ನಮ್ಮ ನೆಚ್ಚಿನ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ: ಸಿಎಂ ಸಿದ್ದರಾಮಯ್ಯ

RELATED POSTS

ಅಹ್ಮದಾಬಾದ್(www.thenewzmirror.com):ನಮ್ಮ ಹೋರಾಟ ಒಂದು ಪಕ್ಷದ ವಿರುದ್ಧ ಮಾತ್ರವಲ್ಲ. ಅದು ಸರ್ವಾಧಿಕಾರದ  ಹೆಸರಲ್ಲಿ ದೇಶವನ್ನು ವಿಭಜಿಸುವ, ವಿನಾಶಕ್ಕೆ ಕೊಂಡೊಯ್ಯುವ ಮನಸ್ಥಿತಿಯ ವಿರುದ್ಧ ಎಂಬುದನ್ನು ಮನಗಾಣಬೇಕಿದೆ. ಮತ್ತು ಇದಕ್ಕೆ ತಕ್ಕ ಉತ್ತರ ಕರುಣೆ, ಧೈರ್ಯ ಮತ್ತು ಸಮರ್ಪಣೆ  ಮನೋಭಾವದಿಂದ ನಾವು ಮುನ್ನಡೆಯುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ, ನಮ್ಮ ನೆಚ್ಚಿನ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ನಮ್ಮ ಸಂವಿಧಾನದ ಅಡಿಪಾಯಗಳು.  ಈ ಅಡಿಪಾಯಗಳು ಇಂದು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ. ಭಾರತಕ್ಕೆ ಆಹಾರ ನೀಡಲು ಬಿಸಿಲಿನಲ್ಲಿ ಶ್ರಮಿಸುವ ರೈತರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೈತರು ಬೀದಿಗಳಲ್ಲಿ ನಡೆಸಿದ ಹೋರಾಟ , ತಮ್ಮ ಮಕ್ಕಳನ್ನು ಕಳೆದುಕೊಂಡ ರೈತರ ಕೂಗಿಗೆ  ಮೌನದ ಹಾಗೂ ಗುಂಡಿನ ಪ್ರತ್ಯುತ್ತರ ದೊರಕಿದೆ. ಭರವಸೆಗಳನ್ನು ನೀಡಲಾದರೂ , ಒಂದನ್ನೂ ಇದುವರೆಗೆ ಈಡೇರಿಸಲಾಗಿಲ್ಲ. ನಮ್ಮ ಮಹಿಳೆಯರು- ತಾಯಂದಿರು, ಅಕ್ಕತಂಗಿಯರು, ಹೆಣ್ಣುಮಕ್ಕಳು- ಸುರಕ್ಷತೆ , ಘನತೆ ಹಾಗೂ ಸಮಾನ ಅವಕಾಶಗಳ ಬೇಡಿಕೆಯಿರಿಸಿದ್ದಾರೆ. ಆದರೆ ಮೋದಿಯವರ ಭಾರತದಲ್ಲಿ, ಅವರ ಹೋರಾಟದ ಹಕ್ಕನ್ನೂ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಮಣಿಪುರದಿಂದ ಹತ್ರಾಸ್ ನವರೆಗೂ , ಅವರ ನೋವುಗಳನ್ನು ಕಡೆಗಣಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದರು.

ಶತಮಾನಗಳಿಂದ ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದಿರುವ ನಮ್ಮ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಷ್ಟು ಅಂಚಿಗೆ ತಳ್ಳಲಾಗುತ್ತಿದೆ. ದ್ವೇಷದಿಂದ ಸಾಮಾಜಿಕ ವ್ಯವಸ್ಥೆಯನ್ನು ಘಾಸಿಗೊಳಿಸಲಾಗಿದೆ. ಅಭಿವೃದ್ಧಿಯ ರಾಜಕಾರಣವನ್ನು, ವಿಭಜಿಸುವ ರಾಜಕಾರಣವನ್ನಾಗಿ ಬದಲಿಸಲಾಗುತ್ತಿದೆ.ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಬೆಲೆ ಏರಿಕೆ ಹೆಚ್ಚುತ್ತಿವೆ. ‘ಅಚ್ಛೇ ದಿನ್’ ಎಂಬ ಭರವಸೆ ಯೆಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ.ಇದು ನಮಗೆ ಭರವಸೆ ನೀಡಲಾಗಿದ್ದ ನವ ಭಾರತವೇ? ಅಥವಾ   ಸ್ವಾತಂತ್ರ್ಯವನ್ನುಭಯ ಆಕ್ರಮಿಸಿರುವ, ಕಾರ್ಯಕ್ಷಮತೆಯನ್ನು ಪ್ರಚಾರ ಆಕ್ರಮಿಸಿರುವಂತಹ ಒಡೆದ ಭಾರತವೇ? ನಮ್ಮಲ್ಲಿ ಸ್ಪಷ್ಟತೆ ಇರಬೇಕು: ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು. ತ್ಯಾಗ ಹಾಗೂ ಸೇವೆಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮಾತ್ರ , ದೇಶದ ಮೇಲಾಗಿರುವ ಈ ಗಾಯವನ್ನು ಗುಣಪಡಿಸುವ ಹಾಗೂ ಈ ಗಣರಾಜ್ಯವನ್ನು ಮರುನಿರ್ಮಿಸುವ ಶಕ್ತಿಯನ್ನು ಹೊಂದಿದೆ ಎಂದರು.

ಸಂವಿಧಾನದ ಮೇಲೆ ಬಿಜೆಪಿಯ ಹಲ್ಲೆ:

ಇಂದು ಭಾರತ ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ- ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ. ಭಾರತೀಯ ಜನತಾ ಪಕ್ಷವೂ ಕೇವಲ ಅಡಳಿತವನ್ನು ನಡೆಸದೇ ,    ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಗುತ್ತಿದೆ.  ಒಂದೊಮ್ಮೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಹೆಸರಾಗಿದ್ದ ಚುನಾವಣಾ ಆಯೋಗವು , ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ.  ಸಂಸತ್ ನ್ನು ಕೇವಲ ರಬ್ಬರ್ ಸ್ಟ್ಯಾಂಪ್ ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ , ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಮತ್ತು ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧಪಕ್ಷದ ಸಂಸದರನ್ನು ಅಮಾನತ್ತುಗೊಳಿಸಲಾಗುತ್ತಿದೆ. ಬಿಜೆಪಿಯೇತರ ರಾಜ್ಯಸರ್ಕಾರಗಳನ್ನು ಅಭದ್ರಗೊಳಿಸಲು ಸಂವಿಧಾನಬದ್ಧವಾಗಿ ಪಕ್ಷಾತೀತವಾಗಿರಬೇಕಾದ ರಾಜ್ಯಪಾಲರುಗಳನ್ನೂ ರಾಜಕೀಯ ಏಜೆಂಟ್ಸ್ ಗಳಾಗಿ ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವಲ್ಲ. ಧ್ವಜದ ಹೆಸರಿನಲ್ಲಿರುವ  ನಿರಂಕುಶ ಪ್ರಭುತ್ವ, ಸಂವಿಧಾನವನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಬಿಜೆಪಿ , ಅದರ ಆಶಯದಿಂದ ಭಯಭೀತವಾಗಿದೆ. ‘ಭಾರತ್ ಮಾತಾ ಕೀ ಜೈ’ ಎಂದು ಮಂತ್ರಿಸುವ  ಅವರು , ಭಾರತದ ಆತ್ಮವನ್ನೇ ಟೊಳ್ಳುಗೊಳಿಸುತ್ತಿದ್ದಾರೆ. ಈ ಸಂವಿಧಾನವನ್ನು ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರಾಗಿ, ದೇಶಪ್ರೇಮಿಗಳಾಗಿ, ಭಾರತದ ನಾಗರಿಕರಾಗಿ , ಶಕ್ತಿಮೀರಿ ಹೋರಾಡುವುದು ನಮ್ಮ ಆದ್ಯ ಕರ್ತವ್ಯ. ನಮಗೆ ಸಂವಿಧಾನ ಕೇವಲ ಒಂದು ಕಾನೂನಿನ ದಾಖಲೆಯಲ್ಲ , ಅದು ನಮ್ಮ ಗಣತಂತ್ರದ ಜೀವಸೆಲೆ ಎಂದಿದ್ದಾರೆ.

ಒಂದು ದೇಶ, ಒಂದು ಸಂಸ್ಕೃತಿ, ಒಂದು ಪಕ್ಷ:

ಭಾರತ ಕೇವಲ ಒಂದೇ ದನಿಯ ನೆಲವಲ್ಲ-ಇದು ಹಲವು ಸ್ವರಗಳ ಮೇಳವಾಗಿದೆ. ಕರ್ನಾಟಕದ ಜಾನಪದ ಗೀತೆಗಳಿಂದ ತಮಿಳುನಾಡಿನ ಕಾವ್ಯಗಳವರೆಗೆ, ಬಂಗಾಲದ ಹಬ್ಬಗಳಿಂದ ಗುಜರಾತಿನ ಸಂಪ್ರದಾಯದವರೆಗೆ- ನಮ್ಮ ದೇಶದ ಏಕತೆಯು ವಿವಿಧತೆಯಲ್ಲಿ ಅರಳಿದೆ.  ಆದರೆ ಇಂದು, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ. ರಾಜ್ಯಗಳು ಹೇಗೆ ವ್ಯಯಿಸಬೇಕು, ನಾಗರಿಕರು ಏನು ನುಡಿಯಬೇಕು ಮತ್ತು ಯಾರು ಒಳಪಡಲಿದ್ದಾರೆ ಎಂಬುದನ್ನು ನಿಯಂತ್ರಿಸಲಿಚ್ಛಿಸುವ ಬಿಜೆಪಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯದ ಅಪಾಯಕಾರಿ ತ್ರಿಕೋನವನ್ನು ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ.  ಇದು ಬಲವಂತದ ಏಕರೂಪತೆ.  ಈ ಚಿಂತನೆ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ನಮ್ಮ ಸಂಸ್ಥಾಪಕರು ಏಕರೂಪದ ಭಾರತದ ಕಲ್ಪನೆಯನ್ನು ಹೊಂದಿರಲಿಲ್ಲ. ಅವರು ಪ್ರತಿ ಭಾಷೆಯನ್ನು ಗೌರವಿಸುವ , ಪ್ರತಿಯೊಂದು ಸಂಸ್ಕೃತಿಯನ್ನು ಸಂಭ್ರಮಿಸುವ ಹಾಗೂ ಪ್ರತಿಯೊಂದು ಪ್ರದೇಶವನ್ನು ಸದೃಢಗೊಳಿಸುವ ಒಕ್ಕೂಟವ್ಯವಸ್ಥೆಯ ಭಾರತದ ಪರಿಕಲ್ಪನೆಯನ್ನು ಹೊಂದಿದ್ದರು ಎಂದರು.

ಕನ್ನಡ, ತಮಿಳು, ಗುಜರಾತಿ,ತೆಲುಗು, ಅಸ್ಸಾಮಿ, ಪಂಜಾಬಿ ಹಾಗೂ ಇನ್ನಿತರ ಬಾಷೆಗಳು ಕೇವಲ ಭಾಷಾ ಮಾಧ್ಯಮವಾಗಿರದೇ , ಶತಮಾನಗಳ ಜ್ಞಾನದ, ಅಸ್ಮಿತೆಯ ಹಾಗೂ ಪ್ರತಿಷ್ಠೆಯ ಭಂಡಾರವಾಗಿದೆ. ಇವುಗಳನ್ನು, ಕಡೆಗಣಿಸಿದರೆ, ನಮ್ಮ ಜನರ ಆತ್ಮಾಭಿಮಾನವನ್ನು ಘಾಸಿಗೊಳಿಸಿದಂತೆ. ಮಂಡ್ಯದ ರೈತ ಕನ್ನಡದಲ್ಲಿ ಮಾತನಾಡಿದಾಗ, ಕಾಶ್ಮೀರದ ಕವಿಯೊಬ್ಬ ಉರ್ದುವಿನಲ್ಲಿ ಬರೆದಾಗ, ಕೇರಳದ ಮಗುವೊಂದು ಮಲೆಯಾಳಂ ಕಲಿತಾಗ, ಅವರೆಲ್ಲರೂ ಒಂದೇ ಭಾರತೀಯರಾಗಿರುತ್ತಾರೆ. ಯಾವುದೇ ಒಂದು ಭಾಷೆ, ಸಂಸ್ಕೃತಿ, ಪ್ರದೇಶ ಮತ್ತೊಂದಕ್ಕಿಂತ ಕಡಿಮೆಯಿರುವುದಿಲ್ಲ. ಕಾಂಗ್ರೆಸ್ ಎಂದಿಗೂ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಗೌರವಿಸುವ ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ನಂಬಿಕೆಯಿರಿಸಿದೆ. ಅಂತಹ ಭಾರತದಲ್ಲಿ ಮಾತ್ರ ಪ್ರತಿಯೊಬ್ಬ ನಾಗರಿಕನಿಗೂ ತನ್ನದೆಂಬ ಭಾವವನ್ನು ಹೊಂದುತ್ತಾನೆ ಎಂದರು.

‘ಒಂದು ದೇಶ- ಒಂದು ವ್ಯವಸ್ಥೆ’ ಎಂಬುದಕ್ಕೆ ನೀಡಿರುವ ಒತ್ತು , ಕೇವಲ ತಾತ್ವಿಕವಾಗಿರದೇ ,  ಪ್ರಾದೇಶಿಕ ಸ್ವಾತಂತ್ರ್ಯ ಹಾಗೂ ಸಮಾಜಿಕ ನ್ಯಾಯದ ಮೂಲಕ್ಕೆ ಪೆಟ್ಟು ನೀಡುವಂತಹ ನೀತಿಗಳನ್ನು ಹೇರುವ ಮೂಲಕ ಅನುಷ್ಠಾನಗೊಳಿಸುವುದಾಗಿದೆ. ತಮಿಳುನಾಡು ಹಾಗೂ ಕರ್ನಾಟಕ ಮೇಲೆ NEET  ಮಾಡಿರುವ ಪರಿಣಾಮಗಳನ್ನು ನೋಡುವುದಾದರೆ , ಉತ್ತಮವಾಗಿ ಸ್ಥಾಪಿತವಾಗಿದ್ದ , ಗ್ರಾಮೀಣ ,ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಎಲ್ಲರನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ಈಗ ‘ ರಾಷ್ಟ್ರೀಯ ಮಾನದಂಡ’ ದ ಹೆಸರಿನಲ್ಲಿ ಹಾಳುಗೆಡವಲಾಗುತ್ತಿದೆ. NEET  ಎಂಬುದು ಸೇತುವೆಯಾಗದೇ , ಒಂದು ತೊಡಕಾಗಿ ಪರಿಣಮಿಸಿದೆ. NEET  ಈಗ ದುಬಾರಿ ಶಿಕ್ಷಣವನ್ನು ಭರಿಸಲು ಶಕ್ತರಾಗಿರುವ ಪರವಾಗಿದ್ದು , ಸ್ಟೇಟ್ ಬೋರ್ಡ್ ಹಾಗೂ ಗ್ರಾಮೀಣ ಹಿನ್ನಲೆಯ ಪ್ರತಿಭಾವಂತ ಹಾಗೂ ಆರ್ಹ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ.ಅಂತೆಯೇ, ಯುಜಿಸಿಯಿಂದ ತರಲಾಗಿರುವ ಸುಧಾರಣೆಗಳು, ಶಿಕ್ಷಣದ ಮೇಲಿನ ಕ್ರೇಂದ್ರೀಕೃತ ನಿಯಂತ್ರಣ ಸ್ಥಾಪಿಸುವ ಹಾಗೂ  ಜ್ಞಾನ, ಅವಶ್ಯಕತೆ ಹಾಗೂ ಪ್ರತ್ಯೇಕ ರಾಜ್ಯಗಳ ಆಶಯಗಳನ್ನು ಕಡೆಗಣಿಸುವಂತಾಗಿದೆ. ಪಠ್ಯದ ಬಗೆಗಿನ ನಿರ್ಧಾರಗಳು, ಶೈಕ್ಷಣಿಕ ಸ್ವಾತಂತ್ರ್ಯ, ಭಾಷಾ ಆಯ್ಕೆ ಸೇರಿದಂತೆ ಪ್ರತಿ ವಿಷಯದ ಬಗ್ಗೆಯೂ ದೆಹಲಿಯಿಂದ ನಿರ್ದೇಶನ ನೀಡಲಾಗುತ್ತಿದೆ. ಇದರಿಂದಾಗಿ ರಾಜ್ಯಗಳು ತಮ್ಮ ವಿಶಿಷ್ಟ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅವಕಾಶವನ್ನು ಕ್ಷೀಣಿಸುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ  ಅಪಾಯಕಾರಿಯಾಗಿದೆ. ‘ಒಂದು ಅಳತೆ ಎಲ್ಲರಿಗೂ ಸರಿಹೊಂದುವುದಿಲ್ಲ’ ಎಂಬ ಗಾದೆ ಮಾತಿನಂತೆ, ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಚಲನಶೀಲ ರಾಷ್ಟ್ರದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಈ ನೀತಿ , ಕೊಪ್ಪಳದ  ಹಳ್ಳಿಯೊಂದರಲ್ಲಿ ಓದುತ್ತಿರುವ ಹೆಣ್ಣುಮಗಳಿಗೆ ಏನು  ಅರ್ಥ ಕೊಡುತ್ತದೆ? ಬಸ್ತಾರ್ ನಲ್ಲಿರುವ ಬುಡಕಟ್ಟು ಹುಡುಗನಿಗೆ  ಹಾಗೂ ಮಧುರೈನ ದಲಿತ ಕುಟುಂಬದ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಏನು ಅರ್ಥ ಕೊಡುತ್ತದೆ? ವಾಸ್ತವಿಕತೆಯಿಂದ ದೂರವಾದ ಶಿಕ್ಷಣ ವ್ಯವಸ್ಥೆಗಳು , ಈ ವಿದ್ಯಾರ್ಥಿಗಳ ಕನಸುಗಳನ್ನು  ಮೊಟಕುಗೊಳಿಸಿದೆ ಎಂಬ ಅರ್ಥವನ್ನು ಕೊಡುತ್ತಿದೆ. ಶಿಕ್ಷಣವು ಎಂದಿಗೂ ಏಣಿಯಾಗಬೇಕೇ ಹೊರತು ಗೋಡೆಯಾಗಬಾರದು ಎಂಬು ಕಾಂಗ್ರೆಸ್ ನ ನಂಬುಗೆಯಾಗಿದೆ. ಪ್ರತಿಯೊಬ್ಬ ಭಾರತೀಯನನ್ನು ಅವನ ಸ್ವಂತ ಭಾಷೆಯಲ್ಲಿ , ತಮ್ಮದೇ ನೆಲದಲ್ಲಿ, ತಮ್ಮದೇ ರೀತಿನೀತಿಗಳ ಮೂಲಕ ಸದೃಢರನ್ನಾಗಿಸುವ ಶಿಕ್ಷಣವಿರಬೇಕು.ಒಕ್ಕೂಟ ವ್ಯವಸ್ಥೆ ರಾಷ್ಟç ನಿರ್ಮಾಣಕ್ಕೆ ಅಡಚಣೆಯಲ್ಲ: ಅದು ನ್ಯಾಯದ ಅಡಿಪಾಯ

– ಪ್ರತಿ ರಾಜ್ಯಕ್ಕೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಧಿಕಾರ ದೊರಕಲು ಹಾಗೂ ಎಲ್ಲೇ ಹುಟ್ಟಿದ್ದರೂ ಪ್ರತಿ ಮಗುವೂ ಬೆಳೆಯಲು ಹಕ್ಕು ಸಿಗುವಂತಾಗುವ – ನ್ಯಾಯಸ್ಥಾಪನೆಗಾಗಿ ನಾವು ಹೋರಾಡುತ್ತೇವೆ.ಏಕರೂಪತೆಯ ಹೆಸರಿನಲ್ಲಿ ನಮ್ಮ ವೈವಿಧ್ಯತೆಯನ್ನು ಅಳಿಸಿಹಾಕುವ ಪ್ರತಿ ಪ್ರಯತ್ನವನ್ನೂ ನಾವು ವಿರೋಧಿಸಬೇಕು. ಏಕೆಂದರೆ ಭಾರತಕ್ಕೆ ತನ್ನ ಬಲ ದೊರಕಿರುವುದು ಏಕರೂಪತೆಯಿಂದಲ್ಲ-  ಬದಲಿಗೆ ವೈವಿಧ್ಯತೆಯಿಂದ ಸಿಕ್ಕಿದೆ.ಭಾರತದ ಸುಂದರ , ಬಹುತ್ವದ ಆತ್ಮವನ್ನು ಕಾಪಾಡಲು ನಾವು ಇಂದು ಸಂಕಲ್ಪ ಮಾಡೋಣ. ಅದು ಮಾತ್ರವೇ ಭಾರತೀಯತೆ ಮಾರ್ಗ. ಅದುವೇ ಸಾಂವಿಧಾನಿಕ ಮಾರ್ಗ ಎಂದರು.

ಬಿಜೆಪಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಉಸಿರುಗಟ್ಟಿಸುತ್ತಿದೆ:

ಇಂದಿನ ಭಾರತದಲ್ಲಿ, ಬಹುತೇಕ  ಮಾಧ್ಯಮದವರಿಗೆ ಪ್ರಶ್ನೆಗಳನ್ನು ಕೇಳಲು ಸ್ವಾತಂತ್ರ್ಯವಿಲ್ಲ. ಈ ಸರ್ಕಾರದಲ್ಲಿ, ಸ್ವಾತಂತ್ರ್ಯ ಮತ್ತು ಸತ್ಯಕ್ಕೆ ಬದಲಾಗಿ  ಭಯ ಮತ್ತು ಪಕ್ಷಪಾತ ಎಂದು ಪರಿವರ್ತನೆಯಾಗಿದೆ.ಒತ್ತಡ, ಬೆದರಿಕೆ, ಆರ್ಥಿಕವಾಗಿ ಕತ್ತು ಹಿಸುಕುವಿಕೆ ಮತ್ತು ಕೆಲವರನ್ನೇ ಗುರಿಯಾಗಿಸುವುದರ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಪ್ರಚಾರದ ಸಾಧನವಾಗಿ ಪರಿವರ್ತಿಸಲು ಬಿಜೆಪಿ  ಪ್ರಯತ್ನಿಸುತ್ತಿದೆ.ಪ್ರಶ್ನೆ ಮಾಡುವ ವಾಹಿನಿಗಳ ಬಾಯಿ ಮುಚ್ಚಿಸಲಾಗುತ್ತಿದ್ದು, ಸತ್ಯವನ್ನು ಹೇಳುವ ಮಾಧ್ಯಮದವರಿಗೆ ಕಿರುಕುಳ ನೀಡಲಾಗುತ್ತಿದೆ. ಪರ್ಯಾಯ ಧ್ವನಿಗಳಿಗೆ ದೇಶ ದ್ರೋಹದ  ಹಣೆಪಟ್ಟಿ ಹಚ್ಚಲಾಗುತ್ತಿದೆ. ಮಾಧ್ಯಮಗಳು ಎದುರಿಸುತ್ತಿರುವ ತೀವ್ರ ಸವಾಲುಗಳನ್ನು ನಾವು ಗುರುತಿಸಿದ್ದೇವೆ. ಆದರೆ ಭಾರತೀಯ ಪತ್ರಿಕೋದ್ಯಮದ ಆತ್ಮ ಇನ್ನೂ ಜೀವಂತವಾಗಿದೆ. ಮಾಧ್ಯಮವು ಇನ್ನೂ ಧೈರ್ಯಶಾಲಿ, ವಿಮರ್ಶಾತ್ಮಕ ಮತ್ತು ಸತ್ಯಕ್ಕೆ ಬದ್ಧವಾಗಿದೆ.ಈ ಐತಿಹಾಸಿಕ ಘಟ್ಟದಲ್ಲಿ, ಮಾಧ್ಯಮದ ಸ್ನೇಹಿತರಲ್ಲಿ ನಮ್ಮ ವಿನಂತಿ: ಸಂವಿಧಾನದ ಆಶಯಗಳಾದ  ವೈಚಾರಿಕತೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ನಾವು ಒಟ್ಟಾಗಿ ಬೆಂಬಲಿಸೋಣ.ಪಂಡಿತ್ ನೆಹರೂ ಅವರು ಹೇಳಿದಂತೆ-“ ಸ್ವಾತಂತ್ರ್ಯ ಅಪಾಯದಲ್ಲಿದೆ, ನಿಮ್ಮ ಶಕ್ತಿಮೀರಿ ಇದನ್ನು ರಕ್ಷಿಸಿ”ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist