ಬೆಂಗಳೂರು(www.thenewzmirror.com): ಆಪರೇಷನ್ ಸಿಂಧೂರ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಅವರು, ರಾಜ್ಯದಲ್ಲಿ “ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆ. ತಾಂತ್ರಿಕ ಸಿಬ್ಬಂದಿಗಳ ಹೊರತಾಗಿ ಯಾವುದೇ ಪ್ರವಾಸಿಗರಿಗೆ ಅಣೆಕಟ್ಟಿನ ಬಳಿ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದೇವೆ. ಇದು ದೇಶದ ವಿಚಾರ ಸಾರ್ವಜನಿಕರು ಈ ವಿಚಾರವಾಗಿ ಸಹಕಾರ ನೀಡಬೇಕು” ಎಂದು ತಿಳಿಸಿದರು.
ಬೆಂಗಳೂರಿನ ಭದ್ರತೆ ಬಗ್ಗೆ ಕೇಳಿದಾಗ, “ಬೆಂಗಳೂರಿನ ಭದ್ರತೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಸಂದೇಶವನ್ನು ರವಾನಿಸುತ್ತೇವೆ. ದೇಶದ ಐಕ್ಯತೆ ಗಮನದಲ್ಲಿಟ್ಟುಕೊಂಡು ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಚಾರ ಚರ್ಚೆ ಮಾಡಿ ನಂತರ ಮಾಹಿತಿ ನೀಡುತ್ತೇವೆ” ಎಂದರು.
ನೆಲಮಂಗಲದ ಯೋಜನೆ ವಿಚಾರವಾಗಿ ರೈತರು ವಿರೋಧ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಲ್ಲಿ ವಿರೋಧ ಮಾಡುತ್ತಿರುವವರು ರೈತರಲ್ಲ. ಅವರು ರೈತ ವಿರೋಧಿಗಳು ನಾವು ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ನೀರನ್ನು ಸಂಸ್ಕರಿಸಿ ನೀಡುತ್ತಿದ್ದೇವೆ. ಕೋಲಾರಕ್ಕೆ ಹೋಗಿ ನೋಡಲಿ. ವಿರೋಧ ಮಾಡುವವರಿಗೆ ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ಕೆರೆಗಳಿಗೆ ತುಂಬಿಸಿದ ನೀರು ಭೂಮಿಯ ಮೂಲಕ ಇಂಗುವಾಗ ಮತ್ತಷ್ಟು ಶುದ್ಧೀಕರಣವಾಗುತ್ತದೆ. ಆಮೂಲಕ ಅಂತರ್ಜಲ ಏರಿಕೆಯಾಗುತ್ತದೆ. ವೃಷಭಾವತಿ ನೀರು ಅರ್ಕಾವತಿ ಮೂಲಕ ನಮಗೆ ನೀರು ಬರುತ್ತಿಲ್ಲವೇ? ಕನಕಪುರ ಟೌನ್ ನಲ್ಲಿ ಹರಿಯುವ ನೀರು ಇದೇ ಆಗಿದೆ. ನಾವು ಅದನ್ನು ಕುಡಿದು ಗಟ್ಟಿಯಾಗಿಲ್ಲವೇ?” ಎಂದು ತಿರುಗೇಟು ನೀಡಿದರು.