ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರು ನಗರ ವ್ಯಾಪ್ತಿಗೆ ಆನೇಕಲ್ ಸೇರ್ಪಡೆ:ಡಿಕೆ ಶಿವಕುಮಾರ್..!

RELATED POSTS

ಆನೇಕಲ್(www.thenewzmirror.com):ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರು ನಗರ ವ್ಯಾಪ್ತಿಗೆ ಆನೇಕಲ್ ಸೇರ್ಪಡೆ ಮಾಡಲಾಗುತ್ತದೆ,ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಆನೇಕಲ್ ತಾಲ್ಲೂಕು ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಶಿವಣ್ಣ, ಮಾಜಿ ಸಂಸದ ಸುರೇಶ್, ರಮೇಶ್ ಅವರು ನಿಮ್ಮನ್ನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿಸಬೇಕು ಎಂದು ನನ್ನ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ಈ ಬಗ್ಗೆ ಮುಂದೆ ಚರ್ಚೆ ಮಾಡುತ್ತೇನೆ. ನಿಮ್ಮನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಲು ಚರ್ಚೆಯಾಗುತ್ತಿದೆ. ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇನ್ನು ಈ ಭಾಗಕ್ಕೆ ಕಾವೇರಿ ನೀರನ್ನು ಪೂರೈಸಬೇಕು ಎಂದು ಸುರೇಶ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಒತ್ತಡ ಹಾಕುತ್ತಿದ್ದಾರೆ. ಆನೇಕಲ್ ತಾಲೂಕಿಗೆ 30 ಎಂಎಲ್ ಡಿ ನೀರನ್ನು ನೀಡಲು ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ನಾಳೆ ಶಾಸಕ ಶಿವಣ್ಣ ಅವರ ಜತೆ ಚರ್ಚೆ ಮಾಡಲಿದ್ದೇನೆ. ಜಿಗಣಿ, ಆನೇಕಲ್, ಸರ್ಜಾಪುರ, ಬನ್ನೇರುಘಟ್ಟಕ್ಕೆ ಮೆಟ್ರೋ ರೈಲು ಮಾರ್ಗ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ” ಎಂದು ತಿಳಿಸಿದರು. 

“ನಮಗೆ ಆನೇಕಲ್ ಬೇರೆಯಲ್ಲ ಕನಕಪುರ ಬೇರೆಯಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ. ಈ ಕ್ಷೇತ್ರದಲ್ಲಿ ವಿದ್ಯಾವಂತರು, ಪ್ರಜ್ಞಾವಂತರಿದ್ದೀರಿ. ಒಂದೇ ಗ್ರಾಮ ಪಂಚಾಯ್ತಿಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದು, ನಿಮ್ಮ ಜತೆ ನಮ್ಮ ಸರ್ಕಾರ ಇದೆ ಎಂದು ಹೇಳಲು ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಬಂದಿದ್ದೇವೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು, ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕಲಬುರ್ಗಿಯಲ್ಲಿ 1100 ಕೋಟಿ ಮೊತ್ತದ ಯೋಜನೆಗೆ ಭೂಮಿ ಪೂಜೆ ಮಾಡಲಾಗಿದೆ” ಎಂದು ಹೇಳಿದರು.

“ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದೆ. ಈ ತಾಲೂಕಿಗೆ 16 ಕೋಟಿ ನೀಡಲಾಗಿದೆ. 1.22 ಕೋಟಿ ಮಹಿಳೆಯರಿಗ ಗೃಹಲಕ್ಷ್ಮಿ ಹಣ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ ಭತ್ಯೆ ನೀಡಲಾಗುತ್ತಿದೆ. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ನೀಡಿದ್ದಾರಾ?” ಎಂದು ಪ್ರಶ್ನಿಸಿದರು. 

“ಕೋವಿಡ್ ಸಂದರ್ಭದಲ್ಲಿ ರಮೇಶ್ ಅವರ ಮುಖಂಡತ್ವದಲ್ಲಿ ಈ ಪಂಚಾಯ್ತಿಯಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಈ ಪಂಚಾಯ್ತಿಯ ಕಾರ್ಯವೈಖರಿಗೆ ಕೇಂದ್ರ ಬಿಜೆಪಿ ಸರ್ಕಾರ ಕೂಡ ಪ್ರಶಸ್ತಿ ನೀಡಿದೆ. ಇಡೀ ರಾಜ್ಯಕ್ಕೆ ಇದು ಮಾದರಿ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿಯಲ್ಲಿನ ಕಾರ್ಯವನ್ನು ನಾನು ಎಲ್ಲೆಡೆ ಪ್ರಚಾರ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನೀವು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕು. ನಿಮ್ಮಲ್ಲಿ ಕೆಲವರು ಸುರೇಶ್ ಅವರನ್ನು ಸೋಲಿಸಿದರು. ಆದರೂ ಅವರು ನಿಮ್ಮ ಅಭಿವೃದ್ಧಿ ವಿಚಾರದಲ್ಲಿ ಅಪಾರವಾದ ವಿಶ್ವಾಸವಿಟ್ಟು ಶ್ರಮಿಸುತ್ತಿದ್ದಾರೆ” ಎಂದರು.  

“ಈ ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಲ್ಲಿನ ಸದಸ್ಯರು ಮಾಡಿರುವ ಕೆಲಸವನ್ನು ನೋಡಿ ಅಭಿನಂದನೆ ಸಲ್ಲಿಸಲು ನಾನಿಲ್ಲಿಗೆ ಬಂದಿದ್ದೇನೆ. ಈ ಪಂಚಾಯ್ತಿಯಲ್ಲಿ 40 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದು, 25 ಕೋಟಿ ಸಂಗ್ರಹಿಸಿದ್ದೀರಿ. ಅನೇಕ ಅಭಿವೃದ್ಧಿ ಕೆಲಸ ಕೈಗೊಂಡು 5.13 ಕೋಟಿ ಮೊತ್ತವನ್ನು 900 ಫಲಾನುಭವಿಗಳಿಗೆ ನೀಡಲಾಗುತ್ತಿದೆ. 78 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಇಂದು ನಾನು ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕುಸ್ಥಾಪನೆ ಮಾಡಿದ್ದೇವೆ. ನಿಮಗೆ ಪ್ರೋತ್ಸಾಹ ನೀಡಿ ಬೆಳೆಸುವುದು ನಮ್ಮ ಕರ್ತವ್ಯ” ಎಂದರು.

ಸಾವಿರಾರು ಫಲಾನುಭವಿಗಳಿಗೆ ಸಹಾಯ:

“ಕಾಂಗ್ರೆಸ್ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿರುವುದಕ್ಕೆ ಈ ಪಂಚಾಯ್ತಿ ಮಹಾಜನತೆಗೆ ಕೋಟಿ ನಮನ ಸಲ್ಲಿಸುತ್ತೇನೆ. ನಾನು ಹಾಗೂ ಸುರೇಶ್ ನೇರವಾಗಿ ಮಾತನಾಡುತ್ತೇವೆ. ನೇರವಾಗಿ ಮಾತನಾಡಿದರೆ ಶತ್ರುಗಳು ಜಾಸ್ತಿ, ಸುಳ್ಳು ಹೇಳಿದರೆ ಬಹಳ ಜನ ಸ್ನೇಹಿತರಾಗುತ್ತಾರೆ. ನಮಗೆ ಶತ್ರುಗಳು ಜಾಸ್ತಿಯಾದರೂ ಪರ್ವಾಗಿಲ್ಲ, ಕೆಲಸ ಮಾಡುವುದು ಬಹಳ ಮುಖ್ಯ. ಅನೇಕರು ಟೀಕೆ ಮಾಡಬಹುದು. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಸುಮಾರು 78 ರೈತರಿಗೆ 85 ಸಾವಿರ ಮೊತ್ತದ ಹಸುಗಳನ್ನು ನೀಡಲು ಪಂಚಾಯ್ತಿ ಮುಂದಾಗಿದೆ. ನೀವು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಸುಗಳನ್ನು ನೀವು ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ. ನೀವು ಹಸು ಸಾಕದಿದ್ದರೆ ಅದನ್ನು ವಾಪಸ್ ನೀಡಬಹುದು” ಎಂದರು.

“ಇಂದು ಸಂಜೆ ಹಾಲು ಉತ್ಪಾದಕರ ಸಂಘದ ಚುನಾವಣೆ ಸಂಬಂಧ ಶಾಸಕರ ಜತೆ ಚರ್ಚೆ ಮಾಡಲಿದ್ದೇನೆ. ನಾನು ವಿದೇಶಕ್ಕೆ ಹೋಗಿದ್ದಾಗ ನನ್ನ ಮಿತ್ರ ವಿಲಾಸ್ ರಾವ್ ದೇಶಮುಖ್ ಅವರ ಮಗ ಹೇಗೆ ಹಸುವಿನ ಸಗಣಿಯನ್ನು ಸಂಗ್ರಹಿಸಿ ಗೊಬ್ಬರ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂದು ವಿವರಿಸಿದರು. ಈ ವಿಚಾರವಾಗಿ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ರೈತರು ಕೂಡ ಈ ಬಗ್ಗೆ ಆಲೋಚಿಸಬೇಕು” ಎಂದು ಸಲಹೆ ನೀಡಿದರು.

“ಪಶುಸಂಗೋಪನೆ ಮಾಡುತ್ತಿರುವ ರೈತರಿಗೆ ಇಂಡಿ, ಬೂಸ ಬೆಲೆ ಏರಿಕೆ ಹೊರೆಯಾಗುತ್ತಿದೆ. ಹೀಗಾಗಿ ರೈತರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಹಾಲಿನ ದರವನ್ನು 4 ರೂ.ನಷ್ಟು ಏರಿಕೆ ಮಾಡಲಾಗಿದೆ. ಅದಕ್ಕೆ ಬಿಜೆಪಿಯವರು ಜನಾಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪಂಚಾಯ್ತಿಯಿಂದ ರೈತರಿಗೆ ಸರ್ಕಾರಕ್ಕೆ ಸರಿಸಮನಾಗಿ ಪ್ರತಿ ಲೀಟರ್ ಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ” ಎಂದು ಪ್ರಶಂಸಿಸಿದರು.

“ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಸಹಜವಾಗಿ ಏರಿಕೆಯಾಗುತ್ತದೆ. ಹೀಗಾಗಿ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ. ನಾವು ಬಡವರಿಗಾಗಿ ಮನೆ ನಿರ್ಮಾಣ ಮಾಡಿದರೆ ಕೇಂದ್ರ ಸರ್ಕಾರಕ್ಕೆ 18% ಜಿಎಸ್ ಟಿ ಕಟ್ಟಬೇಕಿದೆ. ಜಿಎಸ್ ಟಿ ಹಾಗೂ ಬೆಲೆ ಏರಿಕೆಯಿಂದ ಕೇಂದ್ರ ಬಿಜೆಪಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ. ಈಗ ಚಿನ್ನದ ಬೆಲೆ 1 ಲಕ್ಷ ದಾಟಿದ್ದು, ಬಡವರು ಮಾಂಗಲ್ಯ ಕೊಳ್ಳುವುದು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧ ಜನರು ಧ್ವನಿ ಎತ್ತಬೇಕು” ಎಂದರು.  

“ನನ್ನ ಮಿತ್ರ ವಿಲಾಸ್ ರಾವ್ ದೇಶಮುಖ್ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದು ನಂತರ ಮುಖ್ಯಮಂತ್ರಿಗಳಾದರು. ಬಿ.ಡಿ ಜತ್ತಿ ಅವರು ಕೂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದು, ನಂತರ ರಾಷ್ಟ್ರಪತಿಯಾಗಿದ್ದರು. ನೆಹರೂ ಅವರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದರು. ರಾಜಗೋಪಾಲಚಾರಿ ಅವರು ಪಂಚಾಯ್ತಿ ಸದಸ್ಯರಾಗಿದ್ದರು. ರಾಜಕೀಯದಲ್ಲಿ ಪಂಚಾಯ್ತಿ ಸದಸ್ಯ ಕೂಡ ಯಾವುದೇ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು” ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist