ಬೆಂಗಳೂರು(www.thenewzmirror.com): ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಸಹ ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಲು ಮುಂದಾದುದು ಬಹಳ ದುರ್ದೈವದ ಪ್ರಸಂಗ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸರನ್ನು ಗೂಂಡಾಗಳು ಅಟ್ಟಾಡಿಸಿ ಹೊಡೆಯುವ ಪರಿಸ್ಥಿತಿ ಈಗಾಗಲೇ ಬಂದಿದೆ. ಇನ್ನು ಮುಂದೆಯೂ ಬರಲಿದೆ. ಇದೀಗ ಮುಖ್ಯಮಂತ್ರಿಗಳು ಜಿಲ್ಲಾ ಸಹ ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದು, ಆ ಮೂಲಕ ಇಂಥ ಘಟನೆಗೆ ಪೀಠಿಕೆ ಹಾಕಿದಂತಿದೆ ಎಂದು ಆಕ್ಷೇಪಿಸಿದ್ದಾರೆ.
ಕೆಲದಿನಗಳ ಹಿಂದೆ ಒಬ್ಬ ಜಿಲ್ಲಾಧಿಕಾರಿಯನ್ನು ತಾವು ಕುಳಿತ ವೇದಿಕೆ ಮೇಲೆ ಕುಳಿತಿದ್ಯಾಕೆ ಎಂದು ಪ್ರಶ್ನಿಸಿ ವೇದಿಕೆಯಿಂದ ಕೆಳಕ್ಕಿಳಿಸಿದ ಘಟನೆ ನಡೆದಿತ್ತು. ಆಡಳಿತ ನಡೆಸುವ ಅಧಿಕಾರಿಗಳನ್ನು ಈ ರೀತಿ ಸಾರ್ವಜನಿಕವಾಗಿ ಅಗೌರವದಿಂದ ನಡೆಸಿಕೊಂಡರೆ ಸರಕಾರದಲ್ಲಿ ಯಾವ ರೀತಿ ಚಟುವಟಿಕೆ ನಡೆಯುತ್ತದೆ ಎಂಬುದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಬಿಜೆಪಿಯವರಿಗೆ ಸಾರ್ವಜನಿಕವಾಗಿ ಸಮಾರಂಭ ಮಾಡಲು ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಧಮ್ಕಿ ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಧಮ್ಕಿ, ಗೂಂಡಾ ಬೆದರಿಕೆಗಳನ್ನು ನಾವು ಕೇರ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ಪಕ್ಷದಲ್ಲಿ ಇರುವವರು ಜಮ್ಮು- ಕಾಶ್ಮೀರದಲ್ಲಿ ಹೋರಾಟ ಮಾಡಿದವರು. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಮೊದಲು ನೀವು ಕನಕಪುರದಲ್ಲಿ ತಡೆಯೊಡ್ಡಿ ಎಂದು ಸವಾಲು ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್, ಲಕ್ಷ್ಮಿಹೆಬ್ಬಾಳ್ಕರ್, ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಅಧಿಕಾರಿಗಳನ್ನು ನಿಂದಿಸುವುದು ಅಕ್ಷಮ್ಯ ಅಪರಾಧ ಎಂದಿರುವ ಅವರು, ಇದಕ್ಕೆ ಸಿದ್ದರಾಮಯ್ಯನವರ ಸರಕಾರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.