ಅಹ್ಮದಾಬಾದ್(www.thenewzmirror.com):ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿಜವಾದ ಆಡಳಿತ ಎಂದರೇನು ಎಂದು ಇಡೀ ದೇಶಕ್ಕೇ ನಿರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ,ಬಿಜೆಪಿಯು ವಿಭಜನೆ ಮತ್ತು ಬೇರೆಡೆಗೆ ಗಮನ ಸೆಳೆಯುವ ತಂತ್ರಗಳ ಮೇಲೆಯೇ ವಿಜೃಂಭಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನಿಜವಾದ ಆಡಳಿತ ಎಂದರೇನು ಎಂದು ಇಡೀ ದೇಶಕ್ಕೇ ನಿರೂಪಿಸುತ್ತಿದೆ. ಜನರಿಗೆ ಪ್ರಾಶಸ್ತ್ಯ ನೀಡುವ ಮಾದರಿಯೊಂದನ್ನು ನಾವು ರೂಪಿಸಿದ್ದೇವೆ. ತಲೆಬರಹಗಳಲ್ಲ, ದ್ವೇಷವಲ್ಲ- ಆದರೆ ಮನೆಗಳ ನಿರ್ಮಾಣ, ಆರೋಗ್ಯ, ಹಸಿವು ಮುಕ್ತ ಮತ್ತು ಆಶಾದಾಯಕ ರಾಜ್ಯನ್ನು ನಿರ್ಮಿಸಿದ್ದೇವೆ. ನಮ್ಮ ಗ್ಯಾರಂಟಿಗಳ ಮೂಲಕ, ನಾವು ಬದುಕುಗಳನ್ನು ಪರಿವರ್ತಿಸುತ್ತಿದ್ದೇವೆ. _ ತಾತ್ವಿಕವಾಗಿಯೋ, ಕಾಗದದ ಮೇಲೆಯೋ ಅಲ್ಲ, ಆದರೆ ಕೋಟ್ಯಾಂತರ ಕುಟುಂಬಗಳ ಹೃದಯಗಳಲ್ಲಿ ಬದಲಾವಣೆಯನ್ನು ತಂದಿದ್ದೇವೆ. ಗೃಹಜ್ಯೋತಿ ಯೋಜನೆಯು 1.64 ಕೋಟಿ ಮನೆಗಳನ್ನು ಬೆಳಗುತ್ತಿದ್ದು, ಮಾಸಿಕ ಹೊರೆಯನ್ನು ತಗ್ಗಿಸಿದೆ. ಅನ್ನ ಭಾಗ್ಯ ಯೋಜನೆಯು 4.39 ಕೋಟಿ ಜನರಿಗೆ ಆಹಾರ ಒದಗಿಸುತ್ತಿದೆ. ಶಕ್ತಿ ಯೋಜನೆಯು ಮಹಿಳೆಯರಿಗೆ ಸಂಚರಿಸಲು, ಕೆಲಸಕ್ಕೆ ಹೋಗಲು ಮತ್ತು ಘನತೆಯ ಬದುಕನ್ನು ಜೀವಿಸಲು ಅನುವು ಮಾಡಿಕೊಟ್ಟಿದೆ. ಈವರೆಗೆ 430 ಕೋಟಿ ಉಚಿತ ಪ್ರಯಾಣಗಳನ್ನು ಮಾಡಿದ್ದಾರೆ. ಯುವನಿಧಿ ಯೋಜನೆಯು ನಮ್ಮ ನಿರುದ್ಯೋಗಿ ಯುವಕg ಪರವಾಗಿದ್ದು, ಅವರನ್ನು ಕಡೆಗಣಿಸಲಾಗಿಲ್ಲ. ಗೃಹಲಕ್ಷ್ಮಿ ಯೋಜನೆಯು ಪ್ರತಿ ಮಾಹೆ 2000 ರೂ.ಗಳನ್ನು ಒದಗಿಸುವ ಮೂಲಕ 1.25 ಕೋಟಿ ಮಹಿಳೆಯರನ್ನು ಸಬಲರನ್ನಾಗಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇದನ್ನು ಗಮನಿಸಲಾಗಿದೆ. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧ್ಯಕ್ಷರಾದ ಫಿಲೇಮಾನ್ ಯಾಂಗ್ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದು, ವಿಶೇಷವಾಗಿ ಮಹಿಳೆಯರ ಬದುಕಿನಲ್ಲಿ ಅವುಗಳ ಪರಿವರ್ತನಾತ್ಮಕ ಪರಿಣಾಮವನ್ನು ಮೆಚ್ಚಿದ್ದಾರೆ. ಇದು ಕೇವಲ ಆಡಳಿವಲ್ಲ, ಒಳಗೊಳ್ಳುವ ಕಲ್ಯಾಣದಲ್ಲಿ ಜಾಗತಿಕ ನಾಯಕತ್ವ. ಇದು ನಿಜವಾದ ಸಬಲೀಕರಣ. ಸಂವಿಧಾನದ ಆಶಯಗಳಾದ ಜಾತ್ಯಾತೀತ, ಸಮಾಜವಾದಿ, ಕಲ್ಯಾಣ ಪ್ರಜಾಪ್ರಭುತ್ವವಿದು.ನಾವು ಗ್ಯಾರಂಟಿಗಳನ್ನು ಮಾತ್ರ ನೀಡಿಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಗ್ರಾಮೀಣ ಉದ್ಯೋಗ ಮತ್ತು ಕೈಗಾರಿಕೆಗಳ ಮೇಲೂ ಹೂಡಿಕೆ ಮಾಡಿದ್ದೇವೆ. ತನ್ಮೂಲಕ ಯಾವುದೇ ಮಗುವೂ ಹಿಂದುಳಿದಿಲ್ಲ ಮತ್ತು ಯಾವುದೇ ಗ್ರಾಮವೂ ಕಣ್ಮರೆಯಾಗಿಲ್ಲ ಎನ್ನುವುದನ್ನು ಖಾತ್ರಿಪಡಿಸುತ್ತದೆ. ಜವಾಬ್ದಾರಿಯುತ, ಸುಸ್ಥಿರ ಬೆಳವಣಿಗೆಯನ್ನು ಆದ್ಯತೆಯಾಗಿಸಿರುವ ಕರ್ನಾಟಕ, ತನ್ಮೂಲಕ ಹಸಿರು ಆರ್ಥಿಕತೆ, ಪರಿಸರ ಸ್ನೇಹಿ ಕೈಗಾರಿಕಾ ಕ್ಲಸ್ಟರ್ಗಳು ಮತ್ತು ಸುಸ್ಥಿರ ನಗರ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿದೆ. ಭಾರತದ ಅತಿ ಹೆಚ್ಚು ಸೌರಶಕ್ತಿ ಉತ್ಪಾದಿಸುವ ರಾಜ್ಯವಾಗಿದೆಯಲ್ಲದೇ ಪವನಶಕ್ತಿ, ಎಲೆಕ್ಟಿçಕ್ ಸಂಚಾರ ಮತ್ತು ಸುಸ್ಥಿರ ನಗರ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.
ತ್ಯಾಜ್ಯನೀರನ್ನು ಅಂತರ್ಜಲ ಮತ್ತು ನೀರಾವರಿಯನ್ನು ಬೆಂಬಲಿಸಲು ಮರುಬಳಕೆ ಮಾಡುವಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದ್ದು, ಕೃಷಿಯನ್ನು ಬಲಪಡಿಸಲು ಮತ್ತು ನಮ್ಮ ಭವಿಷ್ಯವನ್ನು ಭದ್ರಪಡಿಸಲು ನಾವೀನ್ಯತೆ ಮತ್ತು ಸುಸ್ಥಿರತೆ ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂದು ನಿರೂಪಿಸಿದೆ. ದೇಶದಲ್ಲಿಯೇ ವಸತಿಶಾಲೆಗಳಲ್ಲಿ ಕಲಿಯುತ್ತಿರುವ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಈ ಮೂಲಕ ಗುಣಮಟ್ಟದ ಶಿಕ್ಷಣ ಮತ್ತು ಆರೈಕೆಯು ಅತ್ಯಂತ ಹಿಂದುಳಿದ ಹಾಗೂ ಅಂಚಿನಲ್ಲಿರುವ ಸಮುದಾಯಗಳನ್ನು ತಲುಪುವುದನ್ನು ಖಾತ್ರಿಪಡಿಸಲಾಗುತ್ತಿದೆ.ಮಹಿಳೆಯರನ್ನು ಸಬಲರನ್ನಾಗಿಸಿದಾಗ, ಸಮಾಜವನ್ನು ಪರಿವರ್ತಿಸಬಹುದು. ಆದ್ದರಿಂದ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ನಾವು ಮೀಸಲಿರಿಸಿದ್ದೇವೆ. ಶಿಕ್ಷಣಕ್ಕಾಗಿ 65,000ಕ್ಕೂ ಹೆಚ್ಚು ಕೋಟಿಗಳನ್ನು, ಅಂದರೆ ಆಯವ್ಯಯದ ಶೇ 15% ರಷ್ಟನ್ನು ಮೀಸಲಿರಿಸುವ ಮೂಲಕ ನಾವು ಶಾಲೆಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಿಲ್ಲ, ಪ್ರತಿ ಮಗುವಿನ ಭವಿಷ್ಯದ ಮೇಲೆ ಹೂಡಿಕೆ ಮಾಡುತ್ತಿದ್ದೇವೆ.ಬಂಡವಾಳ ಮೂಲಸೌಕರ್ಯಕ್ಕಾಗಿ 72 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಮೀಸಲಿರಿಸಿ ರಸ್ತೆ, ಸೇತುವೆ, ಆರೋಗ್ಯ ಸೌಲಭ್ಯಗಳು ಮತ್ತು ಸಂಪರ್ಕಗಳನ್ನು ಕಟ್ಟುತ್ತಿದ್ದೇವೆ. ಇವು ಕೇವಲ ರಚನೆಗಳಲ್ಲ, ಒಳಗೊಳ್ಳುವ ಬೆಳವಣಿಗೆಯ ಬುನಾದಿಯಾಗಿದೆ ಎಂದರು.
ಕರ್ನಾಟಕ ರಾಜ್ಯವು ಇಂದು ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಬಲ ಕಾನೂನು ಸುವ್ಯವಸ್ಥೆ ಒಂದೇ ಕಾರಣವಲ್ಲ. ಸೂಕ್ತ ವಾತಾವರಣ ಕಲ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಸೂಕ್ತ ನ್ಯಾಯ ಕಲ್ಪಿಸುವ ಸರ್ಕಾರದ ಪ್ರಯತ್ನಗಳು ಸೇರಿವೆ. ಇಂದಿರಾ ಕ್ಯಾಂಟೀನ್ ಗಳ ಮೂಲಕ ಹಸಿವು ನೀಗುವ ಯತ್ನವನ್ನು ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಷ್ಯನೂ ಹಸಿವೆಯಿಂದಿರದೆ ಹೊಟ್ಟೆ ತುಂಬ ಊಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಸಮರ್ಥ ಆಡಳಿತದೊಂದಿಗೆ ಸ್ಪಂದನಶೀಲ ಆಡಳಿತವೂ ನಮ್ಮದಾಗಿದೆ. ವೋಟ್ ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಸಮಾಜದಲ್ಲಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಯುವ ಜನತೆ, ರೈತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ದಿಸೆಯಲ್ಲಿ ಸ್ಪಂದಿಸುತ್ತಿದೆ. ಇದು ಕರ್ನಾಟಕದ ಮಾದರಿ- ಬಿಜೆಪಿಯ ದ್ವೇಷಪೂರಿತ, ಗಗನಮುಖಿ ಬೆಲೆಗಳ, ಪೊಳ್ಳು ಆಶ್ವಾಸನೆಗಳ ರಾಜಕೀಯದಾಟಕ್ಕೆ ಕರ್ನಾಟಕದ ಶಕ್ತಿಯುತ ಪ್ರತಿರೋಧವಾಗಿದೆ.
ಪ್ರಗತಿ ಮತ್ತು ಧ್ರುವೀಕರಣ ಎಂದು ಬಂದಾಗ ಜನರ ಆಯ್ಕೆ ಮಾಡುವುದು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಪ್ರಗತಿಯ ಹಾದಿಯನ್ನೇ ಎಂಬುದು ಇದರಿಂದ ಸಾಬೀತಾಗುತ್ತದೆ. ರಾಷ್ಟ್ರ ಪುನರ್ ನಿರ್ಮಾಣ ಕಾರ್ಯಕ್ಕೆ ಕರ್ನಾಟಕವು ಹೆಮ್ಮೆಯ ಹೆದ್ದಾರಿಯಾಗಿ ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.