಲ್ಲ ನಾಯಕರನ್ನು ಒಟ್ಟಿಗೆ ಕೊಂಡೊಯ್ಯುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ.ಕೆ.ಹರಿಪ್ರಸಾದ್ ಅವರ ನಾಲ್ಕು ಪ್ರತ್ಯೇಕ ಅಧಿಕಾರ ಕೇಂದ್ರಗಳ ನಡುವೆ ಸಿಲುಕಿ ಒದ್ದಾಡುತ್ತಿದೆ. ಈ ಭಿನ್ನಮತವು ಮುಖ್ಯಮಂತ್ರಿಗಳ ನಿದ್ದೆಗೆಡಿಸಿದೆ ಎಂದು ಅವರು ಲೇವಡಿ ಮಾಡಿದ್ದಾರೆ. ಬಡವರು ಮತ್ತು ರೈತರ ಕಲ್ಯಾಣವನ್ನು ನಿರ್ಲಕ್ಷಿಸಿರುವ ಸರ್ಕಾರ, ಕೇವಲ ಹೈಕಮಾಂಡ್ ತುಷ್ಟೀಕರಣ ಮತ್ತು ಬೊಕ್ಕಸ ಲೂಟಿ ಮಾಡುವುದರಲ್ಲೇ ನಿರತವಾಗಿದೆ ಎಂದು ವಿಜಯೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸೀನಿಯಾರಿಟಿಗೆ ಬೆಲೆಯಿಲ್ಲ:

ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಬೆನ್ನಲ್ಲೇ ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಜೆ.ಜಾರ್ಜ್ ಕೂಡ ತಮಗೆ ನೀಡಿರುವ ಖಾತೆಗಳ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ ಎಂದು.

ಕಾಂಗ್ರೆಸ್ ನಾಯಕರಿಗೆ ಜನಸಾಮಾನ್ಯರ ಅಭಿವೃದ್ಧಿಗಿಂತ ಅಧಿಕಾರದ ಹಪಾಹಪಿಯೇ ಹೆಚ್ಚಾಗಿದೆ ಎಂದು ಟೀಕಿಸಿರುವ ವಿಜಯೇಂದ್ರ, ಈ ದರಿದ್ರ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ತಕ್ಷಣವೇ ವಿಧಾನಸಭಾ ಚುನಾವಣೆ ನಡೆದು ಈ ಸರ್ಕಾರ ತೊಲಗಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದ್ದರೂ, ಕಸದಿಂದ ರಸ ತೆಗೆಯುವ ಕಲೆ ಗೊತ್ತಿದ್ದರೂ ಹಿರಿಯ ಸಚಿವರನ್ನು ಕಡೆಗಣಿಸಿರುವುದು ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹಿರಿತನ (ಸೀನಿಯಾರಿಟಿ) ಮತ್ತು ಪ್ರಾಮಾಣಿಕತೆಗೆ (ಸಿನ್ಸಿಯಾರಿಟಿ) ಯಾವುದೇ ಬೆಲೆಯಿಲ್ಲ ಎಂಬುದು ಖುದ್ದು ಕೆ.ಎಚ್.ಮುನಿಯಪ್ಪ ಅವರ ಹೇಳಿಕೆಯಿಂದಲೇ ಸಾಬೀತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದ ಮಾತ್ರ ಬಿಜೆಪಿ ಗೆಲ್ಲುವುದಿಲ್ಲ ಎಂದ ಅವರು, ಬಿಜೆಪಿಗೆ ತನ್ನದೇ ಆದ ವರ್ಚಸ್ಸು ಮತ್ತು ಬಲಿಷ್ಠ ಕಾರ್ಯಕರ್ತರ ಪಡೆಯಿದ್ದು, ಮುಂದಿನ ಚುನಾವಣೆಯನ್ನು ಸ್ವಂತ ತಂತ್ರಗಾರಿಕೆಯೊಂದಿಗೆ ಎದುರಿಸಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist