ಬೆಂಗಳೂರು, (www.thenewzmirror.com) ;
ಬೆಂಗಳೂರು ಅಂದಾಕ್ಷಣೆ ನೆನಪಿಗೆ ಬರೋದು ಕೆಂಪೇಗೌಡರು, ಬೆಂಗಳೂರನ್ನ ಕಟ್ಟಿ ಅದನ್ನ ವಿಶ್ವಮಟ್ಟದಲ್ಲೇ ಹೆಸರುಗಳಿಸುವಂತೆ ಮಾಡಿರುವ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತೆ. ಹೀಗಾಗಿಯೇ ಕೆಂಪೇಗೌಡರನ್ನ ನಾಡಫ್ರಭು ಕೆಂಪೇಗೌಡ ಅಂತ ಕರೆಯಲಾಗುತ್ತೆ.
ಬೆಂಗಳೂರನ್ನ ಕಟ್ಟಲು ಕೆಂಪೇಗೌಡರ ಶ್ರಮ ಎಷ್ಟಿದೆಯೋ ಅಷ್ಟೇ ಪರಿಶ್ರಮ ಲಕ್ಷ್ಮೀದೇವಿಯ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಬೆಂಗಳೂರು ನಗರ ನಿರ್ಮಾಣದ ವೇಳೆ ತನ್ನನ್ನೇ ತಾನು ಅರ್ಪಿಸಿಕೊಳ್ಳುವ ಮೂಲಕ, ಬೆಂದಕಾಳೂರು ನಗರದ ನಿರ್ಮಾಣ ಸುಸೂತ್ರವಾಗಿ ಸಾಗುವಂತೆ ಅನುವು ಮಾಡಿದ ಮಹಾ ತ್ಯಾಗಿ ಲಕ್ಷ್ಮೀದೇವಿ.
ಲಕ್ಷ್ಮೀದೇವಿಯು ನಾಡಪ್ರಭು ಕೆಂಪೇಗೌಡರ ಸೊಸೆ. ರಾಜಧಾನಿ ಬೆಂಗಳೂರು ನಗರದ ಕೋಟೆಯ ನಿರ್ಮಾಣದ ಕಾರ್ಯ ಭರದಿಂದ ಸಾಗುವಾಗ ದಕ್ಷಿಣದ ಹೆಬ್ಬಾಗಿಲನ್ನು ನಿಲ್ಲಿಸುವಾಗ ಆ ಬಾಗಿಲಿನ ಸ್ತಂಭಗಳು ಎಷ್ಟೇ ಶಾಸ್ತ್ರೋಕ್ತವಾಗಿ ನಿಲ್ಲಿಸಿದರೂ, ಅವರು ಹಲವಾರು ವಾಸ್ತುಶಿಲ್ಪಿಗಳನ್ನು ಕರೆದು ಸರಿ ಮಾಡಿದರು ಹೆಬ್ಬಾಗಿಲು ಪದೇ ಪದೇ ಕುಸಿದು ಬೀಳುತ್ತಿರುತ್ತದೆ. ಇದರಿಂದ ಕೆಂಪೇಗೌಡರು ಚಿಂತೆಗೀಡಾಗಿದ್ದರಂತೆ . ಗೌಡರು ಆಸ್ಥಾನದ ಪುರೋಹಿತರನ್ನು ಸಂಪರ್ಕಿಸುತ್ತಾರೆ. ಅವರು ತುಂಬು ಗರ್ಭಿಣಿ ಬಲಿ ಕೊಟ್ಟರೆ ಕೋಟೆ ಬಾಗಿಲು ನಿಲ್ಲುತ್ತದೆ ಎಂದು ಪರಿಹಾರ ಸೂಚಿಸುತ್ತಾರೆ. ಆದರೆ ಇದಕ್ಕೆ ಕೆಂಪೇಗೌಡರು ಸುತರಾಂ ಒಪ್ಪುವುದಿಲ್ಲ ಹಾಗೂ ರಾಜಧಾನಿ ನಿರ್ಮಾಣ ಅಪೂರ್ಣವಾದ ಬಗ್ಗೆ ಭಾರೀ ನಿರಾಸೆ ಹೊಂದುತ್ತಾರೆ.
ಈ ವಿಚಾರವೆಲ್ಲಾ ತಿಳಿದವರಾದ ಲಕ್ಷ್ಮೀದೇವಿಯು (ಆಗ ಅವರು ಗರ್ಭಿಣಿಯಾಗಿರುತ್ತಾರೆ) ತಮ್ಮನ್ನೇ ಬಲಿದಾನ ಮಾಡಲು ನಿರ್ಧರಿಸುತ್ತಾರೆ. ಯಾರಿಗೂ ತಿಳಿಸದೇ ದಕ್ಷಿಣ ದ್ವಾರದ ಬಳಿ ತಮ್ಮನ್ನು ತಾವು ಬಲಿದಾನಗೈಯ್ಯುತ್ತಾಳೆ. ಇವರ ಬಲಿದಾನವಾದ ನಂತರ ಹೆಬ್ಬಾಗಿಲ ತೊಂದರೆ ಪರಿಹಾರವಾಗುತ್ತದೆ.
ಮಹಾರಾಣಿಯಾಗಿ ಜೀವನ ನಡೆಸಬೇಕಿದ್ದ ಲಕ್ಷ್ಮೀದೇವಿ ನಾಡಿನ ಪ್ರಜೆಗಳ ಹಿತಕ್ಕಾಗಿ ತನ್ನನ್ನು ಬಲಿದಾನ ಮಾಡಿಕೊಂಡ ಅಪರೂಪದ ರಾಣಿ. ಆಕೆಯ ಸಮಾಧಿ ಸ್ಥಳದಲ್ಲೇ ನಾಡಪ್ರಭುಗಳು ಲಕ್ಷ್ಮೀದೇವಿಯ ಗುಡಿಯನ್ನು ನಿರ್ಮಿಸುತ್ತಾರೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೋರಮಂಗಲದಲ್ಲಿ ಲಕ್ಷ್ಮೀ ದೇವಿಯ ದೇವಸ್ಥಾನ ಇದೆ. ಬಿಬಿಎಂಪಿ ಪ್ರತಿವರ್ಷ ಕೆಂಪೇಗೌಡರ ದಿನಾಚರಣೆ ಆಚರಿಸುವಾಗ ಕೋರಮಂಗಲದಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನ ಸಲ್ಲಿಸುತ್ತಾ ಬರುತ್ತಿದೆ. ಹಾಗೆನೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಹಾತಾಯಿಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಿದೆ.