ಬೆಂಗಳೂರು(www.thenewzmirror.com) : ರಾಜ್ಯದಲ್ಲಿರುವ ಸುಮಾರು 40225 ಕೆರೆಗಳು ಹಾಗೂ ಜಲಮೂಲಗಳ ಸಂರಕ್ಷಣೆ ರಾಜ್ಯ ಸರ್ಕಾರ ಬದ್ದವಾಗಿದ್ದು,ಈ ಸಂಬಂಧ ಅಗತ್ಯ ಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ ಹಾಗೂ ಮೀನುಗಾರಿಕಾ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಯೋಜಿಸಿದ್ದ ‘ನಮ್ಮ ಕೆರೆ-2025, ಆರೋಗ್ಯ ಕೆರೆಗಳು ಆರೋಗ್ಯಕರ ಜೀವಗಳು’ ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ಸಂರಕ್ಷಣೆ ಒಂದು ಆಯ್ಕೆ ಅಲ್ಲ. ಅದು ಅವಶ್ಯಕತೆ. ಅದು ಅಭಿಯಾನವಲ್ಲ ಅದು ಜೀವಪಾಲನೆಯ ಹೊಣೆಗಾರಿಕೆಯಾಗಿದ್ದು, ಸುಸ್ತಿರ ಹಾಗೂ ಸಮೃದ್ದ ಕರ್ನಾಟಕ ನಿರ್ಮಾಣದೆಡೆಗಿನ ನಮ್ಮ ನಡಿಗೆಯಲ್ಲಿ, ಜಲ ಮೂಲಗಳ ಪಾತ್ರ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ಜಲ ಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗಾಗಿ ನಮ್ಮ ಕಾಂಗ್ರೆಸ್ ಸರ್ಕಾರದ ವತಿಯಿಂದ ಹಲವಾರು ಕ್ರಮಗಳನ್ನ ಕೈಗೊಳ್ಳಲಾಗಿದೆ. ತ್ಯಾಜ್ಯ ನೀರಿನ ಪರಿಷ್ಕರಣೆಯ ಮೂಲಕ ಅಂತರ್ಜಲ ಹೆಚ್ಚಳದ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿ ಯೋಜನೆಗಳು ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿವೆ. ಈ ವಿಷಯದಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ನಮ್ಮ ಇಲಾಖೆಯ ಅಡಿಯಲ್ಲಿ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ಅಭಿವೃದ್ದಿ ಹಾಗೂ ರೈತರಿಗೆ ಅಗತ್ಯ ನೀರನ್ನು ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕೆರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ನಮ್ಮ ಇಲಾಖೆಯಿಂದ ಕೆರೆಗಳ ಒತ್ತುವರಿ ತೆರವು ಹಾಗೂ ಅವುಗಳ ಸಂರಕ್ಷಣೆಯ ಕಾರ್ಯವನ್ನು ನಡೆಸಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಜಲಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 40225 ಜಲಮೂಲಗಳಿವೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೆರೆಗಳ ಒತ್ತುವರಿಯನ್ನು ತಗೆಸಲಾಗುತ್ತಿದೆ. ಈಗಾಗಲೇ ಸುಮಾರು 12 ಸಾವಿರ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಹಾಗೆಯೇ, ಸ್ವಚ್ಚತೆ ಕಾಪಾಡುವ ಹಾಗೂ ಅಂತರ್ಜಲ ಹೆಚ್ಚಿಸಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮ್ಮೇಳನದಲ್ಲಿ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಎ.ಎಚ್. ರಾಜಾಸಾಬ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಪವಿತ್ರ, ಅಟಲ್ ಭೂಜಲ ರಾಜ್ಯ ಕಾರ್ಯಕ್ರಮ ನಿರ್ವಹಣಾ ಯೋಜನಾ ನಿರ್ದೇಶಕರಾದ ಕಿರಣ್ ಹೆಚ್. ಮಸೂತಿ ಹಾಗೂ ಅಧಿಕಾರಿಗಳು ಮೀನುಗಾರಿಕೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.