ಬೆಂಗಳೂರು, (www.thenewzmirror.com) :
ತಾವು ಓದಿ ಬೆಳೆದ ಕಾಲೇಜನ್ನು ಮರೆಯದೇ ಅದರ ಉನ್ನತೀಕರಣಕ್ಕೆ ಶ್ರಮಿಸಿದರೆ ಎಂತಹ ಫಲಿತಾಂಶ ಸಿಗಲಿದೆ ಎಂಬುದಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಸಾಕ್ಷಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಒಗ್ಗೂಡಿ ಒಂದು ಕೋಟಿ ರೂ ವೆಚ್ಚದಲ್ಲಿ ಎರಡು ಸುಸಜ್ಜಿತ ವಿಚಾರ ಸಂಕೀರ್ಣ ಸಭಾಂಗಣವನ್ನು ನಿರ್ಮಿಸಿ ವಿಶ್ವವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕಾನೂನು ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಪ್ರೊ.ವಿ.ಬಿ ಕುಟಿನೋ ಅವರ ಹೆಸರನ್ನು ಸಭಾಂಗಣಕ್ಕೆ ನಾಮಕರಣಗೊಳಿಸಿ ಉದ್ಘಾಟಿಸಲಾಗಿದೆ. ಸಂಪೂರ್ಣ ವೆಚ್ಚವನ್ನು ವಿದ್ಯಾರ್ಥಿ ಸಂಘವೆ ಭರಿಸಿದ್ದು,ವಿಶ್ವವಿದ್ಯಾಲಯ ಪೂರಕ ಸಹಕಾರ ನೀಡಿದೆ.
![](https://thenewzmirror.com/wp-content/uploads/2024/02/1000804119-1024x682.jpg)
![](https://thenewzmirror.com/wp-content/uploads/2024/02/1000804118-1024x682.jpg)
![](https://thenewzmirror.com/wp-content/uploads/2024/02/1000804122-1024x682.jpg)
ಪ್ರೊ.ವಿ.ಬಿ.ಕುಟಿನೋ ಸಭಾಂಗಣ ಉದ್ಘಾಟಿಸಿದ ದೆಹಲಿ ಉಚ್ಚ ನ್ಯಾಯಾಲದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು. ಬೆಂ.ವಿ.ವಿ. ಕಾನೂನು ಕಾಲೇಜಿನ ನಂಟು ಪ್ರೊ.ವಿ.ಬಿ. ಕುಟಿನೋ ಅವರ ಸ್ಮರಣೆ ನನ್ನನ್ನು ದೂರದ ದೆಹಲಿಯಿಂದ ಇಲ್ಲಿಯವರೆಗೆ ಬರುವಂತೆ ಮಾಡಿದೆ,1992 ರಲ್ಲಿ ಪ್ರೊ.ವಿ.ಬಿ ಕುಟಿನೋರವರು ಆಡಿದ ಒಂದು ಮಾತು ನನ್ನ ಜೀವನವನ್ನೆ ಬದಲಾಯಿಸಿ, ಇಂದು ದೆಹಲಿಯಲ್ಲಿ ನ್ಯಾಯಮೂರ್ತಿಯಾಗಿ ಕೂರಿಸಿದೆ. ಬೆಂಗಳೂರು ವಿವಿ ಕಾನೂನು ಕಾಲೇಜು ದೇಶದಲ್ಲಿ ಅಗ್ರಮಾನ್ಯ ಕಾಲೇಜಾಗಿ ತಲೆ ಎತ್ತಿ ನಿಂತಿದೆ,ಕಾಲೇಜಿನ ವಿದ್ಯಾರ್ಥಿಗಳು ಇಂದು ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಲ್ಲಿ
ಜಡ್ಜ್, ಲಾಯರ್‌ಗಳಾಗಿ ಕೆಲಸ ಮಾಡುತ್ತಿರುವುದು ಇಡೀ ವಿವಿಗೆ ಹೆಮ್ಮೆ ತರುವಂತದ್ದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್‌ರವರು ಮಾತನಾಡಿ, ಸರ್ಕಾರಿ ಕಾಲೇಜು,ವಿವಿಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಕಾರ್ಪೋರೆಟ್ ಮಾದರಿಯಲ್ಲಿ ಸಭಾಂಗಣ ನಿರ್ಮಿಸಿರುವುದು ಪ್ರತಿಯೊಬ್ಬ ಮಾದರಿ. ಸರ್ಕಾರಿ ಕಾಲೇಜು ಅಂದ್ರೆ ನಮ್ಮ ಕಾಲೇಜು,ನಮ್ಮ ಆಸ್ತಿ.ಹಳೆಯ ವಿದ್ಯಾರ್ಥಿಗಳ ಅದನ್ನರಿತು ಇಂತ ಕಾರ್ಯ ನೆರವೇರಿಸಿರುವುದು ಶ್ಲಾಘನೀಯ. ಸರ್ಕಾರಿ ಕಾಲೇಜಿನ ಮಕ್ಕಳು ಉತ್ತುಂಗಕ್ಕೆ ಏರಲು ನಾವು ಸಹಾಯಕರಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.