ಬೆಂಗಳೂರು, (www.thenewzmirror.com) ;
ಬೆಂಗಳೂರಿನಲ್ಲಿರುವ ಪಾರ್ಕ್ ಗಳನ್ನ ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತ ಸಾರ್ವಜನಿಕರ ಬಳಕೆಗೆ ಇದ್ದ ಅವಧಿಯನ್ನ ಇತ್ತೀಚೆಗೆ ಪರಿಷ್ಕರಣೆ ಮಾಡಲಾಗಿತ್ತು. ಬಿಬಿಎಂಪಿ ನಿರ್ಧಾರಕ್ಕೆ ಕೆಲ ಸಾರ್ವಜನಿಕರು ಸಂತಸ ಪಟ್ಟಿದ್ರೆ, ಮತ್ತೆ ಕೆಲವರು ಬೇಸರ ಹಾಗೂ ಆತಂಕ ವ್ಯಕ್ತಪಡಿಸಿದ್ರು.
ದಿನ ಕಳೆದಂತೆ ದಿನವಿಡೀ ಪಾರ್ಕ್ ಸಾರ್ವಜನಿಕರ ಬಳಕೆಗೆ ಅವಕಾಶ ನೀಡಿರುವುದಕ್ಕೆ ವಿರೋಧ ಹೆಚ್ಚಾಗ್ತಿದ್ದು, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ತಕ್ಷಣದಲ್ಲೇ ಉದ್ಯಾನವನಗಳಲ್ಲಿ ಸಾರ್ವಜನಿಕರ ಬಳಕೆಯ ಸಮಯವನ್ನ ಪರಿಷ್ಕರಣೆ ಮಾಡಿ ಅಂತ ಮನವಿ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳಲ್ಲಿ ಸಾರ್ವಜನಿಕರು ವಿಹರಿಸಲು ಮತ್ತು ವಿಶ್ರಾಂತಿ ಪಡೆಯಲು ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸಮಯವನ್ನು ನಿಗದಿಪಡಿಸಿರುವ ಪಾಲಿಕೆಯ ಆದೇಶದಿಂದ ಆಗುತ್ತಿರುವ ಅನಾಹುತಗಳ ಪೈಕಿ, ಕೆಲವು ವಿಚಾರಗಳನ್ನ ಎನ್ ಆರ್ ರಮೇಶ್ ತಾವು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿಯೊಂದು ಉದ್ಯಾನವನವನ್ನು ಹತ್ತಾರು ಲಕ್ಷ ರೂಪಾಯಿಗಳಷ್ಟು ಸಾರ್ವಜನಿಕ ತೆರಿಗೆ ಹಣವನ್ನು ವ್ಯಯಿಸಿ ಅಭಿವೃದ್ಧಿಪಡಿಸಲಾಗಿದ್ದು, ಸದರಿ ಉದ್ಯಾನವನಗಳಲ್ಲಿರುವ ಸಸಿಗಳು ಮತ್ತು ಗಿಡಗಳ ನಿರ್ವಹಣೆಗೆ ಪ್ರತೀ ನಿತ್ಯ ನಾಲ್ಕೈದು ಗಂಟೆಗಳಷ್ಟು ಕಾಲಾವಕಾಶ ಬೇಕಿರುತ್ತದೆ. ವಿಶೇಷವಾಗಿ ಸದರಿ ಉದ್ಯಾನವನಗಳಲ್ಲಿನ ಸಸಿಗಳಿಗೆ – ಗಿಡಗಳಿಗೆ ಪ್ರತೀ ನಿತ್ಯ ಕಡ್ಡಾಯವಾಗಿ ನೀರನ್ನು ಹಾಕಿ ಪೋಷಿಸುವ ಕೆಲಸವನ್ನು ಆಯಾ ಉದ್ಯಾನವನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿಗಳು ಮಾಡಬೇಕಿರುತ್ತದೆ. ಹಾಲಿ ಇರುವ ಸಮಯ ಕಡಿಮೆ ಇರೋದ್ರಿಂದ ಈ ಕಾರ್ಯಗಳನ್ನ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ತಿಳಿಸಿದ್ದಾರೆ.
ಹಾಗೆನೇ ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸಾರ್ವಜನಿಕರ ಬಳಕೆಗೆಂದು ಬೆಳಿಗ್ಗೆ 06 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮತ್ತು ಸಂಜೆ 04 ರಿಂದ ರಾತ್ರಿ 08 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ, ತೊಘಲಕ್ ದರ್ಬಾರನ್ನು ಹೋಲುವ ಪಾಲಿಕೆ ಮುಖ್ಯ ಆಯುಕ್ತರ ಆದೇಶದಿಂದಾಗಿ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಸುಶಿಕ್ಷಿತರಿಗೆ ಅಸಹ್ಯವೆನ್ನಿಸುವ ಘಟನೆಗಳು, ಕಾನೂನುಬಾಹಿರ ಚಟುವಟಿಕೆಗಳು ನಡೆಯುವುದಕ್ಕೆ ಆಸ್ಪದ ಮಾಡಿಕೊಟ್ಟಿದೆ ಅಂತ ಕಿಡಿ ಕಾರಿದ್ದಾರೆ.
ವಿಶೇಷವಾಗಿ ಈ ಸಮಯದಲ್ಲಿ ಕೆಲವು ಯುವಕ / ಯುವತಿಯರು ಸುಶಿಕ್ಷಿತ ನಾಗರಿಕರಿಗೆ ಮುಜುಗರವಾಗುವಂತಹ ರೀತಿಯಲ್ಲಿ ಸಾರ್ವಜನಿಕವಾಗಿ ವರ್ತಿಸುವುದು ಮತ್ತು ಉದ್ಯಾನವನಗಳ ಭದ್ರತಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳು ಸರ್ವೆ ಸಾಮಾನ್ಯವಾಗಿರುತ್ತವೆ. ಆದುದರಿಂದ, ಇಂತಹ ಮುಜುಗರದ ಸನ್ನಿವೇಶಗಳನ್ನು ತಪ್ಪಿಸುವ ದೃಷ್ಟಿಯಿಂದ ಮತ್ತು ಅಪರಾಧ ಪ್ರಕರಣಗಳಿಗೆ ಎಡೆಮಾಡಿಕೊಡುವ ಅವಕಾಶಗಳನ್ನು ತಪ್ಪಿಸುವ ಸಲುವಾಗಿ ಹಾಗೂ ಇದೆಲ್ಲಕ್ಕಿಂತಲೂ ಮಿಗಿಲಾಗಿ ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ನಿರ್ಮಿಸಿರುವ ಉದ್ಯಾನವನಗಳಲ್ಲಿನ ಗಿಡ – ಮರ – ಸಸಿಗಳಿಗೆ ಪ್ರತೀ ನಿತ್ಯ ನಿಯಮಿತವಾಗಿ ನೀರುಣಿಸುವ ಕಾರ್ಯಕ್ಕೆ ತೊಂದರೆಯಾಗದಂತೆ – ಈ ಮೊದಲಿನಂತೆಯೇ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಬೆಳಿಗ್ಗೆ 06 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮತ್ತು ಸಂಜೆ 04 ರಿಂದ ರಾತ್ರಿ 08 ಗಂಟೆಯವರೆಗಿನ ಅವಧಿಯನ್ನು ಮೀಸಲುಗೊಳಿಸಿ ಆದೇಶಿಸಬೇಕೆಂದು ಮತ್ತು ಆ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ನಿರ್ಮಿಸಿರುವ ಉದ್ಯಾನವನಗಳ ಸಮರ್ಪಕ ನಿರ್ವಹಣೆಗೆ ಅನುವು ಮಾಡಿಕೊಡಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಹಾಗೂ ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.