ಬೆಂಗಳೂರು(thenewzmirror.com): ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಯುಜಿಸಿಇಟಿ-25 ಪರೀಕ್ಷೆ ನಡೆಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ನಮೂದಿಸಿದ್ದ ದೋಷಗಳನ್ನು ಸರಿಪಡಿಸಿಕೊಳ್ಳಲು ಸಿಇಟಿ ಪರೀಕ್ಷೆ ನಂತರ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಯುಜಿ ಸಿಇಟಿ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಹೊರನಾಡು ಗಡಿನಾಡು ಕನ್ನಡಿಗರಿಗೆ ಏ.15ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಇದಕ್ಕೆ ಸದ್ಯದಲ್ಲೇ ಪ್ರವೇಶ ಪತ್ರ ಡೌನ್‌ಲೋಡ್ ಗೆ ಅವಕಾಶ ನೀಡಲಾಗುವುದು. ಈ ಪರೀಕ್ಷೆ ಬಳಿಕ ಎಡಿಟಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿಗೆ ಒಟ್ಟು 3,64,778 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 3,44,989 ಮಂದಿ ಶುಲ್ಕ ಪಾವತಿಸಿದ್ದಾರೆ. ಈ ಪೈಕಿ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ (sats) ವ್ಯವಸ್ಥೆ ಮೂಲಕವೇ 1.36 ಲಕ್ಷ ಅಭ್ಯರ್ಥಿಗಳ ದಾಖಲೆಗಳು ಆನ್‌ಲೈನ್‌ನಲ್ಲಿ ಪರಿಶೀಲನೆಗೆ ಒಳಗಾಗಿವೆ. ಹಾಗೆಯೇ 1.64 ಲಕ್ಷ ಮಂದಿ, ಕಾಲೇಜುಗಳಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಂಡು ಅರ್ಹತೆ ಪಡೆದಿದ್ದಾರೆ. ಇನ್ನೂ ಸುಮಾರು 44 ಸಾವಿರ ಅಭ್ಯರ್ಥಿಗಳು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕಿದ್ದು, ಅವರಲ್ಲಿ ಯಾರ ಕ್ಲೇಮ್ ಚೀಟಿಯಲ್ಲಿ ಪರಿಶೀಲನೆ ಆಗಿಲ್ಲ (Not Verified) ಎಂದು ನಮೂದಾಗಿರುತ್ತದೊ ಅಂತಹವರು ಸಂಬಂಧಪಟ್ಟ ಪಿಯು ಕಾಲೇಜು ಅಥವಾ ಹತ್ತಿರದ ಸರ್ಕಾರಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಪರಿಶೀಲನೆ ಮಾಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.