ಬೆಂಗಳೂರು, (www.thenewzmirror.com) ;
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ . ಶಿವಕುಮಾರ್ ಬೆಂಗಳೂರಿನ ನಾಗರೀಕರ ಬಗ್ಗೆ ಉಪಕಾರ ಸ್ಮರಣೆ ಇಲ್ಲವೆಂಬ ಹೇಳಿಕೆ ಅಹಂಕಾರದ ಹಾಗೂ ಉದ್ದಟತನದ ಪರಮಾವಧಿ, ಮಂತ್ರಿಗಳಿಗೆ ಬೆಂಗಳೂರಿನ ನಾಗರಿಕರಿಗೆ ಯಾವುದೇ ಬೆಲೆ ಏರಿಸದೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಲು ಅಸಾಧ್ಯವನಿಸಿದರೆ ಕೂಡಲೇ ರಾಜೀನಾಮೆ ಕೊಟ್ಟು ತೊಲಗಲಿ , ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಟೀಕಿಸಿದ್ದಾರೆ.
ಮೈಸೂರು ಮಹಾರಾಜರ ರೀತಿಯಲ್ಲಿ ಡಿ.ಕೆ .ಶಿವಕುಮಾರ್ ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ಅಡವಿಟ್ಟು ಬೆಂಗಳೂರಿಗೆ ನೀರು ಪೂರೈಕೆ ಮಾಡುತ್ತಿದ್ದೇನೆಂಬ ಅಹಂ ಭಾವನೆಯಲ್ಲಿದ್ದಾರೇನೋ ಗೊತ್ತಿಲ್ಲ. ಸರ್ಕಾರಗಳು ನೀರು ಪೂರೈಕೆ ಎಂಬ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಯೋಗ್ಯತೆ ಇಲ್ಲದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬೆಂಗಳೂರಿಗೆ ಸಂಬಂಧವಿಲ್ಲದವರು ಬೆಂಗಳೂರು ಅಭಿವೃದ್ಧಿ ಮಾಡಲು ಹೊರಟಾಗ ಈ ರೀತಿಯ ನಾಚಿಕೆಗೇಡು ಸಂಗತಿಗಳು ಬರುವುದರಲ್ಲಿ ಅನುಮಾನವೇ ಇಲ್ಲ.
ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ರೋಡ್ ಶೋ ಮಾಡುವ ಮೂಲಕ ಅಧಿಕಾರ ಪಡೆದುಕೊಂಡ ಡಿ.ಕೆ. ಈ ಕೂಡಲೇ ಬೆಂಗಳೂರಿಗರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಮೋಹನ್ ದಾಸರಿ ಕಿಡಿಕಾರಿದರು.
ಬೆಂಗಳೂರು ನೀರು ಸರಬರಾಜು ಮಂಡಳಿಯ ವ್ಯಾಪಕ ಭ್ರಷ್ಟಾಚಾರಗಳನ್ನು ತಡೆಗಟ್ಟುವುದನ್ನು ಬಿಟ್ಟು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಬೆಲೆ ಹೆಚ್ಚಿಸಲು ಸರ್ಕಾರ ಮುಂದಾದಲ್ಲಿ ಯಾವುದೇ ಹೋರಾಟಕ್ಕೂ ಆಮ್ ಆದ್ಮಿ ಪಕ್ಷ ಎಲ್ಲಾ ಹೋರಾಟಗಳಿಗೂ ಸನ್ನದ್ಧವಾಗಿದೆ ಎಂದು ಮೋಹನ್ ದಾಸರಿ ಎಚ್ಚರಿಸಿದರು.